ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಅಕ್ರಮ ಕೇಸಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ (Shantha Hosamani) ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಕೆಲ ದಿನಗಳ ಹಿಂದೆಯಷ್ಟೇ ಶಾಂತಾ ಹೊಸಮನಿ ಕೋರಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನ 52ನೇ ಸಿಸಿಹೆಚ್ ಕೋರ್ಟ್ ವಜಾ ಮಾಡಿತ್ತು. ಹೋಗಾಗಿ ಹೀಗಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
384 ಪರೀಕ್ಷಾ ಅಕ್ರಮದಲ್ಲಿ ಶಾಂತಾ ಹೊಸಮನಿ ಕಿಂಗ್ಪಿನ್
ಕೆಪಿಎಸ್ಸಿ ಅಕ್ರಮದಲ್ಲಿ ಮಾಜಿ ಸದಸ್ಯೆ ಶಾಂತಾ ಹೊಸಮನಿಯೇ ಕಿಂಗ್ ಪಿನ್ ಆಗಿರುವುದು ಸಿಐಡಿ (CID) ಅಧಿಕಾರಿಗಳಿಗೆ ಮಹತ್ವದ ಸಾಕ್ಷ್ಯಗಳು ಈಗಾಗಲೇ ಲಭ್ಯವಾಗಿವೆ. 384 ಕೆಎಎಸ್ ಪರೀಕ್ಷಾ ಅಕ್ರಮದಲ್ಲಿ ಶಾಂತಾ ಹೊಸಮನಿ ಕಿಂಗ್ ಪಿನ್ ಆಗಿದ್ದಾರೆ ಅನ್ನೋದನ್ನ ಸಿಐಡಿ ಪತ್ತೆ ಮಾಡಿತ್ತು. ಅಲ್ಲದೇ ಶಾಂತಾ ಹೊಸಮನಿ ಮೂಲಕ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಯ 10 ಅಭ್ಯರ್ಥಿಗಳು ಕೆಎಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಮಾಹಿತಿ ಸಹ ಸಿಐಡಿ ಕೈ ಸೇರಿದೆ. ಮುಂದಿನ ದಿನಗಳಲ್ಲಿ ಆ ಅಭ್ಯರ್ಥಿಗಳ ಮನೆ ಮೇಲು ಸಹ ಸಿಐಡಿ ಅಧಿಕಾರಿಗಳು ದಾಳಿ ನಡೆಸುವ ಸಾಧ್ಯತೆಗಳಿವೆ.

ಕೆಪಿಎಸ್ಸಿ ಪ್ರಕರಣದ ಹಿನ್ನೆಲೆ ಏನು?
ಕೆಪಿಎಸ್ಸಿ ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ, ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಒಪ್ಪಿಸಬೇಕೆಂದು ಕೋರಿ ದೂರುದಾರ ಮಂಜುನಾಥ್ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಧಾರವಾಡ ಹೈಕೋರ್ಟ್ ಪೀಠವು ಸೋಮವಾರ (ಸೆ.21) ಮಹತ್ವದ ಆದೇಶ ಹೊರಡಿಸಿತ್ತು. ಸಿಬಿಐಗೆ ವಹಿಸುವ ಬದಲು ಹಿರಿಯ ಐಪಿಎಸ್ ಅಧಿಕಾರಿ, ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ವಿಶೇಷ ತನಿಖಾ ತಂಡ (SIT) ರಚಿಸಿ ಆದೇಶಿಸಿತ್ತು.
ಡಿಜಿಪಿ ಅಲೋಕ್ ಕುಮಾರ್ ನೇತೃತ್ವದ ತಂಡದಲ್ಲಿ ಐಪಿಎಸ್ ಅಧಿಕಾರಿಗಳಾದ ದಿವ್ಯಾ ಗೋಪಿನಾಥ್, ಅನೂಪ್ ಶೆಟ್ಟಿ, ಕುಶಾಲ್ ಚೋಕ್ಸಿ ಹಾಗೂ ಕ್ಷಮಾ ಮಿಶ್ರಾ ಅವರನ್ನೊಳಗೊಂಡ 5 ಸದಸ್ಯರ ಸಮಿತಿಯನ್ನು ರಚಿಸಿತ್ತು. ಪ್ರಕರಣವನ್ನು ಪ್ರಸ್ತುತ ತನಿಖೆ ನಡೆಸುತ್ತಿರುವ ಸಿಐಡಿ (CID), ಒಂದು ವಾರದೊಳಗೆ ಎಲ್ಲಾ ದಾಖಲೆಗಳು ಹಾಗೂ ತನಿಖಾ ಮಾಹಿತಿಯನ್ನು ನೂತನ ಎಸ್ಐಟಿಗೆ ಹಸ್ತಾಂತರಿಸಬೇಕು. ಎಸ್ಐಟಿ ತಂಡವು 100 ದಿನಗಳ ಒಳಗೆ ಸಮಗ್ರ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಬೇಕು ಎಂದು ಸೂಚಿಸಿತ್ತು.
ಹೈಕೋರ್ಟ್ ನಿಗದಿಪಡಿಸಿರುವ 17 ಕಠಿಣ ಮಾರ್ಗಸೂಚಿಗಳ ಅನ್ವಯವೇ ತನಿಖೆ ನಡೆಯಬೇಕು ಹಾಗೂ ಪ್ರತಿ 30 ದಿನಗಳಿಗೊಮ್ಮೆ ತನಿಖೆಯ ಪ್ರಗತಿ ವರದಿಯನ್ನು ಹೈಕೋರ್ಟ್ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಸೂಚಿಸಿ ಪ್ರಕರಣದ ಮುಂದಿನ ವಿಚಾರಣೆಯನ್ನು 2027ರ ಜನವರಿ 17ಕ್ಕೆ ಮುಂದೂಡಿತ್ತು.

