ಕೊಪ್ಪಳ: ಎಲ್ಲಾ ಧರ್ಮಗಳಿಗಿಂತ ಇಸ್ಲಾಂ(Islam) ಧರ್ಮ ಶ್ರೇಷ್ಠ ಎಂಬ ತಮ್ಮ ಹಿಂದಿನ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ (Basavaraj Rayareddy) ಅವರು ಈ ಕುರಿತು ಯಲಬುರ್ಗಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ‘ಶರಣ ತತ್ವವೇ ಜಗತ್ತಿನಲ್ಲಿ ಅತ್ಯುತ್ತಮ ಎಂದು ಹೇಳಿರುವ ಅವರು, ಬಸವಣ್ಣನವರ “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ” ಎಂಬ ವಚನವನ್ನು ಉಲ್ಲೇಖಿಸಿದ್ದಾರೆ.
ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ರಾಯರೆಡ್ಡಿ, “ನಾನು ಎಲ್ಲ ಧರ್ಮಗಳೂ ಶ್ರೇಷ್ಠ ಎಂದೇ ಹೇಳಿದ್ದೇನೆ, ಇದರಲ್ಲಿ ತಪ್ಪೇನಿದೆ? ಇಸ್ಲಾಂನಲ್ಲಿ ಶ್ರೇಷ್ಠ ವಿಚಾರಗಳಿವೆ ಎಂದಿದ್ದೇನೆಯೇ ಹೊರತು, ಬೇರೆ ಧರ್ಮಗಳು ಕಡೆ ಎಂದು ಹೇಳಿಲ್ಲ. ಯಾವುದೇ ಕಾರ್ಯಕ್ರಮಕ್ಕೆ ಹೋದಾಗ ಸಾಂದರ್ಭಿಕವಾಗಿ ಮಾತನಾಡುತ್ತೇವೆ. ನಾನು ಇಸ್ಲಾಂ, ಕ್ರೈಸ್ತ, ಯಹೂದಿ ಸೇರಿದಂತೆ ಎಲ್ಲಾ ಧರ್ಮಗಳ ಇತಿಹಾಸ ಮತ್ತು ವಿಚಾರಗಳನ್ನು ಅಧ್ಯಯನ ಮಾಡುತ್ತೇನೆ. ಏಸು ಕ್ರಿಸ್ತನ ಸಮಾಧಿಗೂ ಹೋಗಿ ಬಂದಿದ್ದೇನೆ. ಆದರೆ ನಾನು ಯಾವುದೇ ಒಂದು ಧರ್ಮದ ಫಾಲೋವರ್ ಅಲ್ಲ. ನನಗೆ ಯಾವುದೇ ಧರ್ಮವಿಲ್ಲ. ಮಠ-ಮಾನ್ಯಗಳಿಗೆ ಸಾಮಾನ್ಯವಾಗಿ ಹೋಗುವುದಿಲ್ಲ, ಪತ್ನಿ-ಮಕ್ಕಳು ಅಥವಾ ಜೊತೆಗಿರುವವರ ಒತ್ತಾಯಕ್ಕೆ ಹೋಗುತ್ತೇನೆ” ಎಂದರು.
ಹಿಂದೂ ಎಂಬುದು ಸಿಂಧೂ ನದಿ ಭಾಗದಿಂದ ಬಂದ ಹೆಸರು. ಜಗತ್ತಿನ ಬಹುತೇಕ ಧರ್ಮಗಳಿಗೆ ಸಂಸ್ಥಾಪಕರಿದ್ದಾರೆ. ಆದರೆ ಹಿಂದೂ ಧರ್ಮಕ್ಕೆ ನಿರ್ದಿಷ್ಟ ಸಂಸ್ಥಾಪಕರಿಲ್ಲ. ಇದು ಜನರಿಂದಲೇ ರೂಪಿತವಾಗಿರುವಂತದ್ದು. ಇನ್ನು ಹಜ್‌ಗೆ ಹೋಗುವ ಆಸೆ ವ್ಯಕ್ತಪಡಿಸಿದ್ದೆ, ಆದರೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂಬುದು ಗೊತ್ತು ಎಂದು ಹೇಳಿದರು. ಇದನ್ನೂ ಓದಿ: ಇಸ್ಲಾಂ ಅತ್ಯಂತ ಶ್ರೇಷ್ಠ ಧರ್ಮ, ಹಜ್ ಯಾತ್ರೆಗೆ ಹೋಗುವ ಆಸೆಯಿದೆ: ಬಸವರಾಜ ರಾಯರೆಡ್ಡಿ
ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ವಿಚಾರವಾಗಿ ಮಾತನಾಡಿದ ಸಚಿವರು, “ನಾಗೇಂದ್ರ ಅವರು ರಾಜೀನಾಮೆ ನೀಡುವ ಪ್ರಮೇಯವೇ ಇರಲಿಲ್ಲ. ಯಾರೂ ಯಾರನ್ನೂ ಬಲಿಪಶು ಮಾಡಿಲ್ಲ. ವಿರೋಧ ಪಕ್ಷದವರು ಸದನದಲ್ಲಿ ಗಲಾಟೆ ಮಾಡಿದ ಕಾರಣ ಮತ್ತು ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಉದ್ದೇಶದಿಂದ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು. ರಾಜೀನಾಮೆಯ ನಂತರವೂ ಬಿಜೆಪಿ ನಾಯಕರು ಪಾದಯಾತ್ರೆ ಮಾಡುತ್ತಿದ್ದಾರೆ, ಇದರಿಂದ ಅವರ ಆರೋಗ್ಯವಾದರೂ ಸುಧಾರಿಸಿದರೆ ಒಳ್ಳೆಯದೇ” ಎಂದು ಲೇವಡಿ ಮಾಡಿದರು.
