– ರಾಜ್‌ಕುಮಾರ್, ಅಂಬಿ, ವಿಷ್ಣು ಮತ್ತು ರವಿಚಂದ್ರನ್ ದಿಗ್ಗಜ ನಟರೊಂದಿಗೆ ಯಶಸ್ವಿ ಸಿನಿಮಾ ಕೊಟ್ಟ ನಟಿ
ತಮಿಳು ಚಿತ್ರರಂಗದ ಹಿರಿಯ ನಟಿ ರಾಧಾ ಅವರು ತಮ್ಮ ಸಹೋದರಿ ಹಾಗೂ ಬಹುಭಾಷಾ ನಟಿ ಅಂಬಿಕಾ ಮತ್ತು ಸಹೋದರ ಮಲ್ಲಿಕಾರ್ಜುನ ಕುಂಜನ್ ನಾಯರ್ ವಿರುದ್ಧ ಗಂಭೀರ ಆರೋಪ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಮ್ಮ ಚೆನ್ನೈ ನಿವಾಸದಲ್ಲಿ ಇಟ್ಟುಕೊಂಡಿದ್ದ ಸಹಿ ಮಾಡಿದ ಖಾಲಿ ಚೆಕ್‌ಗಳನ್ನ ತಮ್ಮ ಅನುಮತಿಯಿಲ್ಲದೇ ಪಡೆದು, ಅವುಗಳನ್ನು ಬಳಸಿ ಸುಮಾರು 46 ಕೋಟಿ ರೂ. ಹಣ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್ 21ರಂದು ಈ ಸಂಬಂಧದ ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ನಟಿ ರಾಧಾ ಅವರ ಟೀಂ ದೂರಿನ ಪ್ರತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ.
ದೂರಿನಲ್ಲಿ ಏನಿದೆ?
ನಟಿ ರಾಧಾ ಅವರು ವ್ಯವಹಾರಕ್ಕೆ ಸಂಬಂಧಿಸಿದ ಖರ್ಚುಗಳಿಗಾಗಿ IDBI ಬ್ಯಾಂಕ್‌ನಲ್ಲಿ ಚಾಲ್ತಿ ಖಾತೆ ಹೊಂದಿದ್ದರು. ತಮ್ಮ ಚೆನ್ನೈ ನಿವಾಸದಲ್ಲಿರುವ ಕೊಠಡಿಯಲ್ಲಿ ಕೆಲವು ಸಹಿ ಮಾಡಿದ ಖಾಲಿ ಚೆಕ್‌ಗಳನ್ನ ಇಟ್ಟುಕೊಂಡಿದ್ದರು. ಸಂಬಳ, ವಿದ್ಯುತ್ ಸೇರಿದಂತೆ ವಿವಿಧ ಬಿಲ್‌ಗಳು, ತೆರಿಗೆ ಮತ್ತು ತೋಟದ ನಿರ್ವಹಣೆ ಮುಂತಾದ ಪಾವತಿಗಳಿಗೆ, ವಿಶೇಷವಾಗಿ ತಾವು ಪ್ರಯಾಣದಲ್ಲಿರುವ ಸಂದರ್ಭದಲ್ಲಿ ಈ ಚೆಕ್‌ಗಳನ್ನು ಬಳಸುತ್ತಿದ್ದರು.

ಆ ಖಾತೆಯನ್ನು ಆರಂಭದಲ್ಲಿ ARS Garden Studio ಹೆಸರಿನಲ್ಲಿ ನಿರ್ವಹಿಸಲಾಗುತ್ತಿತ್ತು. 2025ರ ಜನವರಿಯಲ್ಲಿ ವ್ಯವಹಾರದ ಹೆಸರನ್ನು RR Gardens ಎಂದು ಬದಲಾಯಿಸಿದ ಬಳಿಕ ಹೊಸ ಚೆಕ್‌ಬುಕ್ ಪಡೆದಿದ್ದಾಗಿ ರಾಧಾ ತಿಳಿಸಿದ್ದಾರೆ. ಹೀಗಾಗಿ ಹಿಂದಿನ ಚೆಕ್‌ಬುಕ್ ಬಳಸುವುದನ್ನ ನಿಲ್ಲಿಸಿದ್ದರೂ, ಹಳೆಯ ಚೆಕ್‌ಗಳು ಮನೆಯಲ್ಲೇ ಉಳಿದಿರುವುದನ್ನ ತಾವು ಮರೆತಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
5 ಚೆಕ್ ಮೂಲಕ 46 ಕೋಟಿ ವಂಚನೆ?
