ದತ್ತಪೀಠಕ್ಕೆ ತಾತ್ಕಾಲಿಕ ಹಿಂದೂ ಅರ್ಚಕರ ನೇಮಕ- ಬಿಜೆಪಿಯಿಂದ ಸಂಭ್ರಮಾಚರಣೆ
ಚಿಕ್ಕಮಗಳೂರು: ಹಿಂದೂಗಳ ದಶಕಗಳ ಕನಸು ಹಾಗೂ ಹೋರಾಟಕ್ಕೆ ತಾತ್ಕಾಲಿಕ ಜಯ ಸಿಕ್ಕಿದ್ದು, ದತ್ತಜಯಂತಿಗಾಗಿ ದತ್ತ ಪೀಠಕ್ಕೆ ತಾತ್ಕಾಲಿಕವಾಗಿ ಹಿಂದೂ ಅರ್ಚಕರ ನೇಮಕವಾಗಿದೆ.
ದತ್ತಪೀಠಕ್ಕೆ (Datta Peeta) ಹಿಂದೂ ಅರ್ಚಕರನ್ನು ನೇಮಿಸಬೇಕು ಎಂದು ಸುಮಾರು ಮೂರ್ನಾಲ್ಕು ದಶಕಗಳಿಂದಲೂ ಹಿಂದೂ ಸಂಘಟನೆಗಳು ಹೋರಾಡುತ್ತಿದ್ದರು. ಹೋರಾಟದ ಫಲವಾಗಿ ಇಂದು ರಾಜ್ಯ ಸರ್ಕಾರವು ದತ್ತಜಯಂತಿಗೆ ಹಿಂದೂ ಅರ್ಚಕರ ನೇಮಕ ಮಾಡಿದೆ. ಈ ವಿಷಯವು ಇದೀಗ ಬಿಜೆಪಿ (BJP) ಹಾಗೂ ಹಿಂದೂಸಂಘಟನೆಗಳಿಗೆ ಡಬಲ್ ಖುಷಿ ತಂದಿದೆ. ಈ ಮೂಲಕ 2018ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಎಂದು ಹೇಳಿತ್ತು. ಅದರಂತೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ.
ದತ್ತಪೀಠದ ಹಿಂದೂ ಅರ್ಚಕರಾಗಲು ಇಬ್ಬರು ಅರ್ಜಿ ಹಾಕಿದ್ದರು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ಶ್ರೀಕಾಂತ್ ಹಾಗೂ ಚಿಕ್ಕಬಳ್ಳಾಪುರ ಮೂಲದ ಸಂದೀಪ್ ಅರ್ಜಿ ಹಾಕಿದ್ದರು. ದತ್ತಜಯಂತಿಗೆ ತುರ್ತಾಗಿ, ತಾತ್ಕಾಲಿಕಕ್ಕೆ ಇಬ್ಬರು ಬೇಕಿದ್ದ ಕಾರಣ ಆ ಇಬ್ಬರನ್ನೇ ಸರ್ಕಾರ ದತ್ತಪೀಠಕ್ಕೆ ಹಿಂದೂ ಅರ್ಚಕರಾಗಿ ನೇಮಕ ಮಾಡಿ ಆದೇಶಿಸಿದೆ. ಆದರೆ ಈ ಆಯ್ಕೆ ತಾತ್ಕಾಲಿಕವಾಗಿದ್ದು, ಮೂರು ದಿನದ ದತ್ತಜಯಂತಿ ಕಾರ್ಯಕ್ರಮಕ್ಕಾಗಿ ಅಷ್ಟೇ ಆಗಿದೆ.
ಡಿಸೆಂಬರ್ 1ರಂದು ಹೈಕೋರ್ಟ್ ದತ್ತಪೀಠದಲ್ಲಿ ಆಡಳಿತ ಸಮಿತಿಯ ನಿರ್ಧಾರದಂತೆ ಪೂಜೆ-ಪುನಸ್ಕಾರಗಳು ನಡೆಯಬೇಕೆಂದು ಆದೇಶ ನೀಡಿದ ಹಿನ್ನೆಲೆಯಲ್ಲಿ, ಆಡಳಿತ ಮಂಡಳಿ ಕೂಡ ಹಿಂದೂ ಅರ್ಚಕರ ಪೂಜೆಯೊಂದಿಗೆ ದತ್ತಜಯಂತಿ ಆಚರಣೆಗೆ ನಿರ್ಧರಿಸಿತ್ತು. ಹಾಗಾಗಿ ರಾಜ್ಯ ಸರ್ಕಾರ ಕೂಡ ಮೂರು ದಿನಗಳ ಮಟ್ಟಿಗೆ ಇಬ್ಬರು ಅರ್ಚಕರನ್ನು ನೇಮಕ ಮಾಡಿ ಆದೇಶಿಸಿದೆ. ಇದನ್ನೂ ಓದಿ: ಬಿಜೆಪಿ, ಆರ್‌ಎಸ್‍ಎಸ್ ವಿರುದ್ಧ ರಾಹುಲ್ ಸೀತಾ ಅಸ್ತ್ರ
ದತ್ತಪೀಠಕ್ಕೆ ಶಾಶ್ವತ ಅರ್ಚಕರ ನೇಮಕಕ್ಕೆ ಕನಿಷ್ಠ ಎರಡರಿಂದ ಮೂರು ತಿಂಗಳು ಕಾಲಾವಕಾಶಬೇಕು. ಪೇಪರ್ ನೋಟಿಫಿಕೇಶನ್ ಹೊರಡಿಸಬೇಕು. ಟೆಂಡರ್ ಪ್ರೊಸೆಸ್ ಯಾವ ರೀತಿ ಇರುತ್ತೋ ಅದೇ ರೀತಿ ನಡೆಯಬೇಕು. ಆ ಪ್ರಕ್ರಿಯೆಗೆ ತಡವಾಗುತ್ತೆ ಎಂದು ಸರ್ಕಾರ ದತ್ತಪೀಠದಲ್ಲಿ ಇದೇ ಡಿಸೆಂಬರ್ 6, 7, 8 ರಂದು ನಡೆಯುವ ದತ್ತಜಯಂತಿಗಾಗಿ ಇಬ್ಬರು ಅರ್ಚಕರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯ ಸರ್ಕಾರದ ನಡೆಯನ್ನ ಸ್ವಾಗತಿಸಿದೆ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ- ಮದುವೆಯಾಗಿ ಒಂದೂವರೆ ವರ್ಷಕ್ಕೆ ಗೃಹಿಣಿ ಆತ್ಮಹತ್ಯೆ