– ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗೋದು ಒಳ್ಳೆಯದು
– ಬಿಎಸ್‍ವೈ ತೆಗಳಿ ಮಾಜಿ ಸಿಎಂ ಹೊಗಳಿದ ಮಾತೆ ಮಹಾದೇವಿ
ಬಾಗಲಕೋಟೆ: ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಮುಖ್ಯಮಂತ್ರಿಯಾಗಬೇಕು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕು ಎಂದು ಬಸವ ಧರ್ಮ ಪೀಠದ ಜಗದ್ಗುರು ಮಾತೆ ಮಹಾದೇವಿ ಹೇಳಿದ್ದಾರೆ.
ಜಿಲ್ಲೆಯ ಕೂಡಲಸಂಗಮದಲ್ಲಿ ನಡೆದ ಶರಣ ಮೇಳದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಎಷ್ಟು ಕೊಂಡಾಡಿದರೂ ಸಾಲದು. ಒಂದು ವೇಳೆ ಅವರ ಸ್ಥಾನದಲ್ಲಿ ಯಾರೇ ಇದ್ದಿದ್ದರೂ ಸಮಿತಿ ರಚನೆಗೆ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡುವ ಧೈರ್ಯ ಮಾಡುತ್ತಿರಲಿಲ್ಲ. ಸಿದ್ದರಾಮಯ್ಯರ ಕಾರ್ಯಕ್ಕೆ ಬೆಲೆ ಕಟ್ಟಲು ಆಗಲ್ಲ. ಆದರೆ ಕೆಲವರು ಸಿದ್ದರಾಮಯ್ಯ ಧರ್ಮ, ಜಾತಿ ಒಡೆಯುತ್ತಿದ್ದಾರೆ ಅಂತ ಅಪಪ್ರಚಾರ ಮಾಡಿದರು ಎಂದು ದೂರಿದರು.
Advertisement
Advertisement
ನಿವೃತ್ತ ನ್ಯಾ. ನಾಗಮೋಹನ ದಾಸ್ ವರದಿ ನಮಗೆ ದೊಡ್ಡ ಅಸ್ತ್ರ ಇದ್ದಂತೆ. ಅದರಿಂದ ಮುಂದೆ ನಮಗೆ ಯಶಸ್ಸು ಸಿಗುತ್ತದೆ. ಆದರೆ ಪ್ರತ್ಯೇಕ ಲಿಂಗಾಯತ ಹೋರಾಟದಿಂದ ಎಂ.ಬಿ.ಪಾಟೀಲ್ ಅವರಿಗೆ ಅನ್ಯಾಯವಾಯಿತು. ಅವರ ಉತ್ತಮ ಕಾರ್ಯಗಳಿಂದ ಚುನಾವಣೆಯಲ್ಲಿ ಜಯಗಳಿಸಿದರೂ ಮಂತ್ರಿ ಸ್ಥಾನ ಬೇಗ ಸಿಗಲಿಲ್ಲ. ನಿರಂತರ ಹೋರಾಟದಿಂದ ಎಂ.ಬಿ.ಪಾಟೀಲ್ ಅವರು ಗೃಹ ಸಚಿವರಾಗಿದ್ದು ನಮಗೆ ಸಂತಸ ತಂದಿದೆ ಎಂದರು.
Advertisement
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ನಾವು ಒಂದು ಹಂತದಲ್ಲಿ ಗೆದ್ದಿದ್ದೀವೆ. ಮುಂದೆ ಕಾನೂನಾತ್ಮಕ ಹೋರಾಟ ಮಾಡೋಣ. ನಮ್ಮ ಹೋರಾಟದ ರಾಜಕೀಯ ಮುಖಂಡರು ಎಂ.ಬಿ.ಪಾಟೀಲ್ ಅಂತ ನಿರ್ಣಯ ತೆಗೆದುಕೊಂಡಿದ್ದೇವೆ. ಅವರ ಮಾರ್ಗದರ್ಶನದಲ್ಲಿ ಎಲ್ಲ ಲಿಂಗಾಯತ ರಾಜಕಾರಣಿಗಳು ಮುನ್ನಡೆಯಬೇಕು. ಎಂ.ಬಿ.ಪಾಟೀಲ್ ಸಿಎಂ ಆಗಬೇಕು ಎನ್ನುವುದು ನಮ್ಮೆಲ್ಲರಿಗೂ ಕನಸು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕೂಡಲಸಂಗಮಕ್ಕೆ ಭೇಟಿ ನೀಡಿದಾಗ ಸಿಎಂ ಆಗಬೇಕು ಅಂತ ಸಂಕಲ್ಪ ಮಾಡಿದ್ದೇವು. ಅದರಂತೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಬಾರಿ ಎಂ.ಬಿ.ಪಾಟೀಲ ಅವರು ಸಿಎಂ ಆಗಬೇಕು ಅಂತ ಸಂಕಲ್ಪ ಮಾಡೋಣ ಎಂದ ಅವರು, ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾಣಕ್ಕೆ ಹೋಗುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಸಿದ್ದರಾಮಯ್ಯ ಅವರು ಬಸವಣ್ಣನವರ ವಚನ, ತತ್ವಗಳನ್ನು ಅಚ್ಚುಕಟ್ಟಾಗಿ ಹೇಳಿದ ವಿಡಿಯೋ ಒಂದನ್ನು ಇತ್ತೀಚಿಗೆ ಯೂಟ್ಯೂಬ್‍ನಲ್ಲಿ ನೋಡಿದ್ದೇನೆ. ಆದರೆ ಅದೇ ವೇದಿಕೆಯಲ್ಲಿದ್ದ ಬಿ.ಎಸ್.ಯಡಿಯೂರಪ್ಪ ಅವರಿಂದ ಒಂದೇ ಒಂದು ಬಾರಿಯೂ ಬಸವಣ್ಣನ ಶಬ್ದ ಬರಲಿಲ್ಲ. ಸಿದ್ದರಾಮಯ್ಯ ಅವರು ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಹೀಗಾಗಿ ಅವರು ರಾಷ್ಟ್ರ ರಾಜಕಾರಣಕ್ಕೆ ಮುಂದಾಗಬೇಕು ಎನ್ನುವುದು ನಮ್ಮ ಅಭಿಪ್ರಾಯ. ಈ ಸಂದೇಶವನ್ನು ಅವರಿಗೆ ಮುಟ್ಟಿಸುವ ಜವಾಬ್ದಾರಿ ಎಂ.ಬಿ.ಪಾಟೀಲ್‍ರಿಗೆ ಒಪ್ಪಿಸಿದ್ದೇನೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv