ಬೀದರ್: ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಬೀದರ್ (Bidar) ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 45 ಕೋಟಿ ರೂ. ಬಹುಕೋಟಿ ಹಗರಣ ಇದೀಗ ಸಾಬೀತಾಗಿದ್ದು, ಲೋಕಾಯುಕ್ತ ಪೊಲೀಸರು ಮಾಜಿ ಉಪಕುಲಪತಿ ಸೇರಿ ಆರು ಜನರನ್ನು ಬಂಧಿಸಿದ್ದಾರೆ.
ಪಶು ವಿವಿಯ ಮಾಜಿ ಉಪಕುಲಪತಿ ಪ್ರೊ. ಹೆಚ್.ಡಿ. ನಾರಾಯಣಸ್ವಾಮಿ, 2017-18ರ ಅವಧಿಯಲ್ಲಿ ವಿವಿಯ ಹಣಕಾಸು ನಿಯಂತ್ರಣಾಧಿಕಾರಿಯಾಗಿದ್ದ ಕೆ.ಎಲ್. ಸುರೇಶ್, ಮೃತ್ಯುಂಜಯ ಹಿರೇಮಠ, ಬೊಪಣ್ಣ, ಮಂಜುನಾಥ ಹಾಗೂ ರಾಮಗೊಂಡ ಬಂಧಿತರು. ಇದನ್ನೂ ಓದಿ: ಚಲಿಸುತ್ತಿದ್ದಾಗಲೇ ಬೇರ್ಪಟ್ಟ ಬೋಗಿಗಳು – ಬೆಂಗಳೂರಿಂದ ಬಿಹಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ತಪ್ಪಿದ ಪ್ರಮಾದ
ಏನಿದು ಪ್ರಕರಣ?
2017-18ರ ಅವಧಿಯಲ್ಲಿ ವಿಶ್ವವಿದ್ಯಾಲಯದ ಸಾಮಗ್ರಿ ಖರೀದಿಯಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 45 ಕೋಟಿ ರೂ.ಗೂ ಅಧಿಕ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ್ದರು. ಬಳಿಕ 2021ರಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ತನಿಖೆಯನ್ನು ತೀವ್ರಗೊಳಿಸಿ ಕಳೆದ 2025ರ ಸೆಪ್ಟೆಂಬರ್ 10ರಂದು ಏಕಕಾಲಕ್ಕೆ ರಾಜ್ಯದ 25ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ಈ ಹಗರಣದಲ್ಲಿ ವಿಶ್ವವಿದ್ಯಾಲಯದ ಉನ್ನತಾಧಿಕಾರಿಗಳು, ಸಿಬ್ಬಂದಿ ಹಾಗೂ ಖಾಸಗಿ ಎಂಟರ್‌ಪ್ರೈಸಸ್ ಮಾಲೀಕರು ಶಾಮೀಲಾಗಿ ಯಾವುದೇ ಸಾಮಗ್ರಿ ಖರೀದಿಸದೆಯೇ ನಕಲಿ ಬಿಲ್‌ಗಳನ್ನು ಸೃಷ್ಟಿಸಿರುವುದು ಸಾಬೀತಾಗಿದೆ. ಇದೀಗ ಬೀದರ್ ಜಿಲ್ಲಾ ಸತ್ರ ನ್ಯಾಯಾಲಯ ವಾರೆಂಟ್ ಹೊರಡಿಸಿದ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಗಳನ್ನು ಲೋಕಾಯುಕ್ತ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಿದ್ದಾರೆ.
ಲೋಕಾಯುಕ್ತ ಎಡಿಜಿಪಿ ಮನೀಷ್ ಕರಬಿಕರ್, ಐಜಿಪಿ ಡಾ. ಎ.ಎಸ್. ಸುಬ್ರಮಣ್ಣೇಶ್ವರ ಹಾಗೂ ಎಸ್ಪಿ ಸಿ ಮತ್ತು ಟಿ ಬದ್ರಿನಾಥ್ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆದಿದ್ದು, ಇನ್ನುಳಿದಂತೆ ಎಸ್ಪಿ ಸಿದ್ದರಾಜು ಅವರ ಉಸ್ತುವಾರಿಯಲ್ಲಿ ಬೀದರ್ ಲೋಕಾಯುಕ್ತ ಡಿಎಸ್ಪಿ ಹಣಮಂತರಾಯ ಹಾಗೂ ಅವರ ತಂಡ ಯಶಸ್ವಿಯಾಗಿ ಆರೋಪಿಗಳನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಹಾರ್ಮುಜ್‌ನಲ್ಲಿ ಜಲಬಾಂಬ್ ಇಡುತ್ತಿದ್ದ ಬೋಟ್, ಇರಾನ್ ಕ್ಷಿಪಣಿ ಉಡಾವಣಾ ತಾಣಗಳ ಮೇಲೆ US ವಾಯುದಾಳಿ
