ಬೆಂಗಳೂರು: ಬಿಗ್ ಬಾಸ್ (Bigg Boss) ಮನೆಯಲ್ಲಿ ಟ್ರೋಫಿ ಗೆಲ್ಲಲು ಕೇವಲ ಗೇಮ್ ಪ್ಲಾನ್ ಮುಖ್ಯವೋ ಅಥವಾ ಜನರ ಮನಸ್ಸು ಗೆಲ್ಲುವ ವ್ಯಕ್ತಿತ್ವ ಮುಖ್ಯವೋ ಎಂಬ ಪ್ರಶ್ನೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Sudeep) ಅರ್ಥಪೂರ್ಣ ಉತ್ತರ ನೀಡಿದ್ದಾರೆ. ಗೆಲುವಿಗೆ ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ ಮತ್ತು ಸವಾಲುಗಳನ್ನು ಎದುರಿಸುವ ಮನಸ್ಥಿತಿ ಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೇಳಲಾದ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುದೀಪ್, “ಸ್ಪರ್ಧಿಯೊಬ್ಬರಿಗೆ ಮೊದಲನೆಯದಾಗಿ ತಾಳ್ಮೆ ಇರಬೇಕು. ಪ್ರತಿಯೊಂದು ಸನ್ನಿವೇಶವನ್ನೂ ಕಾಯ್ದು ನೋಡಬೇಕು ಮತ್ತು ಅನುಭವಿಸಬೇಕು. ಎದುರಾಗುವ ಸವಾಲುಗಳನ್ನು ನಿಧಾನವಾಗಿ, ಸಂಯಮದಿಂದ ಎದುರಿಸುವುದು ಅತ್ಯಗತ್ಯ” ಎಂದರು.
“ನಾವು ಅಂದುಕೊಂಡ ಗುರಿ ತಲುಪುವವರೆಗೂ ತಾಳ್ಮೆ ಕಳೆದುಕೊಳ್ಳಬಾರದು. ಆ ಪಯಣದಲ್ಲಿ ಹತ್ತು ಹಲವು ಅಡೆತಡೆಗಳು ಎದುರಾಗಬಹುದು. ಇದು ಕೇವಲ ಬಿಗ್ ಬಾಸ್ ಮನೆಗೆ ಮಾತ್ರವಲ್ಲ, ಜೀವನದ ಪ್ರತಿಯೊಂದು ವೇದಿಕೆಗೂ ಅನ್ವಯಿಸುತ್ತದೆ. ಯಾವಾಗ ಒಬ್ಬ ವ್ಯಕ್ತಿ ಸಂಯಮದಿಂದ ಅಡೆತಡೆಗಳನ್ನು ಮೆಟ್ಟಿ ನಿಲ್ಲುತ್ತಾನೋ, ಆಗ ಆತ ಬಿಗ್ ಬಾಸ್ ಟ್ರೋಫಿ ಮಾತ್ರವಲ್ಲದೆ ಜೀವನವನ್ನೂ ಗೆಲ್ಲಲು ಸಾಧ್ಯವಾಗುತ್ತದೆ” ಎಂದು ಸುದೀಪ್ ಸಕ್ಸಸ್ ಮಂತ್ರವನ್ನು ಹಂಚಿಕೊಂಡರು. ಇದನ್ನೂ ಓದಿ: ಈ ಬಾರಿಯ ಬಿಗ್ ಬಾಸ್ ನನಗೆ ತುಂಬಾ ವಿಶೇಷ: ಶೂಟಿಂಗ್ ಗುಟ್ಟು ಬಿಚ್ಚಿಟ್ಟ ಕಿಚ್ಚ ಸುದೀಪ್
ಈ ಸಂದರ್ಭದಲ್ಲಿ ಬಿಗ್ ಬಾಸ್ ವ್ಯಕ್ತಿತ್ವದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬ ಪ್ರಶ್ನೆಗೆ, ಬಿಗ್ ಬಾಸ್ ವೇದಿಕೆಗೆ ಬರುವ ಮುನ್ನ ಜನ ನನ್ನ ಬಗ್ಗೆ ಹೊಂದಿದ್ದ ಅಭಿಪ್ರಾಯವೇ ಬೇರೆ, ಈ ಶೋ ಆರಂಭವಾದ ಮೇಲೆಯೇ ಜನರಿಗೆ ನನ್ನ ನಿಜವಾದ ವ್ಯಕ್ತಿತ್ವ ಪರಿಚಯವಾಯಿತು ಎಂದು ಹೇಳಿದರು.
ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುವುದಕ್ಕಿಂತ ಮೊದಲು ಜನ ನನ್ನ ಬಗ್ಗೆ ‘ಇವನಿಗೆ ಗಾಂಚಲಿ ಜಾಸ್ತಿ’ ಎನ್ನುತ್ತಿದ್ದರು. ಅಷ್ಟೇ ಅಲ್ಲ, ಅದಕ್ಕಿಂತ ಮುಂಚೆ ‘ಬುಡ ಗಾಂಚಲಿ’ ಎಂಬ ಪದವನ್ನೂ ಸೇರಿಸಿ ಮಾತನಾಡುತ್ತಿದ್ದರು. ಆದರೆ ಯಾವಾಗ ಬಿಗ್ ಬಾಸ್ ವೇದಿಕೆಗೆ ನಿರೂಪಕನಾಗಿ ಬಂದೆನೋ, ಆಗ ಜನರಿಗೆ ನನ್ನ ವೈಯಕ್ತಿಕ ಪರಿಚಯವಾಯಿತು ಎಂದು ಸುದೀಪ್ ತಿಳಿಸಿದರು.
ಬಿಗ್ ಬಾಸ್ ವೇದಿಕೆಯು ನನ್ನನ್ನು ಜನರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿಸಿತು ಮತ್ತು ನನ್ನ ಮೇಲಿದ್ದ ತಪ್ಪು ಕಲ್ಪನೆ, ಅಭಿಪ್ರಾಯಗಳೆಲ್ಲವೂ ಬದಲಾದವು. ಬಿಗ್ ಬಾಸ್ ನನ್ನ ಜೀವನದ ಮೇಲೆ ಅತ್ಯಂತ ದೊಡ್ಡ ಮತ್ತು ಆಳವಾದ ಪ್ರಭಾವ ಬೀರಿದೆ ಎಂದು ಅವರು ನುಡಿದರು.
