– ಡಿಸೆಂಬರ್ ವೇಳೆಗೆ ಚುನಾವಣೆ ನಡೆಸೋದಾಗಿ ಹೇಳಿದ ಸರ್ಕಾರ
ನವದೆಹಲಿ: ಜಿಬಿಎ ಚುನಾವಣೆ (GBA Elections) ನಡೆಸುವ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ರಿಲೀಫ್ ಸಿಕ್ಕಿದೆ. ಚುನಾವಣೆ ನಡೆಸಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಮತ್ತೆ ಸಮಯಾವಕಾಶ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಜಿಬಿಎ ಚುನಾವಣೆ ಗಡುವನ್ನು ವಿಸ್ತರಿಸಿದೆ. ಇದನ್ನೂ ಓದಿ: ಜಿಬಿಎ ಚುನಾವಣೆ ಮುಂದೂಡಿಕೆ ಕೋರಿ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ
ಬೆಂಗಳೂರಿನ ಐದು ಪಾಲಿಕೆಗಳ 369 ವಾರ್ಡ್‌ಗಳಿಗೆ ಚುನಾವಣೆ ನಡೆಸುವ ಗಡುವನ್ನು ಡಿಸೆಂಬರ್ ವರೆಗೆ ವಿಸ್ತರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಕರ್ನಾಟಕ ರಾಜ್ಯ ಚುನಾವಣಾ ಆಯೋಗದಿಂದ ಪ್ರತ್ಯೇಕ ಮನವಿಗಳನ್ನು ಸುಪ್ರೀಂ ಕೋರ್ಟ್ ಅನುಮತಿಸಿದೆ.
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ನಡೆಯುತ್ತಿದೆ. ಎಸ್‌ಐಆರ್ ನವೆಂಬರ್‌ನಲ್ಲಿ ಅಂತ್ಯಗೊಳ್ಳಲಿದೆ. ಸಿಬ್ಬಂದಿ ಎಲ್ಲ ಎಸ್‌ಐಆರ್ ಕೆಲಸದಲ್ಲಿದ್ದಾರೆ ಎಂದು ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಸರ್ಕಾರದ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ರಾಜ್ಯದಲ್ಲಿ ಎಸ್‌ಐಆರ್ ನಡೆಯುತ್ತಿದೆ, ಸಮಯ ನೀಡಿ. ಐದು ಪಾಲಿಕೆಗಳ ಚುನಾವಣೆ ನಡೆಯಬೇಕು. ನಾವು ಚುನಾವಣೆ ಮುಂದೂಡಿಕೆಗೆ ಅರ್ಜಿ ಸಲ್ಲಿಸಿದ್ದೇವೆ. ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸದ್ಯಕ್ಕಿಲ್ಲ ಜಿಬಿಎ ಚುನಾವಣೆ – ಮತ್ತೆ 2 ತಿಂಗಳು ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್
ಅರ್ಜಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಡಿಸೆಂಬರ್ ಅಂತ್ಯದೊಳಗೆ ಚುನಾವಣೆ ಮುಗಿಸಬೇಕು ಎಂದು ಸೂಚನೆ ನೀಡಿದೆ. ಡಿಸೆಂಬರ್‌ನಲ್ಲಿ ಮತ್ತೆ ಕಾರಣ ತರಬೇಡಿ ಎಂದು ಕೋರ್ಟ್ ಹೇಳಿದೆ. ಜನವರಿ ವೇಳೆಗೆ ಚುನಾವಣೆ ನಡೆಸಿರುವ ಮಾಹಿತಿ ಸಲ್ಲಿಸುತ್ತೇವೆ ಎಂದ ರಾಜ್ಯ ಸರ್ಕಾರ ತಿಳಿಸಿದೆ.
