ವಾಷಿಂಗ್ಟನ್: ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ವಿಷಯದಲ್ಲಿ ಅಮೆರಿಕ ಸಂಸತ್‌ನ ಉಭಯ ಸದನಗಳಲ್ಲೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹಿನ್ನಡೆಯಾಗಿದೆ.
ಯುದ್ಧದಿಂದ ಅಮೆರಿಕದ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಅಧ್ಯಕ್ಷರಿಗೆ ನಿರ್ದೇಶಿಸುವ ಯುದ್ಧ ಅಧಿಕಾರ ನಿರ್ಣಯಕ್ಕೆ ಸೆನೆಟ್‌ನಲ್ಲಿ 50-48 ಮತಗಳಿಂದ ಅನುಮೋದನೆ ದೊರೆತಿದೆ. ವಿಶೇಷ ಅಂದರೆ ಸ್ವಪಕ್ಷದ 4 ರಿಪಬ್ಲಿಕನ್ ಸೆನೆಟರ್‌ಗಳೇ ಟ್ರಂಪ್ ಆಡಳಿತದ ವಿರುದ್ಧ ಮತ ಚಲಾಯಿಸಿದ್ದಾರೆ.
ಫೆ.28ರಂದು ಯುದ್ಧ ಆರಂಭವಾದಾಗಿನಿಂದ ಈವರೆಗೆ ಸೆನೆಟ್ ಸುಮಾರು 10 ಬಾರಿ ಈ ಪ್ರಯತ್ನಗಳನ್ನು ನಡೆಸಿದ್ದು, ಇದೇ ಮೊದಲ ಬಾರಿಗೆ ಯುದ್ಧ ಅಧಿಕಾರ ನಿರ್ಣಯ ಅಂಗೀಕಾರವಾಗಿದೆ. ಈ ಹಿಂದೆ ಜೂನ್ 3 ರಂದು 215-208 ಮತಗಳಿಂದ ಹೌಸ್‌ಆಫ್ ರೆಪ್ರೆಸೆಂಟೇಟೀವ್ಸ್ನಲ್ಲಿ ನಿರ್ಣಯವನ್ನು ಅನುಮೋದಿಸಲಾಗಿತ್ತು. ಆದಾಗ್ಯೂ, ಇದು 1973ರ ಕಾಯ್ದೆಯಡಿ ಈ ನಿರ್ಣಯಕ್ಕೆ ಅಧ್ಯಕ್ಷರ ಸಹಿ ಅಗತ್ಯವಿಲ್ಲದ ಕಾರಣ, ಶ್ವೇತಭವನ ಇದನ್ನು ‘ಅಸಂವಿಧಾನಿಕ’ ಎಂದು ಪ್ರತಿಪಾದಿಸಿದೆ. ಅಮೆರಿಕ ಕಂಡ ಕೆಟ್ಟ ವಿದೇಶಾಂಗ ನೀತಿ ಎಂದು ಟ್ರಂಪ್ ವಿರುದ್ಧ ಡೆಮಾಕ್ರಟಿಕ್ ನಾಯಕ ಚಕ್ ಶುಮರ್ ಕಿಡಿಕಾರಿದ್ದಾರೆ.
ಇತ್ತ, ದೆಹಲಿಯಲ್ಲಿ ಭಾರತ-ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಮಾರುಕಟ್ಟೆ ವಿಸ್ತರಣೆ, ಡಿಜಿಟಿಲ್ ವ್ಯಾಪಾರ, ಸುಂಕ ಸಂಬಂಧಿತ ಅಡೆತಡೆ ಸೇರಿದಂತೆ ಸಹಕಾರದ ಕುರಿತು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹಾಗೂ ಅಮೆರಿಕದ ವ್ಯಾಪಾರ ಪ್ರತಿನಿಧಿ ಜೆಮಿಸನ್ ಗ್ರೀರ್ ಸಹಿ ಹಾಕಿದ್ದಾರೆ. ವಿವಾದದ ನಡುವೆ ಹೈದರಾಬಾದ್‌ನ ಅಮೆರಿಕ ಕಾನ್ಸುಲೇಟ್ ಸಮೀಪದ `ಟ್ರಂಪ್ ರಸ್ತೆ’ಯನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಾಗಿದೆ.
ಇರಾನ್‌ಗೆ ಅನಗತ್ಯ ಪ್ರವಾಸ ಬೇಡ ಅಂತ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಈ ಮಧ್ಯೆ, ಮಾರ್ಚ್ ಆರಂಭದಲ್ಲಿ ಸಾವನ್ನಪ್ಪಿರುವ ಇರಾನ್ ಸುಪ್ರೀಂ ಲೀಡರ್ ಅಯಾತೊಲ್ಲಾ ಖಮೇನಿ ಅಂತ್ಯಕ್ರಿಯೆ ಜುಲೈ 4ರಿಂದ 9ರವರೆಗೆ ನಡೆಯಲಿದ್ದು, ಪ್ರಧಾನಿ ಮೋದಿಗೆ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಆಹ್ವಾನ ನೀಡಿದ್ದಾರೆ.
