– ಮತದಾರರ ಪಟ್ಟಿಯಿಂದ ಹೆಸರು ತೆಗೆದ ಮಾತ್ರಕ್ಕೆ ಪೌರತ್ವ ರದ್ದಾಗಲ್ಲ
ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (Special Intensive Revision) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಹೆಗೆದುಹಾಕಿದ ಮಾತ್ರಕ್ಕೆ ವ್ಯಕ್ತಿಯ ಪೌರತ್ವ ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಸ್ಪಷ್ಟಪಡಿಸಿದೆ.
ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ಗೆ (SIR) ಸಂಬಂಧಿಸಿದಂತೆ ಶುಕ್ರವಾರ ನಡೆದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ. ಬಿಹಾರ SIR ಪ್ರಕರಣದಲ್ಲಿ ಈಗಾಗಲೇ ನೀಡಿರುವ ತೀರ್ಪನ್ನ ಉಲ್ಲೇಖಿಸಿದ ನ್ಯಾಯಾಲಯ, ಪೌರತ್ವವನ್ನ ನಿರ್ಧರಿಸುವ ಅಂತಿಮ ಅಧಿಕಾರ ಚುನಾವಣಾ ಆಯೋಗಕ್ಕೆ (ECI) ಇಲ್ಲ ಎಂದು ಪುನರುಚ್ಚರಿಸಿತು. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿದ ಮಾತ್ರಕ್ಕೆ ಯಾರೂ ತಮ್ಮ ಭಾರತೀಯ ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿತು.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನಾ ಅವರಿದ್ದ ತ್ರಿ-ಸದಸ್ಯ ಪೀಠವು, SIR ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದವರ ಮೇಲ್ಮನವಿಗಳನ್ನ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಮಂಡಳಿಗಳ ಕಾರ್ಯವೈಖರಿಯನ್ನು ಸುಗಮಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಶುಕ್ರವಾರ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ವಾದ ಮಂಡಿಸಿ, 19 ಮೇಲ್ಮನವಿ ನ್ಯಾಯಾಧಿಕರಣಗಳ ಮುಂದೆ ಸುಮಾರು 34 ಲಕ್ಷ ಮೇಲ್ಮನವಿಗಳು ಇನ್ನೂ ಬಾಕಿ ಉಳಿದಿವೆ. ಇದುವರೆಗೆ ಸುಮಾರು 38 ಸಾವಿರ ಮೇಲ್ಮನವಿಗಳಷ್ಟೇ ಇತ್ಯರ್ಥಗೊಂಡಿದ್ದು, ಅವುಗಳಲ್ಲಿ ಸುಮಾರು 70% ಪ್ರಕರಣಗಳಲ್ಲಿ ಅರ್ಜಿದಾರರ ಪರ ತೀರ್ಪು ಬಂದಿದೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು.
ಮೇಲ್ಮನವಿಗಳು ಬಾಕಿಯಿರುವ ನಡುವೆಯೇ, ಪಶ್ಚಿಮ ಬಂಗಾಳ ಸರ್ಕಾರವು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟವರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS), ಅನ್ನಪೂರ್ಣ ಯೋಜನೆ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನ ನಿರಾಕರಿಸುವ ಕ್ರಮ ಕೈಗೊಂಡಿದೆ. ಅಲ್ಲದೇ, ಜಾತಿ ಪ್ರಮಾಣಪತ್ರ ನೀಡುವುದನ್ನೂ ನಿರಾಕರಿಸಲಾಗುತ್ತಿದೆ ಎಂದು ಹಿರಿಯ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದರು. ಬಿಹಾರ SIR ತೀರ್ಪಿನ ಪ್ರಕಾರ, ವ್ಯಕ್ತಿಯ ಪೌರತ್ವದ ಬಗ್ಗೆ ಅನುಮಾನ ಉಂಟಾದರೆ ಚುನಾವಣಾ ಆಯೋಗವು ಸ್ವತಃ ತೀರ್ಮಾನ ಕೈಗೊಳ್ಳುವ ಅಧಿಕಾರ ಹೊಂದಿಲ್ಲ. ಬದಲಾಗಿ, ಆ ಪ್ರಕರಣವನ್ನು ಕೇಂದ್ರ ಸರ್ಕಾರದ ಸಂಬಂಧಿತ ಪ್ರಾಧಿಕಾರಕ್ಕೆ ಪೌರತ್ವ ಕಾಯ್ದೆಯಡಿ ಪರಿಶೀಲನೆಗಾಗಿ ಕಳುಹಿಸುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ. ಈ ವಿಷಯದ ಬಗ್ಗೆ ನಾವು ಈಗಾಗಲೇ ಬಿಹಾರ SIR ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದೇವೆ. ಚುನಾವಣಾ ಆಯೋಗವು ಪ್ರಕರಣವನ್ನ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಪೌರತ್ವದ ಕುರಿತು ಅಂತಿಮ ನಿರ್ಧಾರ ಆಗುವವರೆಗೆ ವ್ಯಕ್ತಿಯ ಕಾನೂನುಬದ್ಧ ಸ್ಥಾನಮಾನ ಮುಂದುವರಿಯಬೇಕು ಎಂದು ನ್ಯಾಯಮೂರ್ತಿ ಬಾಗ್ಚಿ ಮೌಖಿಕವಾಗಿ ಸ್ಪಷ್ಟನೆ ನೀಡಿದರು.
