– ಪತ್ನಿ, ಪ್ರಿಯಕರ ಸೇರಿ ನಾಲ್ವರ ಬಂಧನ
ಅಮರಾವತಿ: ಅಮಾವಾಸ್ಯೆ ದಿನ ದೇವರ ದರ್ಶನಕ್ಕೆಂದು ಕರೆದೊಯ್ದು ಪತಿಯನ್ನು (Husband) ಪತ್ನಿಯೇ (Wife) ಪ್ರಿಯಕರನೊಂದಿಗೆ ಸೇರಿ ಭೀಕರವಾಗಿ ಹತ್ಯೆ ಮಾಡಿಸಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಚಿತ್ತೂರು (Chittoor) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಡಿಜಿಟಲ್ ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ತಾಂತ್ರಿಕ ತನಿಖೆಯ ನೆರವಿನಿಂದ ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ ಪೊಲೀಸರು, ಪತ್ನಿ, ಆಕೆಯ ಪ್ರಿಯಕರ ಹಾಗೂ ಇನ್ನಿಬ್ಬರು ಸಹಚರರನ್ನು ಬಂಧಿಸಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ನಿವಾಸಿ ರಮೇಶ್ (23) ಹತ್ಯೆಯಾದ ಪತಿ. ಎರಡು ವರ್ಷಗಳ ಹಿಂದೆ ಚಿತ್ತೂರು ಜಿಲ್ಲೆಯ ಶಾಂತಿಪುರಂ ನಿವಾಸಿ ಹಾಸಿನಿಯನ್ನ (19) ರಮೇಶ್ ವಿವಾಹವಾಗಿದ್ದ. ದಂಪತಿಗೆ ಒಂದು ಪುಟ್ಟ ಮಗಳಿದ್ದು, ರಮೇಶ್ ಹೊಸೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಇದನ್ನೂ ಓದಿ: ಇ-ಸ್ವತ್ತು ತೊಡಕು ನಿವಾರಣೆಗೆ ಪಂಚ ಸದಸ್ಯರ ಸಮಿತಿ: ಈಶ್ವರ್ ಖಂಡ್ರೆ
ಕುಟುಂಬಸ್ಥರ ದೃಷ್ಟಿಯಲ್ಲಿ ದಾಂಪತ್ಯ ಜೀವನ ಸಾಮಾನ್ಯವಾಗಿಯೇ ಕಂಡುಬಂದಿದ್ದರೂ, ಮದುವೆಯಾದ ಬಳಿಕವೂ ಹಾಸಿನಿ ತನ್ನ ಬಾಲ್ಯದ ಸ್ನೇಹಿತ 20 ವರ್ಷದ ಯುಗಂಧರ್ ಜೊತೆಗಿನ ಸಂಬಂಧವನ್ನು ಮುಂದುವರಿಸಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದೇ ಕಾರಣಕ್ಕೆ ಇಬ್ಬರೂ ಸೇರಿ ರಮೇಶ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ 3 ದಿನ ಮಳೆ ಸಾಧ್ಯತೆ – ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಮಂಗಳವಾರ ಅಮಾವಾಸ್ಯೆ ಹಿನ್ನೆಲೆ ಗುಡುಪಲ್ಲಿ ಮಂಡಲದ ಮಲ್ಲಪ್ಪಕೊಂಡ ಬೆಟ್ಟದ ಮೇಲಿರುವ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗುವಂತೆ ಹಾಸಿನಿ ತನ್ನ ಪತಿಯನ್ನು ಒಪ್ಪಿಸಿದ್ದಳು. ದಂಪತಿ ತಮ್ಮ ಪುಟ್ಟ ಮಗಳೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ, ಹಾಸಿನಿ ಮೊಬೈಲ್ ಮೂಲಕ ತಮ್ಮ ಲೈವ್ ಲೊಕೇಷನ್ ಅನ್ನು ಯುಗಂಧರ್‌ಗೆ ನಿರಂತರವಾಗಿ ಕಳುಹಿಸುತ್ತಿದ್ದಳು. ಇದರಿಂದ ಆರೋಪಿಗಳಿಗೆ ದಂಪತಿಯ ಚಲನವಲನದ ಬಗ್ಗೆ ನಿಖರ ಮಾಹಿತಿ ದೊರೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿಗೆ ಸೀರೆ ಕೊಟ್ಟು ಹರಕೆ ತೀರಿಸಿದ ಸಿಎಂ ಪತ್ನಿ
