ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಆರೋಪಿ ಪವಿತ್ರಾಗೌಡ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಬೆಂಗಳೂರಿನ 59ನೇ ಸಿಸಿಹೆಚ್ (CCH) ಕೋರ್ಟ್‌ನಲ್ಲಿ ನಡೆಯುತ್ತಿದೆ. ಪವಿತ್ರಾಗೌಡ ಪರ ಹಿರಿಯ ವಕೀಲ ಬಾಲನ್ ವಾದ ಮಂಡಿಸಿದ್ದು, ಬಳಿಕ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನಕುಮಾರ್ ವಾದ ಆರಂಭಿಸಿದ್ದಾರೆ.
ಪವಿತ್ರಾಗೌಡ ಪರ ಬಾಲನ್ ವಾದ
ಪವಿತ್ರಾಗೌಡ (Pavithra Gowda) ಮಹಿಳೆಯಾಗಿದ್ದು, ಮಗಳ ಆರೈಕೆ ಮಾಡಬೇಕಿರುವ ಹಿನ್ನೆಲೆ ಜಾಮೀನು ನೀಡಬೇಕು ಎಂದು ಹಿರಿಯ ವಕೀಲ ಬಾಲನ್ ವಾದ ಮಂಡಿಸಿದರು. ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದೆ ಹಾಗೂ ಈಗಾಗಲೇ 1 ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿರುವುದನ್ನೂ ನ್ಯಾಯಾಲಯದ ಗಮನಕ್ಕೆ ತಂದರು.
ಮುಂದುವರಿದು… ಪ್ರಕರಣದಲ್ಲಿ ಬಹುತೇಕ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದ್ದು, ಕೆಲವು ಸಾಕ್ಷಿಗಳು ಸರ್ಕಾರಿ ಸಾಕ್ಷಿಗಳಾಗಿದ್ದಾರೆ. ಹೀಗಾಗಿ ಜಾಮೀನು ನೀಡಿದರೆ ಸಾಕ್ಷಿಗಳಿಗೆ ಯಾವುದೇ ರೀತಿಯ ತೊಂದರೆ ಅಥವಾ ಸಾಕ್ಷ್ಯ ನಾಶ ಮಾಡುವ ಪರಿಸ್ಥಿತಿ ಎದುರಾಗುವುದಿಲ್ಲ ಎಂದು ವಕೀಲರು ವಾದಿಸಿದರು.

ಟ್ರಯಲ್ ವಿಳಂಬವಾಗುತ್ತಿರುವ ಹಿನ್ನೆಲೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದ ಬಾಲನ್, ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ಆದೇಶದಲ್ಲಿನ ಒಂದು ವರ್ಷದ ಜಾಮೀನು ನಿರ್ಬಂಧ ಪವಿತ್ರಾಗೌಡ ಅವರಿಗೆ ಅನ್ವಯಿಸುವುದಿಲ್ಲ ಎಂದು ವಾದಿಸಿದರು.
ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿದ SPP
ಇದಕ್ಕೆ ಪ್ರತಿಯಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನಕುಮಾರ್ ವಾದ ಆರಂಭಿಸಿದರು. ಟ್ರಯಲ್ ವಿಳಂಬವಾಗುತ್ತಿದೆ ಎಂಬ ಕಾರಣ ನೀಡಿ ಜಾಮೀನು ಕೋರುತ್ತಿರುವ ವಾದವನ್ನು SPP ಪ್ರಶ್ನಿಸಿದರು. ಸುಪ್ರೀಂ ಕೋರ್ಟ್ ಒಂದು ವರ್ಷದ ಅವಧಿಯಲ್ಲಿ 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸುವಂತೆ ಸೂಚಿಸಿಸಿದೆ. 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಜಾಮೀನು ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಒಂದು ವರ್ಷದೊಳಗೆ 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳದಿದ್ದಲ್ಲಿ ಮಾತ್ರ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ವಾದಿಸಿದರು. ಈ ನಿರ್ಬಂಧ ಪವಿತ್ರಾಗೌಡ ಅವರಿಗೆ ಮಾತ್ರವಲ್ಲದೆ ಪ್ರಕರಣದಲ್ಲಿರುವ ಎಲ್ಲಾ ಆರೋಪಿಗಳಿಗೂ ಅನ್ವಯಿಸುತ್ತದೆ ಎಂದು ಪ್ರಸನ್ನಕುಮಾರ್ ವಾದಿಸಿದರು.
ಜೈಲಿನಲ್ಲಿ ಪವಿತ್ರಾ ಗೌಡಗೆ ಚಿತ್ರಹಿಂಸೆ ಆರೋಪ
ಇದೇ ವೇಳೆ ಪವಿತ್ರಾಗೌಡ ಪರ ಮತ್ತೋರ್ವ ವಕೀಲ ನಾರಾಯಣಸ್ವಾಮಿ, ಜೈಲಿನಲ್ಲಿ ಪವಿತ್ರಾಗೌಡ ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ನಾವು ಪವಿತ್ರಾಗೌಡ ಅವರನ್ನು ಭೇಟಿಯಾಗಲು ಹೋದ್ರೆ, ಈ ಹಿಂಸೆ ತಡೆಯಲು ಆಗುತ್ತಿಲ್ಲ, ಒಂದು ತೊಟ್ಟು ವಿಷ ಕೊಡಿಸಿ ಅಂತಾರೆ. ಜೈಲಾಧಿಕಾರಿಗಳು ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ ಅಂತಾರೆ. ಬೇರೆ ಪ್ರಕರಣಗಳ ಆರೋಪಿಗಳಿಗೆ ಈ ರೀತಿಯ ಯಾವುದೇ ಸಮಸ್ಯೆ ಇಲ್ಲ. ಆದ್ರೆ ಈ ಪ್ರಕರಣದ ಆರೋಪಿಗಳಿಗೆ ಮಾತ್ರ ಹಿಂಸೆ ನೀಡಲಾಗುತ್ತಿದೆ ಎಂದು ವಕೀಲ ನಾರಾಯಣಸ್ವಾಮಿ ನ್ಯಾಯಾಲಯದಲ್ಲಿ ಹೇಳಿರುವುದಾಗಿ ತಿಳಿದುಬಂದಿದೆ.
ಪತ್ರ ನೀಡಲು ಅವಕಾಶ ನೀಡುವಂತೆ ಮನವಿ
ಪವಿತ್ರಾಗೌಡ ಅವರಿಂದ ಒಂದು ಪತ್ರ ನೀಡಲು ಅವಕಾಶ ಮಾಡಿಕೊಡಬೇಕು ಎಂದು ವಕೀಲ ನಾರಾಯಣಸ್ವಾಮಿ ನ್ಯಾಯಾಲಯಕ್ಕೆ ಮನವಿ ಮಾಡಿದರು. ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆ ಮುಂದುವರಿದಿದ್ದು, ಪವಿತ್ರಾಗೌಡ ಪರ ಹಾಗೂ ಸರ್ಕಾರಿ ಅಭಿಯೋಜಕರ ವಾದಗಳನ್ನು ನ್ಯಾಯಾಲಯ ಆಲಿಸುತ್ತಿದೆ.

