ವಿಜಯಪುರ: ಯುಕೆಪಿ 3ನೇ ಹಂತದಲ್ಲಿ ಬರುವ ಆಲಮಟ್ಟಿ ಜಲಾಶಯ (Alimatti Dam) ಎತ್ತರದ ಹಿನ್ನೀರಿನಿಂದ ಬಾಧಿತರಾಗುವ ಎಲ್ಲ ಗ್ರಾಮಸ್ಥರ ಹಿತ ಕಾಪಾಡಲು ಬದ್ಧನಾಗಿದ್ದೇನೆ ಎಂದು ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ (MB Patil) ತಿಳಿಸಿದ್ದಾರೆ.
ಬುಧವಾರ (ಜೂ.24) ತಮ್ಮ ಗೃಹ ಕಚೇರಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಪದಾಧಿಕಾರಿಗಳು ಮತ್ತು ರೈತರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ ಮತ್ತು ನೀರು ಹಂಚಿಕೆ ಕುರಿತು 2010ರಲ್ಲಿ ತೀರ್ಪು ಬಂದಿತ್ತು. ನಂತರ 2013ರಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಒಟ್ಟು 130 ಟಿಎಂಸಿ ನೀರು ಹಂಚಿಕೆಯಾಗಿತ್ತು. ಇದರಿಂದ 1.30 ಲಕ್ಷ ರೂ. ಎಕರೆ ಭೂಸ್ವಾಧೀನ ಅಗತ್ಯವಾಗಿತ್ತು. ಪ್ರತಿ ಎಕರೆ ಒಣಬೇಸಾಯ ಜಮೀನಿಗೆ ರೂ. 8 ಲಕ್ಷ ರೂ. ಮತ್ತು ನೀರಾವರಿ ಜಮೀನಿಗೆ 12 ಲಕ್ಷ ನಿಗದಿ ರೂ. ಪಡಿಸಲಾಗಿತ್ತು. ಆದರೆ, ಅಂದು ಹಣಕಾಸು ಇಲಾಖೆ ಸಧ್ಯಕ್ಕೆ ಆರ್ಥಿಕವಾಗಿ ಯೋಜನೆ ಜಾರಿ ಮತ್ತು ಪರಿಹಾರ ಕಾರ್ಯಸಾಧುವಲ್ಲ ಎಂದು ಯೋಜನೆಯನ್ನು ಮುಂದೂಡಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಇರಾನ್‌ಗೆ ಅನಗತ್ಯ ಪ್ರಯಾಣ ಬೇಡ – ಭಾರತೀಯ ನಾಗರಿಕರಿಗೆ ರಾಯಭಾರಿ ಕಚೇರಿ ಸೂಚನೆ

2023ರಲ್ಲಿ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಮೇಲೆ ನಾನು ಅಂದಿನ ಸಿಎಂ ಸಿದ್ಧರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಒತ್ತಡ ತಂದು ಹೊಸ ನಿಗದಿತ ದರದಂತೆ ಒಣಬೇಸಾಯ ಜಮೀನಿಗೆ 30 ಲಕ್ಷ ರೂ. ಮತ್ತು ನೀರಾವರಿ ಭೂಮಿಗೆ 40 ಲಕ್ಷ ರೂ. ಪರಿಹಾರ ನೀಡಲು ಕ್ರಮ ಕೈಗೊಂಡಿದ್ದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ಬಬಲೇಶ್ವರ ತಾಲೂಕಿನ ಬಾಧಿತ ಗ್ರಾಮಗಳಿಗೆ ಸೂಕ್ತ ಪರಿಹಾರ ಒದಗಿಸಲು ನಾನಾ ಹಂತಗಳಲ್ಲಿ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಲು ಕಾರ್ಯೋನ್ಮುಖನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಆಲಮಟ್ಟಿ ಜಲಾಶಯವನ್ನು 524.256 ಮೀಟರ್ ಗೆ ಹೆಚ್ಚಳ ಮಾಡುವುದರಿಂದ ಅಣೆಕಟ್ಟೆಯ ಹಿನ್ನೀರಿನಲ್ಲಿ ಒಟ್ಟು 75,563 ಎಕರೆ ಜಮೀನು ಮುಳುಗಡೆಯಾಗುವ ಸಾಧ್ಯತೆಯಿದೆ. ಅದರಂತೆ ಈ ವರ್ಷದಲ್ಲಿ 49 ಗ್ರಾಮಗಳ ಅಂದಾಜು 15,000 ಎಕರೆ ಜಮೀನಿಗೆ ಪರಿಹಾರ ಪಾವತಿಸುವ ಸಾಧ್ಯತೆ ಇದೆ. ಅಲ್ಲದೇ, 2026-27 ಮತ್ತು 2027-28ನೇ ಆರ್ಥಿಕ ವರ್ಷದಲ್ಲಿ ಒಟ್ಟು 79 ಗ್ರಾಮಗಳು ಪ್ರಾಥಮಿಕ ಅಧಿಸೂಚನೆ 11(1) ಅವಾರ್ಡ್‌ವರೆಗೆ ನಾನಾ ಹಂತಗಳಲ್ಲಿವೆ. ಅದರಲ್ಲಿ ವಿಜಯಪುರ ಜಿಲ್ಲೆಯ 31 ಗ್ರಾಮಗಳ ಪೈಕಿ ಆರು ಗ್ರಾಮಗಳು ಮಾತ್ರ ಸೇರಿವೆ. 14 ಕಂದಾಯ ಮತ್ತು ಒಂದು ಉಪಗ್ರಾಮಗಳು ಮುಳುಗಡೆ ವ್ಯಾಪ್ತಿಗೆ ಬರುತ್ತವೆ. ಒಟ್ಟು 75,563 ಎಕರೆ ಪೈಕಿ ಬಬಲೇಶ್ವರ ತಾಲೂಕಿನ 5,600 ಎಕರೆ ಭೂಸ್ವಾಧೀನವಾಗುತ್ತಿದ್ದು, 49 ಗ್ರಾಮಗಳಿಗೆ ಅಂದಾಜು 3,000 ಕೋಟಿ ರೂ. ಪರಿಹಾರ ಪಾವತಿ ಸಂದರ್ಭದಲ್ಲಿ ಕನಿಷ್ಠ 1000 ಎಕರೆಗೆ ಸರಾಸರಿ 500 ಕೋಟಿ ರೂ. ಪರಿಹಾರ ಮೀಸಲಿಡಲು ಕೇಳಿದ್ದೇನೆ. ಅಲ್ಲದೇ, ಈಗಾಗಲೇ 11(1) ಪ್ರಾಥಮಿಕ ಅಧಿಸೂಚನೆ ಜಾರಿಯಾಗಿ ನಾನಾ ಹಂತಗಳಲ್ಲಿರುವ ಶಿರಬೂರ, ಕಣಬೂರ, ಚಿಕ್ಕಗಲಗಲಿ ಮತ್ತು ಬಾಕಿ ಉಳಿದ 10 ಗ್ರಾಮಗಳಿಗೂ ಸಹ 11(1) ಅಧಿಸೂಚನೆ ಜಾರಿ ಮಾಡಲು ಸರ್ಕಾರ ಮುಂದಾಗಿದೆ ಎಂದಿದ್ದಾರೆ.

ಯುಕೆಪಿ 3ನೇ ಹಂತದ ಜಾರಿಗೆ ಹಿಂದೆಯೂ ಕೆಲಸ ಮಾಡಿದ್ದೇನೆ. ಈಗಲೂ ಮಾಡುತ್ತಿದ್ದೇನೆ. ಯೋಜನೆ ಪೂರ್ಣಗೊಳ್ಳುವವರೆಗೂ ಕಾರ್ಯೋನ್ಮುಖನಾಗಿರುತ್ತೇನೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಗುರುವಾರ ಮುನಿರಾಬಾದ್‌ನ ಶಾಲೆಗಳಿಗೆ ರಜೆ ಘೋಷಣೆ
