ಬೆಂಗಳೂರು: ರಾಜ್ಯದಲ್ಲಿ ನಿಷ್ಕ್ರಿಯವಾಗಿರೋ ಸರ್ಕಾರದ ಆಡಳಿತ ಯಂತ್ರ ದೆಹಲಿಗೆ ಶಿಫ್ಟ್ ಆಗಿದೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ (C.T.Ravi) ಸಿಎಂ-ಡಿಸಿಎಂ ಕುರ್ಚಿ ಪ್ರಹಸನದ ವಿರುದ್ಧ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಂಚೆಯೇ ಈ ಸರ್ಕಾರ ರಾಜ್ಯದಲ್ಲಿ ನಿಷ್ಕ್ರಿಯ ಆಗಿತ್ತು. ಈಗ ಸರ್ಕಾರದ ಯಂತ್ರ ದೆಹಲಿಗೆ ಶಿಫ್ಟ್ ಆಗಿದೆ. ಈ ಸರ್ಕಾರ ಮೊದಲೇ ಜನರ ಸಮಸ್ಯೆಗೆ ಸ್ಪಂದನೆ ನೀಡುತ್ತಿರಲಿಲ್ಲ. ಸ್ಪಂದನೆ ನೀಡಿದ್ದರೆ ಸಾರಿಗೆ ಇಲಾಖೆ, ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ ಮಾಡ್ತಾ ಇರಲಿಲ್ಲ. ಜನರ ಸಮಸ್ಯೆಗೆ ಸ್ಪಂದನೆ ಮಾಡೋ ಮನಸು ಈ ಸರ್ಕಾರಕ್ಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹೈಕಮಾಂಡ್ ಸಭೆಯಲ್ಲಿ ಡಿಕೆಶಿ ‘ತ್ರಿಶೂಲ ವ್ಯೂಹ’: ಮೂರು ಖಡಕ್ ಷರತ್ತು ವಿಧಿಸಿ ಬಿಗಿಪಟ್ಟು!

ಅಧಿಕಾರಕ್ಕೆ ಬರುವಾಗ ಭ್ರಷ್ಟಾಚಾರರಹಿತ ಆಡಳಿತ ಅಂದರು. ಈಗ 60% ಸರ್ಕಾರ ಆಗಿದೆ. ಯಾವ ಇಲಾಖೆಯಲ್ಲಿ ಲಂಚ ಮುಟ್ಟಲ್ಲ ಅನ್ನೋ ಸ್ಥಿತಿ ಇದೆ? ಯಾವ ಸಚಿವರು ನಾನು ಲಂಚ ಪಡೆಯಲ್ಲ ಅಂತ ಹೇಳೋ ಸ್ಥಿತಿಯಲ್ಲಿ ಇದ್ದಾರೆ. ಸಿಎಂ ಅವರೇ ಇಲ್ಲ. ಗ್ರಾಮಗಳಲ್ಲಿ ಕುಡಿಯುವ ನೀರು ಇಲ್ಲ. ಇಲಾಖೆ ಮಿನಿಸ್ಟರ್ ಬೇರೆ ಕಡೆ ಬ್ಯುಸಿ ಆಗಿದ್ದಾರೆ. ಮೋದಿ ಬೈಯೋದು, ಬಿಜೆಪಿ ಟೀಕೆ ಮಾಡೋದ್ರಲ್ಲಿ ಬ್ಯುಸಿ ಆಗಿದ್ದಾರೆ. ಜನರ ಸಮಸ್ಯೆ ಕೇಳೋರು ಯಾರು? ಜನರು ವಿಧಾನಸೌಧಕ್ಕೆ ಸಮಸ್ಯೆ ಕೇಳಿಕೊಂಡು ಬಂದರೆ ದೆಹಲಿಗೆ ಹೋಗಬೇಕಾ ಎಂದು ಪ್ರಶ್ನಿಸಿದರು.
ನನ್ನ ಪಟ್ಟ ಉಳಿಯುತ್ತೋ ಇಲ್ಲವೋ? ಯಾವ ಖಾತೆ ಸಿಗುತ್ತೋ ಅಂತ ದೆಹಲಿಯಲ್ಲಿ ಇದ್ದಾರೆ. ಜನರ ಸಮಸ್ಯೆ ಕೇಳೋಕೆ ಇವರಿಗೆ ಸಮಯ ಇಲ್ಲ. ಜನ 2023 ರಲ್ಲಿ 136 ಸ್ಥಾನ ಕೊಟ್ಟಿದ್ದಾರೆ. ನೀವು ಕಿತ್ತಾಡಿ, ಭ್ರಷ್ಟಾಚಾರ ಮಾಡಿ, ಬೆಲೆ ಏರಿಕೆ ಮಾಡಿ ಅಂತ ಅಧಿಕಾರ ಕೊಟ್ಟಿಲ್ಲ. ಈಗಲಾದ್ರು ಕುರ್ಚಿ ಗಲಾಟೆ ನಿಲ್ಲಿಸಿ. ನೀವು ಕುರ್ಚಿ ಗಲಾಟೆ ನಿಲ್ಲಿಸದೇ ಹೋದ್ರೆ ಕುರ್ಚಿ ಕೊಟ್ಟ ಅದೇ ಜನ ಕುರ್ಚಿಯಿಂದ ಇಳಿಸ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹೈವೋಲ್ಟೇಜ್ ಸಭೆಗೂ ಮುನ್ನ ಎಐಸಿಸಿ ಕಚೇರಿಯಲ್ಲಿ ಸಿದ್ದು-ಡಿಕೆಶಿ ಮುಖಾಮುಖಿ
ಧಾರಾವಾಹಿ ತರಹ ಕುರ್ಚಿ ಕದನ ನಡೆಯುತ್ತಿದೆ. ಸಿದ್ದರಾಮಯ್ಯ, ಡಿಕೆಶಿ ಸಿಎಂ ಅಂತ ಮಾತಾಡ್ತಾರೆ. ಪರಮೇಶ್ವರ, ಸತೀಶ್ ಜಾರಕಿಹೊಳಿ, ಖರ್ಗೆ ಹೆಸರು ಬರ್ತಿದೆ. ಇದರ ನಡುವೆ ಕರ್ನಾಟಕದ ಜನ ಸೊರಗುತ್ತಿದ್ದಾರೆ. ಜನರ ಸಮಸ್ಯೆಗೆ ಪರಿಹಾರ ಕೊಡುವ ಕೆಲಸ ಸರ್ಕಾರ ತೋರಿಸುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಸಿ.ಟಿ.ರವಿ ಕಿಡಿಕಾರಿದರು.
