ಬೆಂಗಳೂರು: ನೂತನ ಮುಖ್ಯಮಂತ್ರಿ ಹಾಗೂ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬೆನ್ನಲ್ಲೇ, ಇಡೀ ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧದಲ್ಲಿ (Vidhana Soudha) ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪ್ರಮಾಣ ವಚನ ಮುಗಿದ ತಕ್ಷಣವೇ ಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಮತ್ತು ನೂತನ ಸಚಿವರು ವಿಧಾನಸೌಧಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಕಲರ್‌ಫುಲ್ ಹೂಗಳ ಸಿಂಗಾರ:
ಹೊಸ ಸರ್ಕಾರದ ಸ್ವಾಗತಕ್ಕಾಗಿ ವಿಧಾನಸೌಧದ ಪ್ರಮುಖ ದ್ವಾರಗಳನ್ನು ವಿನೂತನವಾಗಿ ಅಲಂಕರಿಸಲಾಗಿದೆ. ವಿವಿಧ ಜಾತಿಯ, ಬಣ್ಣ ಬಣ್ಣದ ಆಕರ್ಷಕ ಹೂಗಳನ್ನು ಬಳಸಿ ದ್ವಾರಗಳಿಗೆ ತೋರಣ ಹಾಗೂ ವಿಶೇಷ ವಿನ್ಯಾಸದ ಅಲಂಕಾರ ಮಾಡಲಾಗಿದೆ.
ಕೇವಲ ಪ್ರವೇಶ ದ್ವಾರಗಳು ಮಾತ್ರವಲ್ಲದೆ, ಅತ್ಯಂತ ಪ್ರಮುಖವಾದ ಕ್ಯಾಬಿನೆಟ್ ಮೀಟಿಂಗ್ ಕೊಠಡಿಯನ್ನು ಸಜ್ಜುಗೊಳಿಸಲಾಗಿದೆ. ಸುಗಂಧ ಭರಿತ ಹೂವುಗಳಿಂದ ಕೊಠಡಿಯ ಒಳಗೂ ವಿಶೇಷ ಅಲಂಕಾರ ಮಾಡಲಾಗಿದ್ದು, ಗಣ್ಯರ ಸ್ವಾಗತಕ್ಕೆ ಸಿಬ್ಬಂದಿ ಅಂತಿಮ ಹಂತದ ಕೊನೆಯ ಸ್ಪರ್ಶ ನೀಡಲಾಗಿದೆ.
ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಇದರ ಬೆನ್ನಲ್ಲೇ, ನೂತನ ಸಚಿವರೊಂದಿಗೆ ಡಿಕೆಶಿ ಅವರು ಮಹತ್ವದ ಕ್ಯಾಬಿನೆಟ್ ಮೀಟಿಂಗ್ ನಡೆಸಲಿದ್ದಾರೆ.
ಹೊಸ ಸರ್ಕಾರದ ಮೊದಲ ಅಧಿಕೃತ ಹೆಜ್ಜೆ ಇದಾಗಿರುವುದರಿಂದ ಇಡೀ ರಾಜ್ಯದ ಕಣ್ಣು ಈಗ ವಿಧಾನಸೌಧದತ್ತ ನೆಟ್ಟಿದೆ.
