ರಾಮನಗರ: ನಾಳೆ ಸಿಎಂ ಡಿಕೆಶಿ ಕನಕಪುರಕ್ಕೆ (Kanakapura) ಭೇಟಿ ನೀಡಲಿದ್ದಾರೆ. ಈ ವೇಳೆ ವಿವಿಧ ಕಲಾತಂಡಗಳು ಅದ್ದೂರಿ ಸ್ವಾಗತಿಸಲಿದ್ದು, ಡಿಕೆಶಿ (DK Shivakumar) ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ.ಶಿವಕುಮಾರ್, ತಮ್ಮ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸಲು ನಾಳೆ (ಜೂ.7) ಕನಕಪುರ ಕ್ಷೇತ್ರದಲ್ಲಿ ಕೃತಜ್ಞತಾ ಸಮರ್ಪಣಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರಕ್ಕೆ ತೆರಳುತ್ತಿದ್ದಾರೆ. ಈ ಹಿನ್ನೆಲೆ ಅವರನ್ನು ಅತ್ಯಂತ ಅದ್ದೂರಿಯಾಗಿ ಬರಮಾಡಿಕೊಳ್ಳಲು ಕನಕಪುರ ಹಾಗೂ ಹಾರೋಹಳ್ಳಿ ತಾಲೂಕಿನ ಅಭಿಮಾನಿಗಳು ಮತ್ತು ಕಾರ್ಯಕರ್ತರು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಸ್ ಪಡೆದ ರಾಮಲಿಂಗಾರೆಡ್ಡಿ
ಬೃಹತ್ ರೋಡ್ ಶೋ ಮೂಲಕ ಕ್ಷೇತ್ರದ ಹಳ್ಳಿಹಳ್ಳಿಗೆ ತೆರಳಲಿರುವ ಡಿ.ಕೆ.ಶಿವಕುಮಾರ್ (DK Shivakumar) ಮತದಾರರಿಗೆ ಕೃತಜ್ಞತೆಗಳನ್ನು ಸಮರ್ಪಿಸಲಿದ್ದಾರೆ. ಸಿಎಂ ಡಿಕೆಶಿ ನಾಳೆ ಬೆಳಗ್ಗೆ 10 ಗಂಟೆಗೆ ರಸ್ತೆ ಮಾರ್ಗವಾಗಿ ಹಾರೋಹಳ್ಳಿ ಸರ್ಕಲ್‌ಗೆ ಆಗಮಿಸಲಿದ್ದು, ಅಲ್ಲಿ ವಿವಿಧ ಜನಪದ ಕಲಾ ತಂಡಗಳ ಭವ್ಯ ಪ್ರದರ್ಶನದೊಂದಿಗೆ ಸಾಂಪ್ರದಾಯಿಕ ಹಾಗೂ ಅದ್ದೂರಿಯಾಗಿ ಸ್ವಾಗತಿಸಲಿದ್ದಾರೆ. ಬಳಿಕ ಪ್ರಸಿದ್ಧ ಕೋಟೆ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿ, ನಂತರ ತೆರೆದ ವಾಹನದಲ್ಲಿ ಬೆಂಗಳೂರು ರಸ್ತೆಯ ಉದ್ದಕ್ಕೂ ಹಾರೋಹಳ್ಳಿ ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ.
ಕನಕಪುರ ತಾಲೂಕಿನ ತುಂಗಣಿ, ಟಿ.ಬೇಕುಪ್ಪೆ ಸರ್ಕಲ್, ನಾರಾಯಣಪುರ, ಕೋಡಿಹಳ್ಳಿ, ಹೇರಿಂದ್ಯಾಪನ ಹಳ್ಳಿ, ಕೊಳಗೊಂಡನಹಳ್ಳಿ, ಹುಣಸನಹಳ್ಳಿ ಮುಖಾಂತರ ರೋಡ್ ಶೋ ಸಾಗಲಿದೆ. ಅಲ್ಲಿಂದ ಮುಂದೆ ಹೊಸದುರ್ಗ ಗ್ರಾಮಕ್ಕೆ ತೆರಳಿ, ಕೋಡಿಹಳ್ಳಿ ಗ್ರಾಮದಲ್ಲಿ ಮಧ್ಯಾಹ್ನದ ಭೋಜನದ ವಿರಾಮ ಇರಲಿದೆ. ಊಟದ ಬಳಿಕ ಹೂಕುಂದ ಗ್ರಾಮ, ಮುಳ್ಳಹಳ್ಳಿ, ನಲ್ಲಹಳ್ಳಿ, ದೊಡ್ಡಾಲಹಳ್ಳಿ, ಸಾತನೂರು, ಕಬ್ಬಾಳು, ಕುರುಬರಹಳ್ಳಿ ಗೇಟ್ ಮತ್ತು ಸೋಮದ್ಯಾಪನಹಳ್ಳಿಗೆ ಸಿಎಂ ರೋಡ್ ಶೋ ತಲುಪಲಿದೆ. ಸಂಜೆ 7 ಗಂಟೆಗೆ ಕನಕಪುರದ ಹಳೆ ಪೊಲೀಸ್ ಸ್ಟೇಷನ್ ಸರ್ಕಲ್, ಮೇಗಳ ಬೀದಿ ಮುಖಾಂತರ ಕನಕಪುರ ಟೌನ್ ತಲುಪಲಿದೆ. ಎಲ್ಲಾ ಕಡೆಗಳಲ್ಲೂ ಅರ್ಧಗಂಟೆಗಳ ಕಾಲ ಡಿಕೆಶಿ ಭಾಷಣ ಮಾಡಲಿದ್ದು, ಕ್ಷೇತ್ರದ ಜನತೆಗೆ ಧನ್ಯವಾದ ಹೇಳಲಿದ್ದಾರೆ. ಸಿಎಂ ಪ್ರವಾಸ ಹಿನ್ನೆಲೆ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ಇದನ್ನೂ ಓದಿ: ಸಂಪುಟ ಖಾತೆ ಕ್ಯಾತೆ ನಡುವೆ ಸಚಿವರ 2ನೇ ಪಟ್ಟಿಗೆ ತಯಾರಿ – ಯಾರಿಗೆ ಲಕ್?
