Connect with us

Latest

ಚಿಕಿತ್ಸೆಗೆ ಅಂಬುಲೆನ್ಸ್ ನೀಡದ ಆಸ್ಪತ್ರೆ – ಮಗನ ಶವವನ್ನು ಹೊತ್ತೊಯ್ದ ತಾಯಿ!

Published

on

ಲಕ್ನೋ: ಅಂಬುಲೆನ್ಸ್ ನೀಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಕ್ಕೆ ತನ್ನ ಮಗನ ಶವವನ್ನು ತಾಯಿಯೇ ಹೊತ್ತುಕೊಂಡು ಹೋದ ಮನಕಲಕುವ ಘಟನೆ ಉತ್ತರ ಪ್ರದೇಶದ ಶಹಜಹಾನ್‍ಪುರದಲ್ಲಿ ನಡೆದಿದೆ.

ಸೋಮವಾರದಂದು ಬಾಲಕನಿಗೆ ಹೆಚ್ಚು ಜ್ವರ ಬಂದಿದ್ದ ಕಾರಣಕ್ಕೆ ತಂದೆ ತಾಯಿ ಆತನನ್ನು ಶಹಜಹಾನ್‍ಪುರದಲ್ಲಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿನ ವೈದ್ಯರು ಬಾಲಕನ ಸ್ಥಿತಿ ಗಂಭೀರವಾಗಿದೆ ಲಕ್ನೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಎಂದು ಸೂಚಿಸಿದ್ದಾರೆ. ಆಗ ಪೋಷಕರು ಬಾಲಕನನ್ನು ಕರೆದುಕೊಂಡು ಹೋಗಲು ಅಂಬುಲೆನ್ಸ್ ವ್ಯವಸ್ಥೆ ನೀಡಿ ಎಂದು ಮನವಿ ಮಾಡಿದ್ದಾರೆ.

ಮನವಿಗೆ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ನಿರಾಕರಿಸಿದ್ದು, ಬೇರೆ ವಾಹನ ವ್ಯವಸ್ಥೆ ಮಾಡಿಕೊಂಡು ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲು ತಮ್ಮ ಬಳಿ ಹಣವಿಲ್ಲದ ಕಾರಣಕ್ಕೆ ಬಡ ತಂದೆ ತಾಯಿ ಕಂಗಾಲಾಗಿದ್ದಾರೆ. ಬಳಿಕ ಬೇರೆ ವಿಧಿಯಿಲ್ಲದೆ ತಾಯಿಯೇ ಮಗನನ್ನು ಎತ್ತಿಕೊಂಡು ಬೇರೆ ಆಸ್ಪತ್ರೆಗೆ ತೆರಳುತ್ತಿದ್ದರು.

ಮಾರ್ಗ ಮಧ್ಯೆಯೇ ಬಾಲಕ ಸಾವನ್ನಪ್ಪಿದ್ದು, ಮಗನ ಶವವನ್ನು ತಾಯಿ ಹೊತ್ತುಕೊಂಡೇ ಮನೆಗೆ ತೆರೆಳಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ವ್ಯವಸ್ಥೆ ನೀಡಿದ್ದರೆ ತಮ್ಮ ಮಗ ಉಳಿಯುತ್ತಿದ್ದ. ನಾವು ಬಡವರು ಎಂದು ನಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂದು ಮೃತ ಬಾಲಕನ ಪೋಷಕರು ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಬಾಲಕನ ತಂದೆ, ನಾವು ಸೋಮವಾರ ಬೆಳಗ್ಗೆ ಮಗನನ್ನು ಆಸ್ಪತ್ರಗೆ ಕರೆದೋಯ್ದಿದ್ದೆವು. ಆದರೆ ಅಲ್ಲಿನ ವೈದ್ಯರು ಮಗು ಸ್ಥಿತಿ ಗಂಭೀರವಾಗಿದೆ ಬೇರೆಡೆ ಚಿಕಿತ್ಸೆ ಕೊಡಿಸಿ ಎಂದು ಸೂಚಿಸಿದರು. ಆಗ ನಾವು ಅಂಬುಲೆನ್ಸ್ ವ್ಯವಸ್ಥೆ ನೀಡಲು ಮನವಿ ಮಾಡಿದಾಗ ಸಿಬ್ಬಂದಿ ನಿರಾಕರಿಸಿದರು. ಆಸ್ಪತ್ರೆ ಆವರಣದಲ್ಲಿ ಮೂರು ಅಂಬುಲೆನ್ಸ್ ಇದ್ದರೂ ಕೂಡ ನಮ್ಮ ಮನವಿಯನ್ನು ನಿರ್ಲಕ್ಷಿಸಿದರು ಎಂದು ಕಣ್ಣೀರಿಟ್ಟಿದ್ದಾರೆ.

ಪೋಷಕರ ಆರೋಪವನ್ನು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ತಳ್ಳಿಹಾಕಿದ್ದಾರೆ. ಬಾಲಕನ ಸ್ಥಿತಿ ಗಂಭೀರವಾಗಿದ್ದ ಕಾರಣಕ್ಕೆ ಲಕ್ನೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂದಿದ್ದೇವು. ಆದರೆ ಆ ನಂತರ ಪೋಷಕರು ಏನು ಮಾಡಿದರು ಎಂದು ನಮಗೆ ಗೊತ್ತಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.