ನಗೋಯಾ: ಗುರುವಾರ ಏಷ್ಯನ್ ಗೇಮ್ಸ್ನಲ್ಲಿ (Asian Games) ಭಾರತ (India) ದಿನದ ಆರಂಭದಲ್ಲೇ ಎರಡು ಪದಕಗಳನ್ನು ಗೆಲ್ಲುವ ಮೂಲಕ ಉತ್ತಮ ಪ್ರದರ್ಶನ ನೀಡಿತು. ವುಶು (Wushu) ಸ್ಪರ್ಧೆಯಲ್ಲಿ ರೋಷಿಬಿನಾ ದೇವಿ ಬೆಳ್ಳಿ ಪದಕ ಗೆದ್ದರೆ, ರೋಯಿಂಗ್ನಲ್ಲಿ (Rowing) ಸತ್ನಾಂ ಸಿಂಗ್ ಮತ್ತು ಸಲ್ಮಾನ್ ಖಾನ್ ಜೋಡಿ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ.
ಜಪಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಕ್ರೀಡಾಪಟುಗಳು ಪದಕದ ಬೇಟೆ ಮುಂದುವರಿಸಿದ್ದಾರೆ. ಮಹಿಳೆಯರ ಸಾಂಡಾ 60 ಕೆ.ಜಿ ವಿಭಾಗದಲ್ಲಿ ಭಾರತದ ಸ್ಟಾರ್ ವುಶು ಆಟಗಾರ್ತಿ ರೋಷಿಬಿನಾ ದೇವಿ ಬೆಳ್ಳಿ ಪದಕ ಗೆದ್ದಿದ್ದಾರೆ. 2022ರ ಹ್ಯಾಂಗ್ಝೌ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ರೋಶಿಬಿನಾ, ಚೀನಾದ ಝಾಂಗ್ ಶಿಯಾವೊಯು ವಿರುದ್ಧದ ಎರಡೂ ಸುತ್ತುಗಳಲ್ಲಿ 0-5 ಅಂತರದಿಂದ ಸೋಲನ್ನಪ್ಪಿದರು. ಇದರೊಂದಿಗೆ ಚೀನಾದ ಆಟಗಾರ್ತಿ 2-0 ಅಂತರದಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಇದು ಏಷ್ಯನ್ ಗೇಮ್ಸ್ನಲ್ಲಿ ಅವರ ಎರಡನೇ ಬೆಳ್ಳಿ ಪದಕವಾಗಿದೆ. ಇದನ್ನೂ ಓದಿ: ಆನೇಕಲ್ ರಸ್ತೆ ಬದಿಯ ಪೊದೆಯಲ್ಲಿ ಶವ ಪತ್ತೆ – ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ
ರೋಷಿಬಿನಾಗೆ ಮೂರನೇ ಏಷ್ಯನ್ ಗೇಮ್ಸ್ ಪದಕ:
ರೋಷಿಬಿನಾ ದೇವಿಗೆ ಇದು ಏಷ್ಯನ್ ಗೇಮ್ಸ್ನಲ್ಲಿ ಮೂರನೇ ಪದಕವಾಗಿದೆ. 2018ರ ಜಕಾರ್ತಾ-ಪಾಲೆಂಬಾಂಗ್ ಏಷ್ಯನ್ ಗೇಮ್ಸ್ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. 2023ರ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ರೋಷಿಬಿನಾ, ಇದೀಗ ಮತ್ತೊಮ್ಮೆ ಬೆಳ್ಳಿ ಪದಕ ಗೆದ್ದಿದ್ದಾರೆ. ಇದರೊಂದಿಗೆ ಏಷ್ಯನ್ ಗೇಮ್ಸ್ನಲ್ಲಿ ಸತತ ಮೂರು ಆವೃತ್ತಿಗಳಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ವುಶು ಆಟಗಾರ್ತಿ ಎಂಬ ವಿಶೇಷ ಸಾಧನೆಯನ್ನು ರೋಷಿಬಿನಾ ಮಾಡಿದ್ದಾರೆ. ಇದನ್ನೂ ಓದಿ: ಕೆಪಿಎಸ್ಸಿ ಹಗರಣ – ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಶಾಂತಾ ಹೊಸಮನಿ
ಫೈನಲ್ಗೂ ಮುನ್ನ ರೋಷಿಬಿನಾ ಉತ್ತಮ ಪ್ರದರ್ಶನ ನೀಡಿದ್ದರು. ಸೆಮಿಫೈನಲ್ನಲ್ಲಿ ಇಂಡೋನೇಷ್ಯಾದ ಥಾನಿಯಾ ಕುಸುಮಂತಿಂಗ್ಯಾಸ್ ಅವರನ್ನು 2-0 ಅಂತರದಲ್ಲಿ ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟಿದ್ದರು. ಇದಕ್ಕೂ ಮುನ್ನ 2023ರ ವಿಶ್ವ ಚಾಂಪಿಯನ್ ವಿಯೆಟ್ನಾಂನ ನ್ಗುಯೆನ್ ಥಿ ಥು ಥುಯ್ ವಿರುದ್ಧವೂ ರೋಷಿಬಿನಾ ಗೆಲುವು ಸಾಧಿಸಿದ್ದರು. ಇದನ್ನೂ ಓದಿ: ಹಾಸನ | ಬೈಕ್ ಸ್ಕಿಡ್ ಆಗಿ ಹೇಮಾವತಿ ನಾಲೆಗೆ ಬಿದ್ದು ಯುವಕ ಸಾವು
