ಚಾಮರಾಜನಗರ: ಬಂಡೀಪುರದಲ್ಲಿ (Bandipur) ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಬೋಳಗುಡ್ಡದ ಸಮೀಪ ಹುಲಿ ಹಾಗೂ ಕರಡಿಯ ದರ್ಶನವಾಗಿದೆ.
ಇತ್ತೀಚೆಗಂತೂ ಪ್ರವಾಸಿಗರ ಆಕರ್ಷಣ ಕೇಂದ್ರಬಿಂದುವಾಗಿರುವ ಬಂಡೀಪುರ ಅಭಯಾರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸುವ ವನ್ಯಜೀವಿಗಳ ಪ್ರತ್ಯಕ್ಷ ದರ್ಶನ ಸಫಾರಿ ಪ್ರಿಯರನ್ನ ತಮ್ಮತ್ತ ತಿರುಗಿ ನೋಡುವಂತೆ ಮಾಡಿದೆ. ಇದನ್ನೂ ಓದಿ: ಸಕ್ರೆಬೈಲಿನಲ್ಲಿ ತರಬೇತಿ ವೇಳೆ ಆನೆ ಕಾಲಿಗೆ ಗಾಯ – ಗಜರಾಜನ ಮೂಕ ರೋದನೆ
ಸೊಂಪಾಗಿ ಸುರಿದ ವರುಣನ ಕೃಪೆಯಿಂದ ಬಿಸಿಲ ಬೇಗೆಗೆ ಬಸವಳಿದಿದ್ದ ಬಂಡೀಪುರವೀಗ ಹಸಿರಿನ ಮೈಸಿರಿ ಹೊದ್ದು ನಿಂತಿದೆ. ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆಯನ್ನ ಕ್ರಮೇಣವಾಗಿ ದುಪ್ಪಟ್ಟುಗೊಳ್ಳುವಂತೆ ಮೈನವಿರೇಳಿಸುವ ವನ್ಯಜೀವಿಗಳ ದರ್ಶನ ಜೊತೆಗೆ ಹಸಿರು ಕಾನನದ ನಡುವೆ ಸಿಗುವ ಅಹ್ಲಾದಕರ ಅನುಭವಕ್ಕೆ ವನ್ಯಪ್ರಿಯರು ಸೋತು ಹೋಗಿದ್ದಾರೆ. ಬೆಳ್ಳಂಬೆಳಗ್ಗೆ ಸಫಾರಿಗೆ ಹೊರಟವರಿಗೆ ಬೋಳಗುಡ್ಡದ ಸಮೀಪ ಮರಿಗಳನ್ನ ತನ್ನ ಬೆನ್ನ ಮೇಲಿರಿಸಿ ಮುಂದೆ ಸಾಗುವ ಕರಡಿ ಹಾಗೂ ಗಾಂಭೀರ್ಯದ ಹೆಜ್ಜೆ ಹಾಕುತ್ತ ಖಡಕ್ ಲುಕ್ ನೀಡಿ ಮುಂದೆ ಸಾಗಿದ ಹುಲಿಯ ದೃಶ್ಯಗಳು ದರ್ಶನವಾಗಿದೆ.
ಸಫಾರಿ ಮಾರ್ಗದ ಹಲವೆಡೆ ಹುಲಿಗಳ ದರ್ಶನವಾಗುತ್ತಿದ್ದು, ಕೆರೆಯ ಬಳಿ ಮರಿಗಳೊಟ್ಟಿಗೆ ತಾಯಿ ಹುಲಿ ವಿಶ್ರಮಿಸುವ ದೃಶ್ಯಾವಳಿಗಳು ಸಹ ಅನೇಕ ಬಾರಿ ಸೆರೆಯಾಗಿದೆ. ಇಂತಹ ಮನಮೋಹಕ ದೃಶ್ಯಗಳು ಪ್ರವಾಸಿಗರಿಗೆ ಮತ್ತೇ ಬಂಡೀಪುರದಲ್ಲಿ ಸಫಾರಿಗೆ ತೆರಳಬೇಕು ಎಂಬ ಕೌತುಕ ಸೃಷ್ಟಿಸಿವೆ. ಇದನ್ನೂ ಓದಿ: ಪರಿಹಾರ ನೀಡಲು KKRTC ಹಿಂದೇಟು: ಕೋರ್ಟ್ ಆದೇಶ ಉಲ್ಲಂಘಿಸಿದ್ದಕ್ಕೆ ಎರಡು ಸಾರಿಗೆ ಬಸ್ ಸೀಜ್