ತನಿಖಾಧಿಕಾರಿಗಳ ಪ್ರಕಾರ, ಬೆಟ್ಟದ ರಸ್ತೆಯ ಮೂರನೇ ಹೇರ್‌ಪಿನ್ ತಿರುವಿನ ಬಳಿ ಕೊಲೆ ಸಂಚು ಮಾಡಲಾಗಿದೆ. ಈ ವೇಳೆ ಹಾಸಿನಿ ಉದ್ದೇಶಪೂರ್ವಕವಾಗಿ ತನ್ನ ಹ್ಯಾಂಡ್‌ಬ್ಯಾಗ್ ಅನ್ನು ಕೆಳಗೆ ಬೀಳಿಸಿದ್ದಳು ಎನ್ನಲಾಗಿದೆ. ಬ್ಯಾಗ್ ಎತ್ತಿಕೊಳ್ಳಲು ರಮೇಶ್ ಬೈಕ್ ನಿಲ್ಲಿಸಿದ ತಕ್ಷಣ ಅಲ್ಲೇ ಅಡಗಿ ಕುಳಿತಿದ್ದ ಯುಗಂಧರ್ ಹಾಗೂ ಆತನ ಸಹಚರರು ಹೊರಬಂದಿದ್ದಾರೆ. ಬಳಿಕ ರಮೇಶ್‌ನನ್ನು ಸುಮಾರು 100 ಮೀಟರ್ ದೂರದವರೆಗೆ ಅರಣ್ಯದೊಳಗೆ ಬೆನ್ನಟ್ಟಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತ್ಯ ನಡೆದ ವೇಳೆ ದಂಪತಿಯ ಪುಟ್ಟ ಮಗಳು ಅಲ್ಲೇ ಇದ್ದಳು. ಇದನ್ನೂ ಓದಿ: ಸದ್ಯಕ್ಕಿಲ್ಲ GBA ಎಲೆಕ್ಷನ್; ರಾಜ್ಯ ಸರ್ಕಾರಕ್ಕೆ ಮತ್ತೆ ಸಮಯಾವಕಾಶ ನೀಡಿದ ಸುಪ್ರೀಂ
ಮಗಳು ಹಾಗೂ ಮೊಮ್ಮಗಳು ಮನೆಗೆ ವಾಪಸ್ ಬಾರದ ಹಿನ್ನೆಲೆ ಹಾಸಿನಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೇವಸ್ಥಾನದ ಮಾರ್ಗದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ರಮೇಶ್ ತನ್ನ ಪತ್ನಿಯೊಂದಿಗೆ ಬೈಕ್‌ನಲ್ಲಿ ದೇವಸ್ಥಾನಕ್ಕೆ ತೆರಳಿರುವುದು ದಾಖಲಾಗಿತ್ತು. ಆದರೆ ಬಳಿಕ ಹಾಸಿನಿ ಮೃತನ ಬೈಕ್‌ನಲ್ಲೇ ಇಬ್ಬರು ಪುರುಷರೊಂದಿಗೆ ಸ್ಥಳದಿಂದ ತೆರಳುತ್ತಿರುವ ದೃಶ್ಯಗಳು ಪತ್ತೆಯಾಗಿದ್ದವು. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಆರೋಪಿ ಅರೆಸ್ಟ್
ಬಳಿಕ ಪೊಲೀಸರು ಮೊಬೈಲ್ ಕರೆ ವಿವರಗಳು, ಲೊಕೇಷನ್ ಡೇಟಾ ಹಾಗೂ ಇತರ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿ ರಮೇಶ್‌ನ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ತನಿಖೆಯ ಆಧಾರದ ಮೇಲೆ ಪತ್ನಿ ಹಾಸಿನಿ, ಆಕೆಯ ಪ್ರಿಯಕರ ಯುಗಂಧರ್ ಹಾಗೂ ಇನ್ನಿಬ್ಬರು ಸಹಚರರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ನೀರಿನ ಸಂಪ್ ವಿಚಾರಕ್ಕೆ ಮನೆ ಮಾಲೀಕನಿಂದ ಗಾರೆ ಮೇಸ್ತ್ರಿ ತಮ್ಮನ ಕೊಲೆ
ಇದರ ಜೊತೆಗೆ, ಹಾಸಿನಿ ರಮೇಶ್‌ನನ್ನು ವಿವಾಹವಾಗುವ ಸಂದರ್ಭದಲ್ಲಿ ಅಪ್ರಾಪ್ತಳಾಗಿದ್ದು, 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ಗ್ರಾಮಸ್ಥರು ಮಾಡಿರುವ ಆರೋಪಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ಆರೋಪಗಳು ಸತ್ಯವೆಂದು ದೃಢಪಟ್ಟರೆ, ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರತ್ಯೇಕ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ತುಮಕೂರಿನಲ್ಲಿ ಹಿಟ್ & ರನ್ – ಮನೆಮುಂದೆ ಆಟವಾಡುತ್ತಿದ್ದ 2 ವರ್ಷದ ಬಾಲಕ ಸಾವು