ರೋಯಿಂಗ್ನಲ್ಲಿ ಸತ್ನಾಂ-ಸಲ್ಮಾನ್ಗೆ ಕಂಚು:
ಇದೇ ವೇಳೆ ರೋಯಿಂಗ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದುಬಂದಿದೆ. ಪುರುಷರ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಸತ್ನಾಂ ಸಿಂಗ್ ಮತ್ತು ಸಲ್ಮಾನ್ ಖಾನ್ ಜೋಡಿ ಕಂಚಿನ ಪದಕ ಗೆದ್ದಿದೆ. ನಾಗರಗಾವಾ ಇಂಟರ್ನ್ಯಾಷನಲ್ ರೆಗಟ್ಟಾ ಕೋರ್ಸ್ನಲ್ಲಿ ನಡೆದ ಫೈನಲ್ನಲ್ಲಿ ಭಾರತೀಯ ಜೋಡಿ 6:13.25 ಸಮಯದಲ್ಲಿ ಗುರಿ ತಲುಪಿತು. ಈ ಜೋಡಿ 1,500 ಮೀಟರ್ವರೆಗೆ ಎರಡನೇ ಸ್ಥಾನದಲ್ಲಿತ್ತು. ಆದರೆ ಅಂತಿಮ 500 ಮೀಟರ್ನಲ್ಲಿ ಚೀನಾದ ಹಾಗೂ ಉಜ್ಬೇಕಿಸ್ತಾನದ ಜೋಡಿಗಳ ವೇಗ ಹೆಚ್ಚಾದ ಕಾರಣ ಭಾರತ ಮೂರನೇ ಸ್ಥಾನ ಗಿಟ್ಟಿಸಿಕೊಂಡಿತು. ಚೀನಾದ ಯಿ ಕ್ಸುಡಿ ಮತ್ತು ಯಿಡೆ ನೀ ಜೋಡಿ 6:09.37 ಸಮಯದಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದಿತು. ಉಜ್ಬೇಕಿಸ್ತಾನದ ಪಾವೆಲ್ ಸೊರಿನ್ ಮತ್ತು ಮೆಖ್ರೋಜ್ಬೆಕ್ ಮಮತ್ಕುಲೋವ್ 6:10.49 ಸಮಯದೊಂದಿಗೆ ಬೆಳ್ಳಿ ಪದಕ ಪಡೆದರು. ಇದನ್ನೂ ಓದಿ: ಮಂಡ್ಯದಲ್ಲಿ ಆಟೋ ಸ್ಟ್ಯಾಂಡ್ ಪಾಲಿಟಿಕ್ಸ್ – ಹೆಚ್ಡಿಕೆ-`ಕೈ’ ಶಾಸಕರ ನಡುವೆ ವಾರ್!
ಸತ್ನಾಂಗೆ ಮತ್ತೊಂದು ಏಷ್ಯನ್ ಗೇಮ್ಸ್ ಪದಕ:
ಸತ್ನಾಂ ಸಿಂಗ್ ಅವರಿಗೆ ಇದು ಏಷ್ಯನ್ ಗೇಮ್ಸ್ನಲ್ಲಿ ಎರಡನೇ ಪದಕವಾಗಿದೆ. ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಪುರುಷರ ಕ್ವಾಡ್ರಪಲ್ ಸ್ಕಲ್ಸ್ ವಿಭಾಗದಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ಇದನ್ನೂ ಓದಿ: ಚಲಿಸುತ್ತಿದ್ದಾಗಲೇ ಸ್ಲೀಪರ್ ಬಸ್ನಲ್ಲಿ ಬೆಂಕಿ – 9 ಮಂದಿ ಸಜೀವ ದಹನ
ಬಾಲರಾಜ್ ಪನ್ವಾರ್ಗೆ ಪದಕ ಮಿಸ್:
ರೋಯಿಂಗ್ನ ಪುರುಷರ ಸಿಂಗಲ್ ಸ್ಕಲ್ಸ್ ವಿಭಾಗದಲ್ಲಿ ಭಾರತದ ಬಾಲರಾಜ್ ಪನ್ವಾರ್ ಪದಕ ಗೆಲ್ಲುವ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡರು. ಪನ್ವಾರ್ 6:54.80 ಸಮಯದಲ್ಲಿ ಸ್ಪರ್ಧೆ ಪೂರ್ಣಗೊಳಿಸಿ ನಾಲ್ಕನೇ ಸ್ಥಾನ ಪಡೆದರು. 500, 1,000 ಮತ್ತು 1,500 ಮೀಟರ್ಗಳವರೆಗೆ ಅವರು ಎರಡನೇ ಸ್ಥಾನದಲ್ಲಿದ್ದರು. ಆದರೆ ಅಂತಿಮ 500 ಮೀಟರ್ನಲ್ಲಿ ನಾಲ್ಕನೇ ಸ್ಥಾನಕ್ಕೆ ಜಾರಿದರು. ಚೀನಾದ ಡೆಂಗ್ ಝಿವೇ 6:38.98 ಸಮಯದಲ್ಲಿ ಚಿನ್ನದ ಪದಕ ಗೆದ್ದರು. ಇದನ್ನೂ ಓದಿ: SIR ಎಂದರೆ ಬಿಜೆಪಿಗೆ ವಿಶೇಷ ಪ್ರೋತ್ಸಾಹ ಧನ – ಮುಖ್ಯ ಚುನಾವಣಾ ಆಯುಕ್ತರ ಬಂಧನಕ್ಕೆ ದೀದಿ ಒತ್ತಾಯ