ವಿಚಾರಣೆ ವೇಳೆ ನ್ಯಾಯಮೂರ್ತಿ ಸಂಜಯ್ ಕುಮಾರ್ ಬಾಗ್ಚಿ ಪ್ರತಿಕ್ರಿಯಿಸಿ, ಸಂವಿಧಾನದ 9, 10, 11 ಮತ್ತು 12ನೇ ವಿಧಿಗಳ ಅಡಿಯಲ್ಲಿ ನಾಗರಿಕತ್ವದ ಸ್ಥಾನಮಾನ ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ (ECI) ಇಲ್ಲ. ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನ ನಿಯಂತ್ರಿಸುವ ಅಧಿಕಾರ ಹೊಂದಿದೆ. ಯಾರೊಬ್ಬರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸದಿರಲು ಅಥವಾ ತೆಗೆದುಹಾಕಲು ಅದು ನಿರ್ಧರಿಸಬಹುದು. ಆದರೆ ಅದರಿಂದ ಆ ವ್ಯಕ್ತಿಯ ಭಾರತೀಯ ಪೌರತ್ವ ಕಳೆದುಹೋಗುತ್ತದೆ ಎಂದು ಅರ್ಥವಲ್ಲ. ಇದೇ ಕಾರಣಕ್ಕೆ ನಾವು ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ಜವಾಬ್ದಾರಿಯನ್ನು ವಿಧಿಸಿದ್ದೇವೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ತಕ್ಷಣವೇ ಸರ್ಕಾರಗಳು ಇತರ ನಾಗರಿಕ ಸೌಲಭ್ಯಗಳನ್ನೂ ಸ್ಥಗಿತಗೊಳಿಸುವುದಾಗಿ ಹೇಳುತ್ತಿವೆ. ಇದರಿಂದ ಜನ ಆತಂಕದಲ್ಲಿದ್ದಾರೆ ಎಂದು ಕೋರ್ಟ್ ಗಮನ ಸೆಳೆದರು. ಪೌರತ್ವದ ಕುರಿತು ಅಂತಿಮ ತೀರ್ಮಾನವಾಗುವವರೆಗೆ ನಾಗರಿಕರಿಗೆ ಲಭ್ಯವಿರುವ ಮೂಲಭೂತ ಹಕ್ಕುಗಳು ಮತ್ತು ಕಲ್ಯಾಣ ಯೋಜನೆಗಳನ್ನು ಕಸಿದುಕೊಳ್ಳಬಾರದು ಎಂಬುದನ್ನ ನ್ಯಾಯಾಲಯ ಸ್ಪಷ್ಟವಾಗಿ ಹೇಳಬೇಕೆಂದು ಅವರು ಮನವಿ ಮಾಡಿದರು.
ಈ ಬಗ್ಗೆ ಹೆಚ್ಚಿನ ವಿಚಾರಣೆ ಇನ್ನಷ್ಟು ಪರಿಶೀಲಿಸುವುದಾಗಿ ಹೇಳಿದ ಕೋರ್ಟ್, ಆಗಸ್ಟ್ 25 ಕ್ಕೆ ವಿಚಾರಣೆ ಮುಂದೂಡಿತು.
