ವಾಷಿಂಗ್ಟನ್: ಅಮೆರಿಕಾ ಸಂಸತ್ತಿನ ಸಮಿತಿಯ ವಿಚಾರಣೆ ಸಂದರ್ಭದಲ್ಲಿ ಬಿಲ್‌ಗೇಟ್ಸ್ ತಮ್ಮ ವಿವಾಹೇತರ ಸಂಬಂಧಗಳ ಕುರಿತು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಮಾಜಿ ಪತ್ನಿ ಮೆಲಿಂದಾ ಗೇಟ್ಸ್ ಜೊತೆಗಿನ ವೈವಾಹಿಕ ಜೀವನದಲ್ಲಿ ನಡೆದ 3 ಅಕ್ರಮ ಸಂಬಂಧದ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಈ ಸಂಬಂಧಗಳ ಬಗ್ಗೆ ತಿಳಿದುಕೊಂಡಿದ್ದನು ಮತ್ತು ಬಿಲ್‌ಗೇಟ್ಸ್ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸಿದ್ದನು ಎಂದು ವರದಿಯಾಗಿದೆ. ಗೇಟ್ಸ್ ಅವರು ಎಪ್‌ಸ್ಟೀನ್ ಅವರ ಈ ಬೆದರಿಕೆ ಬಗ್ಗೆ ಕ್ಲೋಸ್‌ಡೋರ್‌ನಲ್ಲಿ ಹೇಳಿಕೆ ನೀಡಿದ್ದಾರೆ.
ಬ್ರಿಡ್ಜ್ ಪ್ಲೇಯರ್ ಮಿಲಾ ಆಂಟೋನೊವಾ, ಪರಮಾಣು ಭೌತಶಾಸ್ತ್ರಜ್ಞೆ ಕರಿಮಾ ನಿಗ್ಮಾತುಲಿನಾ, ವೈದ್ಯಕೀಯ ಉದ್ಯಮಿ ಆಲಿಸ್ ಜಾಕೋಬ್ಸ್ ನೆಸೆಲ್ರೋಡ್ಟ್ ಅವರ ಜೊತೆಗಿನ ಮೂರನೇ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಎಪ್‌ಸ್ಟೀನ್ ಈ ರಷ್ಯಾದ ಮಹಿಳೆಯರ ವಿಷಯವನ್ನು ಬಳಸಿಕೊಂಡು ಬಿಲ್‌ಗೇಟ್ಸ್ ಅವರಿಗೆ ಕಿರುಕುಳ ನೀಡಲು ಯೋಚಿಸಿದ್ದನು ಎಂದು ಹೇಳಲಾಗಿದೆ. ಆದರೆ ಬಿಲ್‌ಗೇಟ್ಸ್ ಯಾವುದೇ ರೀತಿಯ ಲೈಂಗಿಕ ದುರ್ನಡತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಜೆಫ್ರಿ ಎಪ್‌ಸ್ಟೀನ್ ಅವರ ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ತಾನು ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಈ ಪ್ರಕರಣಗಳಿಗೂ ಎಪ್‌ಸ್ಟೀನ್ ಜೊತೆಗಿನ ನನ್ನ ಸಂವಹನಕ್ಕೂ ಯಾವುದೇ ಸಂಬAಧವಿರಲಿಲ್ಲ ಎಂದು ಬಿಲ್‌ಗೇಟ್ಸ್ ಸ್ಪಷ್ಟಪಡಿಸಿದ್ದಾರೆ.
