ಚಾಮರಾಜನಗರ: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಶೂಟೌಟ್ (Hanur Shootout) ಮೃತಪಟ್ಟ ಮೂವರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮಗಳಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿಸಲಾಯಿತು.

ಮೃತದೇಹಗಳನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕಣ್ಣೀರಿನ ವಾತಾವರಣದ ನಡುವೆಯೇ ಅಂತಿಮ ವಿಧಿವಿಧಾನಗಳು ಪೂರ್ಣಗೊಂಡವು. ಇದೇ ವೇಳೆ ಮೃತರ ಕುಟುಂಬಗಳಿಗೆ ತಲಾ 15 ಲಕ್ಷ ರೂ. ಪರಿಹಾರ ವಿತರಿಸಲಾಗಿದ್ದು, ಘಟನಾ ಸ್ಥಳದಲ್ಲಿ ಜಿಂಕೆ ಮಾಂಸ ಹಾಗೂ ನಾಡಬಂದೂಕುಗಳನ್ನು ವಶಪಡಿಸಿಕೊಂಡಿರುವುದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಹನೂರು ತಾಲೂಕಿನ ಮರಿಯಮಂಗಲ ಗ್ರಾಮದ ಅಂತೋಣಿಸ್ವಾಮಿ, ಜಗನ್ನಾಥದೊಡ್ಡಿಯ ಪೀಟರ್ ಹಾಗೂ ಲಾಸರ್ ದೊಡ್ಡಿ ಗ್ರಾಮದ ಕುಮಾರ್ ಅವರ ಮೃತದೇಹಗಳನ್ನು ಮೈಸೂರಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸ್ವಗ್ರಾಮಗಳಿಗೆ ತರಲಾಯಿತು.
ಮೃತದೇಹಗಳನ್ನು ಮೆರವಣಿಗೆ ಮೂಲಕ ತಂದು ತೋಮಿಯಾರ್ ಪಾಳ್ಯ ಚರ್ಚ್‌ನಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಯಿತು. ತೋಮಿಯಾರ್ ಪಾಳ್ಯ ಚರ್ಚ್‌ನ ಧರ್ಮಗುರು ಫಾದರ್ ಕೆ. ಚಾರ್ಲ್ಸ್ ಜೋಸೆಫ್ ಅವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆ ಮತ್ತು ಸಾಮೂಹಿಕ ಪ್ರಾರ್ಥನೆಗಳು ನಡೆದವು.
ಸುಮಾರು ಒಂದು ಗಂಟೆ ಕಾಲ ನಡೆದ ಪ್ರಾರ್ಥನಾ ಕೂಟದಲ್ಲಿ 18 ಗ್ರಾಮಗಳ ಧರ್ಮಗುರುಗಳು, ಮೃತರ ಕುಟುಂಬಸ್ಥರು ಹಾಗೂ ಹನೂರು ಶಾಸಕ ಎಂ.ಆರ್. ಮಂಜುನಾಥ್ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು. ಪ್ರಾರ್ಥನೆ ಬಳಿಕ ಮರಿಯಮಂಗಲದಲ್ಲಿ ಪೀಟರ್ ಹಾಗೂ ಅಂತೋಣಿಸ್ವಾಮಿ ಮತ್ತು ತೋಮಿಯಾರ್ ಪಾಳ್ಯದಲ್ಲಿ ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದನ್ನೂ ಓದಿ: ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದ್ರು – ಹನೂರು ಎನ್‌ಕೌಂಟರ್ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
ವಸ್ತುಗಳ ಜಪ್ತಿ
ಎರಡು ಚೀಲಗಳಲ್ಲಿದ್ದ ಒಟ್ಟು 34.25 ಕೆಜಿ ಜಿಂಕೆ ಮಾಂಸವನ್ನು ವಶಪಡಿಸಿಕೊಳ್ಳಲಾಗಿದ್ದು, ಮಾಂಸದ ಮೇಲೆ ಮೂರು ಗುಂಡೇಟಿನ ಗುರುತುಗಳು ಪತ್ತೆಯಾಗಿವೆ. ಘಟನಾ ಸ್ಥಳದಲ್ಲಿದ್ದ ಎರಡು ಸಿಂಗಲ್ ಬ್ಯಾರೆಲ್ ಮಜಲ್ ಲೋಡೆಡ್ (SBML) ನಾಡಬಂದೂಕುಗಳನ್ನು ವಶಪಡಿಸಿಕೊಂಡಿದ್ದು, ಈ ಕುರಿತು ಅರಣ್ಯ ಇಲಾಖೆ ಫೋಟೋಗಳನ್ನು ಬಿಡುಗಡೆ ಮಾಡಿದೆ.
15 ಲಕ್ಷ ಪರಿಹಾರ
ಮೃತರ ಕುಟುಂಬಗಳಿಗೆ ಮಾನವೀಯತೆಯ ದೃಷ್ಟಿಯಿಂದ ಒಟ್ಟು 15 ಲಕ್ಷ ರೂ. ಪರಿಹಾರ ಮೊತ್ತವನ್ನು ಶಾಸಕ ಮಂಜುನಾಥ್ (Manjunath) ವಿತರಿಸಿದರು. ಸರ್ಕಾರದಿಂದ ತಲಾ 5 ಲಕ್ಷ ಲಕ್ಷ ರೂ. ಜಿಲ್ಲಾ ಉಸ್ತುವಾರಿ ಸಚಿವರ ನೆರವಿನಿಂದ ತಲಾ 2 ಲಕ್ಷ ರೂ., ಶಾಸಕರ ವೈಯಕ್ತಿಕವಾಗಿ ತಲಾ 8 ಲಕ್ಷ ರೂ. ನೆರವು ನೀಡಿದರು.
ನ್ಯಾಯಾಂಗ ತನಿಖೆಗೆ ಆಗ್ರಹ:
ಪ್ರಕರಣದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆಯಾದರೂ, ಈ ತನಿಖೆಯಿಂದ ನ್ಯಾಯ ಸಿಗುವುದಿಲ್ಲ ಎಂದು ಮೃತರ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆಯ ಸತ್ಯಾಸತ್ಯತೆ ಹೊರಬರಲು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲೇ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
