– ಇದು ಹಿಟ್ಲರ್ ಸರ್ಕಾರ, ಯಾಕೆ ಗೀತೆ ಪೂರ್ತಿ ಹಾಡಲ್ಲ ಅಂತ ಬಿಜೆಪಿ ಕಿಡಿ
ಬೆಂಗಳೂರು: ಪರಿಷತ್ ಕಲಾಪದ ವೇಳೆ ಆಡಳಿತ ಹಾಗೂ ವಿಪಕ್ಷಗಳ ನಡುವೆ ವಂದೇ ಮಾತರಂ (Vande Mataram) ಗೀತೆ ಜಟಾಪಟಿ ಜೋರಾಗಿದೆ. ಎರಡೇ ಚರಣಕ್ಕೆ ವಂದೇ ಮಾತರಂ ಗೀತೆ ಸ್ಥಗಿತದ ಕಾಂಗ್ರೆಸ್ ನಿಲುವಿಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಕಲಾಪ ಆರಂಭ ಆಗುತ್ತಿದ್ದಂತೆ ವಂದೇ ಮಾತರಂ ಗೀತೆ ಪ್ರಸ್ತುತಿ ಪಡಿಸಲಾಯಿತು. ಕಾಂಗ್ರೆಸ್ ನಾಯಕರು ಎರಡೇ ಚರಣಕ್ಕೆ ವಂದೇ ಮಾತರಂ ಗೀತೆ ಸ್ಥಗಿತಗೊಳಿಸಿದರು. ಆದರೆ, ಬಿಜೆಪಿ ಸದಸ್ಯರು ಗೀತೆಯನ್ನು ಪೂರ್ಣ ಹಾಡಲು ಮುಂದಾದರು. ಈ ನಡುವೆ ಸಭಾಪತಿ ಸಂವಿಧಾನ ಪೀಠಿಕೆ ಓದಿದರು. ವಂದೇ ಮಾತರಂ ಗೀತೆ ಪೂರ್ತಿ ಹಾಡಿದ ಬಳಿಕ ಬಿಜೆಪಿ ಸದಸ್ಯರು ಸಂವಿಧಾನ ಪೀಠಿಕೆ ಓದಿದರು. ಇದನ್ನೂ ಓದಿ: ಇಂದಿನಿಂದ 3 ದಿನ ವಿಶೇಷ ಅಧಿವೇಶನ – ಕಸ್ತೂರಿ ರಂಗನ್ ವರದಿ, ಬರದ ಬಗ್ಗೆ ಚರ್ಚೆ
ಸಚಿವ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ನಮ್ಮ ಸರ್ಕಾರ ವಂದೇ ಮಾತರಂ ಗೀತೆ 2 ಪ್ಯಾರ ಓದಬೇಕು ಅಂತ ತೀರ್ಮಾನ ಮಾಡಿದೆ. ನಮ್ಮ ಸರ್ಕಾರದ ಕಾರ್ಯಕ್ರಮದಲ್ಲಿ ಎರಡು ಪ್ಯಾರ ಹಾಡ್ತೀವಿ. ಪ್ರಧಾನಿ, ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಪೂರ್ತಿ ಹಾಡ್ತೀವಿ. ನಮ್ಮ ಕಾರ್ಯಕ್ರಮದಲ್ಲಿ ಹಾಡಲ್ಲ ಎಂದರು. ಆಗ ಬಿಜೆಪಿ ಸದಸ್ಯರು, ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ಸರ್ಕಾರಕ್ಕೆ ಧಿಕ್ಕಾರ ಕೂಗಿದರು.
ಬಿಜೆಪಿ ರವಿಕುಮಾರ್ ಮಾತನಾಡಿ, ಸದನದಲ್ಲಿ ಪೂರ್ತಿ ವಂದೇ ಮಾತರಂ ಹಾಕಲಾಯ್ತು. ಈಗ ಯಾಕೆ ಎರಡು ಪ್ಯಾರ ಹಾಕಿದ್ದು. ಇದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು. ಆಡಳಿತ-ವಿಪಕ್ಷಗಳ ನಡುವೆ ಗಲಾಟೆ ಜೋರಾಯ್ತು.
