ನವದೆಹಲಿ: ಕರ್ನಾಟಕ ರಾಜಕೀಯದ ಇವತ್ತಿನ ಅತ್ಯಂತ ದೊಡ್ಡ ಕುತೂಹಲಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಸಾಕ್ಷಿಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಮುಖ್ಯಮಂತ್ರಿ ಕುರ್ಚಿಯ ‘ಫೈನಲ್ ಫೈಟ್’ ಆರಂಭವಾಗಿದ್ದು, ಇಡೀ ರಾಜ್ಯದ ಕಣ್ಣು ಈಗ ದೆಹಲಿಯತ್ತ ನೆಟ್ಟಿದೆ.
ಹೈವೋಲ್ಟೇಜ್ ಸಭೆಗೂ ಮುನ್ನ ಎಐಸಿಸಿ (AICC) ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಪರಸ್ಪರ ಮುಖಾಮುಖಿಯಾಗಿದ್ದಾರೆ. ರಾಹುಲ್ ಗಾಂಧಿ (Rahul Gandhi) ಅವರೊಂದಿಗಿನ ಮಹತ್ವದ ಭೇಟಿಗೂ ಮುನ್ನ ಇಬ್ಬರೂ ನಾಯಕರು ಕೆಲಕಾಲ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ಇಂದು ಮೂರು ಸುತ್ತಿನ ನಿರ್ಣಾಯಕ ಸಭೆಗಳು ನಡೆಯಲಿವೆ. ಮೊದಲಿಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಹೈಕಮಾಂಡ್ ನಾಯಕರು ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಆಲಿಸಲಿದ್ದಾರೆ. ಸಿದ್ದರಾಮಯ್ಯ ಅವರ ಸಭೆಯ ಬೆನ್ನಲ್ಲೇ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಒನ್-ಟು-ಒನ್ ಚರ್ಚೆಗೆ ಕರೆದು ಹೈಕಮಾಂಡ್ ನಾಯಕರು ಮಾತನಾಡಲಿದ್ದಾರೆ.
ಮೊದಲ ಎರಡು ಸುತ್ತಿನ ಒನ್-ಟು-ಒನ್ ಮೀಟಿಂಗ್‌ನಲ್ಲಿ ಸಿಎಂ ಮತ್ತು ಡಿಸಿಎಂ ವ್ಯಕ್ತಪಡಿಸುವ ಅಭಿಪ್ರಾಯಗಳ ಆಧಾರದ ಮೇಲೆ ಈ ಮೂರನೇ ಸುತ್ತಿನ ಸಭೆ ನಿರ್ಧಾರವಾಗಲಿದೆ. ಅಗತ್ಯ ಬಿದ್ದರೆ ಮಾತ್ರ ಇಬ್ಬರೂ ನಾಯಕರನ್ನು ಒಟ್ಟಿಗೆ ಕೂರಿಸಿ ಹೈಕಮಾಂಡ್ ಅಂತಿಮ ಸಂಧಾನ ಸೂತ್ರದ ಚರ್ಚೆ ನಡೆಸಲಿದೆ.
ವಿಶೇಷ ಏನೆಂದರೆ ಇಬ್ಬರೂ ನಾಯಕರು ಬೆಳಗ್ಗೆ ಕರ್ನಾಟಕ ಭವನದಲ್ಲಿ ಇದ್ದರೂ ಪರಸ್ಪರ ಭೇಟಿಯಾಗಿರಲಿಲ್ಲ. ಆದರೆ ಎಐಸಿಸಿ ಕಚೇರಿಯಲ್ಲಿ ಇಬ್ಬರು ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