ಸೆಪ್ಟೆಂಬರ್ 17ರಂದು ಬ್ಯಾಂಕ್‌ನಿಂದ ಮಾಹಿತಿ ಬಂದಾಗ ಪ್ರಕರಣ ತಮ್ಮ ಪ್ರಕರಣ ಗಮನಕ್ಕೆ ಬಂದಿದೆ ಎಂದು ರಾಧಾ ದೂರಿನಲ್ಲಿ ತಿಳಿಸಿದ್ದಾರೆ. ತಮ್ಮ ಹಳೆಯ ಚೆಕ್‌ಗಳ ಪೈಕಿ 5 ಚೆಕ್‌ಗಳನ್ನ ಅಂಬಿಕಾ ಅವರ ಹೆಸರಿನಲ್ಲಿ ಒಟ್ಟು 46 ಕೋಟಿ ಮೊತ್ತಕ್ಕೆ ನಗದೀಕರಣಕ್ಕಾಗಿ ಸಲ್ಲಿಸಲಾಗಿತ್ತು ಎಂದು ಬ್ಯಾಂಕ್ ಮಾಹಿತಿ ನೀಡಿದೆ. ತಕ್ಷಣವೇ ಬ್ಯಾಂಕ್‌ಗೆ ಪಾವತಿ ನಿಲ್ಲಿಸುವಂತೆ ಸೂಚಿಸಿದೆ. ಅಂಬಿಕಾ ಅವರಿಗೆ ನಾನು ಯಾವುದೇ ಚೆಕ್‌ಗಳನ್ನ ನೀಡಿಲ್ಲ, ಅಲ್ಲದೇ ಈ ಮೊತ್ತದ ಹಣ ಪಾವತಿಸುವಂತಹ ಯಾವುದೇ ಹಣಕಾಸಿನ ಒಪ್ಪಂದ ಅಥವಾ ವ್ಯವಹಾರ ತಮ್ಮಿಬ್ಬರ ನಡುವೆ ನಡೆದಿಲ್ಲ.

ಈ ಚೆಕ್‌ಗಳಲ್ಲಿ ವಿವರಗಳನ್ನ ತಮ್ಮ ಸಹೋದರ ಮಲ್ಲಿಕಾರ್ಜುನ ಅವರು ತುಂಬಿದ್ದಾರೆ. ಅಂಬಿಕಾ ಮತ್ತು ಮಲ್ಲಿಕಾರ್ಜುನ ಇಬ್ಬರೂ ಸೇರಿಕೊಂಡು ಕಾನೂನುಬಾಹಿರವಾಗಿ ಹಣ ಪಡೆಯಲು ಪ್ರಯತ್ನಿಸಿದ್ದಾರೆ. ನಾನು ಚೆನ್ನೈನಲ್ಲಿ ಇಲ್ಲದ ಸಂದರ್ಭ ನೋಡಿ ನನ್ನ ರೂಮಿಂದ ಈ ಚೆಕ್‌ಗಳನ್ನ ತೆಗೆದುಕೊಳ್ಳಲಾಗಿದೆ ಎಂದು ರಾಧಾ ಆರೋಪಿಸಿದ್ದಾರೆ.
ಕುಟುಂಬದ ಆಸ್ತಿ ವಿಚಾರದಲ್ಲೂ ಆರೋಪ
ಕುಟುಂಬದ ಆಸ್ತಿಗೆ ಸಂಬಂಧಿಸಿದಂತೆ ಮತ್ತೊಂದು ಗಂಭೀರ ಆರೋಪವನ್ನ ರಾಧಾ ಮಾಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ತಮ್ಮ ಆಸ್ತಿ ವಿಚಾರದಲ್ಲಿ ಪ್ರವೇಶಿಸಲು ತನಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ನಟಿ ರಾಧಾ ಹೇಳಿದ್ದಾರೆ. ಆ ಆಸ್ತಿಯಲ್ಲಿ ಬೆಲೆಬಾಳುವ ವಸ್ತುಗಳು, ಆಭರಣಗಳು, ಆಸ್ತಿ ದಾಖಲೆಗಳು ಹಾಗೂ ಇತರ ಪ್ರಮುಖ ದಾಖಲೆಗಳು ಇವೆ ಎಂದು ರಾಧಾ ತಿಳಿಸಿದ್ದಾರೆ.
ತಮ್ಮ ದೂರಿನಲ್ಲಿರುವ ಆರೋಪಗಳ ಕುರಿತು ಸಂಪೂರ್ಣ ತನಿಖೆ ನಡೆಸಿ, ಆರೋಪಗಳು ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ರಾಧಾ ಪೊಲೀಸರನ್ನು ಕೋರಿದ್ದಾರೆ.
1980ರ ದಶಕದ ಜನಪ್ರಿಯ ನಾಯಕಿ ರಾಧಾ
ರಾಧಾ ಅವರು 1981ರಲ್ಲಿ ಭಾರತಿರಾಜ ನಿರ್ದೇಶನದ ‘ಅಲೈಗಳ್ ಓಯಿವತಿಲ್ಲೈ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. 1980ರ ದಶಕದಲ್ಲಿ ತಮಿಳು ಚಿತ್ರರಂಗದ ಪ್ರಮುಖ ನಾಯಕಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು.
ಕಮಲ್ ಹಾಸನ್, ರಜನಿಕಾಂತ್, ಶಿವಾಜಿ ಗಣೇಶನ್ ಮತ್ತು ಕಾರ್ತಿಕ್ ಸೇರಿದಂತೆ ಹಲವು ಪ್ರಮುಖ ನಟರೊಂದಿಗೆ ಅವರು ಅಭಿನಯಿಸಿದ್ದಾರೆ. ‘ಮುದಲ್ ಮರಿಯಾಥೈ’, ‘ಅಮ್ಮನ್ ಕೋವಿಲ್ ಕಿಳಕ್ಕಾಲೇ’, ‘ಮೆಲ್ಲ ತಿರಂದತು ಕಥವು’, ‘ರಾಜಾಧಿ ರಾಜ’ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಚಿತ್ರರಂಗದ ಜೊತೆಗೆ ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲೂ ಅವರು ಕೆಲಸ ಮಾಡಿದ್ದಾರೆ. ‘ಇರಕಲ್’ ಅವರ ಗಮನಾರ್ಹ ಮಲಯಾಳಂ ಚಿತ್ರಗಳಲ್ಲೊಂದು.
ಅಂಬಿಕಾ ಕೂಡ ದಕ್ಷಿಣ ಭಾರತದ ಜನಪ್ರಿಯ ನಟಿ
ರಾಧಾ ಅವರ ಅಕ್ಕ ಅಂಬಿಕಾ ಅವರು ಅವರಿಗಿಂತಲೂ ಮುಂಚೆಯೇ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಮಲಯಾಳಂ, ತಮಿಳು ಮತ್ತು ಕನ್ನಡ ಚಿತ್ರರಂಗಗಳಲ್ಲಿ ಪ್ರಮುಖ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ‘ನೀಲತಾಮರ’, ‘ರಾಜವಿಂಟೆ ಮಗನ್’, ‘ಇರುಪತಾಂ ನೂಟ್ಟಾಂಡು’ ಸೇರಿದಂತೆ ಹಲವು ಜನಪ್ರಿಯ ಮಲಯಾಳಂ ಚಿತ್ರಗಳಲ್ಲಿ ಅಂಬಿಕಾ ನಟಿಸಿದ್ದಾರೆ. ತಮಿಳಿನಲ್ಲಿ ‘ಕಾಕ್ಕಿ ಸಟ್ಟೈ’, ‘ಉಯರ್ನ್ದ ಉಳ್ಳಂ’, ‘ಕಾದಲ್ ಪರಿಚು’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.