ಬಿ.ಕೆ.ಹರಿಪ್ರಸಾದ್ ಮಧ್ಯಪ್ರವೇಶಿಸಿ, ಈ ಸದನದಲ್ಲಿ ಎರಡೇ ಪ್ಯಾರ ಹಾಡುತ್ತಿದ್ದಿದ್ದು. ಬಿಜೆಪಿ ಸಭಾಪತಿ ಬಂದಾಗ ಪೂರ್ತಿ ಹಾಡೋಕೆ ಶುರು ಮಾಡಿದ್ದು. ಈ ಸದನದಲ್ಲಿ ಚರ್ಚೆ ಆಗಲಿ. ಯಾಕೆ ಎರಡು ಪ್ಯಾರ ಹಾಡಬೇಕು ಅಂತ ಚರ್ಚೆ ಆಗಲಿ ಎಂದರು. ಹರಿಪ್ರಸಾದ್ ಮಾತಿಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದು ಕಾಂಗ್ರೆಸ್ ಕಚೇರಿ ಅಲ್ಲ. ಇದು ಹಿಟ್ಲರ್ ವರ್ತನೆ. ಯಾಕೆ ಪೂರ್ತಿ ಹಾಡಲ್ಲ ಎಂದು ಕಿಡಿಕಾರಿದರು.
ಸಭಾಪತಿ ಏನು ಮಾಡೋಕೆ ಆಗೊಲ್ಲ. ಸರ್ಕಾರ ಆದೇಶ ಮಾಡಿದೆ ಎಂದು ಯತೀಂದ್ರ ಸ್ಪಷ್ಟಪಡಿಸಿದರು. ಸಿ.ಟಿ.ರವಿ ಮಾತನಾಡಿ, ಸಭಾಪತಿ ಹೆಲ್ಪ್ ಲೆಸ್ ಹಾಗಾದ್ರೆ ಅಂತ ಪ್ರಶ್ನಿಸಿದರು. ಯತೀಂದ್ರ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು. ಸಭಾ ನಾಯಕರಿಗೆ ಸದನದ ಬಗ್ಗೆ ಗೊತ್ತೇ ಇಲ್ಲ. ಸಭಾಪತಿಗಳಿಗೆ ಏನು ಮಾಡೋಕೆ ಆಗಿಲ್ಲ ಎಂದರೆ ಹೇಗೆ? ಸಭಾಪತಿಗಳ ಕೈಯಲ್ಲಿ ಏನು ಇಲ್ಲ ಅಂತ ಸಭಾ ನಾಯಕ ಹೇಳ್ತಾರೆ. ನೀವು ಕಾಂಗ್ರೆಸ್ ಸಭಾಪತಿಗಳಾ? ಇವರಿಗೆ ಕಾನೂನು ಗೊತ್ತಿಲ್ಲ. ಇದಕ್ಕೆ ಸಭಾಪತಿಗಳು ಸ್ಪಷ್ಟೀಕರಣ ಕೊಡಿ ಎಂದು ಛಲವಾದಿ ಗರಂ ಆದರು. ಕಡತ ನೋಡಾದಾಗಿ ಸಭಾಪತಿ ಹೇಳಿದರು.
ನನ್ನ ಹೇಳಿಕೆ ತಪ್ಪು ಎಂದಿದ್ದಾರೆ ನಾನು ಸ್ಪಷ್ಟನೆ ಕೊಡ್ತೀನಿ ಅಂತ ಯತೀಂದ್ರ ತಿಳಿಸಿದರು. ನಿಮ್ಮ ಸ್ಪಷ್ಟನೆ ಬೇಡ, ಸಭಾಪತಿ ಮಾತಾಡಲಿ ಎಂದ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು. ಇದು ಅವಿವೇಕದ ಪರಮಾವಧಿ ಎಂದು ಕಿಡಿಕಾರಿದರು. ಸಿ.ಟಿ.ರವಿ, ಸಭಾಪತಿ ಪೀಠ ಸಂವಿಧಾನ ಪೀಠವೋ? ಕಾಂಗ್ರೆಸ್ ಪೀಠವೋ ಎಂದು ಪ್ರಶ್ನಿಸಿದರು.

