ಬೆಂಗಳೂರು: ವಂದೇ ಮಾತರಂ (Vande Mataram) ಗೀತೆಯ ಎರಡು ಚರಣಗಳನ್ನ ಮಾತ್ರ ಹಾಡುವ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ವಕೀಲ ಗಿರೀಶ್ ಭಾರದ್ವಾಜ್ ಸಲ್ಲಿಸಿದ್ದ ಪಿಐಎಲ್ ಅರ್ಜಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಿತು.
ಅರ್ಜಿದಾರರ ಪರ ಹಿರಿಯ ವಕೀಲ ಅನಗದ್ ಕಾಮತ್ ವಾದ ಮಂಡಿಸಿ, ಕೇಂದ್ರ ಸರ್ಕಾರ ರಾಷ್ಟ್ರೀಯ ಗೀತೆಯ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಮಾತ್ರ ತೀರ್ಮಾನಿಸುವ ಅಧಿಕಾರ ಹೊಂದಿದ್ದು, ಪ್ರತಿ ರಾಜ್ಯ ಸರ್ಕಾರ ಹೊಸದಾಗಿ ಅದೇಶ ಮಾಡಲು ಸಾಧ್ಯವಿಲ್ಲ. ವಂದೇ ಮಾತರಂ ಗೀತೆಯ ಆರು ಚರಣಗಳನ್ನು 3 ನಿಮಿಷ 10 ಸೆಕೆಂಡ್‌ನಲ್ಲಿ ಹಾಡಬೇಕು ಎಂದು ಕೇಂದ್ರ ಕಾಯಿದೆ ರೂಪಿಸಿದೆ. ರಾಜ್ಯ ಸರ್ಕಾರ ತನ್ನ ಸಾಂವಿಧಾನಿಕ ಚೌಕಟ್ಟನ್ನ ಮೀರಿದೆ. ರಾಷ್ಟ್ರಗೀತೆಯನ್ನಾಗಲಿ, ರಾಷ್ಟ್ರೀಯ ಹಾಡನ್ನಾಗಲಿ ವ್ಯಕ್ತಿ ಹಾಡಬೇಕೆಂದಿಲ್ಲ. ಹಾಡಬೇಕು ಅನ್ನಿಸಿದವರು ಹಾಡುತ್ತಾರೆ. ಕೆಲವರು ಹಾಡೋದಿಲ್ಲ. ಸಂವಿಧಾನದ ವಿಧಿ 162 ರಡಿ ರಾಜ್ಯ ಆದೇಶ ಮಾಡಲು ಸಾಧ್ಯವಿಲ್ಲ. ಹೀಗಾಗಿ, ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ಹಿಡಿಯಬೇಕು ಅಂತಾ ವಾದ ಮಂಡಿಸಿದರು. ಇದನ್ನೂ ಓದಿ: `ವಂದೇ ಮಾತರಂ’ಗೆ ಕತ್ತರಿ; ಕಾಂಗ್ರೆಸ್ ವಿರುದ್ಧ ಸಂಸತ್ತಿನಲ್ಲಿ ರಣಕಹಳೆ: ಪ್ರಹ್ಲಾದ್ ಜೋಶಿ
ಕೇಂದ್ರ ಸರ್ಕಾರದ ಪರ ಎಎಸ್‌ಜಿ ಅರವಿಂದ್ ಕಾಮತ್ ವಾದ ಮಂಡಿಸಿ, ವಂದೇ ಮಾತರಂ ಈಗ ರಾಷ್ಟ್ರೀಯ ಹಾಡು ಎಂದು ಪರಿಗಣಿಸಲ್ಪಟ್ಟಿದೆ. ಏ.9 ರಂದು ಸುಪ್ರೀಂ ಕೋರ್ಟ್ ಮುಂದೆ ಪಿಐಎಲ್ ವಿಚಾರಣೆಗೆ ಬಂದಿತ್ತು. ಸುಪ್ರೀಂ ಕೋರ್ಟ್ ಎಷ್ಟು ಪ್ಯಾರಾ ಹಾಡಬೇಕೆಂಬ ಬಗ್ಗೆ ತೀರ್ಮಾನಿಸಿಲ್ಲ. ವಂದೇ ಮಾತರಂ ಹಾಡುವಾಗ ದನಿಗೂಡಿಸದೇ ಗೌರವಿಸುವ ಬಗ್ಗೆ ಹೇಳಿದೆ. ಆಗ ಕಾಯ್ದೆಯ ರಕ್ಷಣೆಯಿರಲಿಲ್ಲ, ಈಗ ಕಾಯ್ದೆಯ ರಕ್ಷಣೆ ಇದೆ. ವಂದೇ ಮಾತರಂ ಎಷ್ಟು ಪ್ಯಾರಾ ಇರಬೇಕೆಂದು ಕೇಂದ್ರ ಸರ್ಕಾರವಷ್ಟೇ ಹೇಳಬೇಕು. ವಂದೇ ಮಾತರಂ ಹಾಡುವ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸಬೇಕು ಅಂತಾ ವಾದಿಸಿದರು.
ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಜರಾಗಿ, 1932 ರಿಂದ ಇಲ್ಲಿಯವರೆಗೆ ಎರಡು ಚರಣ ಮಾತ್ರ ಹಾಡಲಾಗ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಂದೇ ಮಾತರಂ ಗೀತೆಯನ್ನ ಪ್ರಶ್ನಿಸಲಾಗಿತ್ತು. ಕೇಂದ್ರ ಸರ್ಕಾರ ಇದು ಕಡ್ಡಾಯವಲ್ಲವೆಂದು ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಜನಗಣಮನ ಕಡ್ಡಾಯ, ವಂದೇ ಮಾತರಂ ಕಡ್ಡಾಯವಲ್ಲವೆಂದು ಹೇಳಿದೆ. ಇದೇ ಪ್ರಕರಣ ಇಂದು ಸುಪ್ರೀಂ ಮುಂದೆ ಬಂದಿದೆ. ಹೀಗಾಗಿ, ಮೂರು ವಾರ ಮುಂದೂಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ಪರಿಷತ್‌ನಲ್ಲಿ 2 ಚರಣಕ್ಕೆ ವಂದೇ ಮಾತರಂ ಹಾಡೋದನ್ನು ನಿಲ್ಲಿಸಿದ ಕಾಂಗ್ರೆಸ್ ನಾಯಕರು – ಬಿಜೆಪಿ ಆಕ್ರೋಶ
ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಅನುಶಿವರಾಮನ್‌ಮತ್ತು ಟಿ.ಪಿ.ವಿವೇಕಾನಂದ ಪೀಠವು ಮೂರು ವಾದ-ಪ್ರತಿವಾದ ಆಲಿಸಿ ಮೂರು ವಾರಗಳ ಕಾಲ ವಿಚಾರಣೆ ಮುಂದೂಡಿದೆ.

