ಹಾಸನ: ಗೊರೂರಿನ ಬಳಿ ಈಜಲು ಹೇಮಾವತಿ ನದಿಗೆ (Hemavati River) ಇಳಿದಿದ್ದ ಬೆಂಗಳೂರು (Bengaluru) ಮೂಲದ ಮೂವರು ಯುವಕರು ನೀರು ಪಾಲಾಗಿದ್ದಾರೆ.
ಚರಣ್ (20), ಮಿಲನ್ (23), ಮಣಿಕಂಠ (20) ಮೃತ ಯುವಕರು. ಆರು ಯುವಕರು ಹಾಗೂ ನಾಲ್ವರು ಯುವತಿಯರು ಒಟ್ಟಾಗಿ ಐದು ಸ್ಕೂಟಿಯಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳಿ ವಾಪಾಸ್ ಆಗುತ್ತಿದ್ದರು. ಬರುವಾಗ ಗೂಗಲ್ ಮ್ಯಾಪ್‌ನಲ್ಲಿ ಪ್ರವಾಸಿ ತಾಣ ಹುಡುಕಿ ಹೇಮಾವತಿ ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ಬಂದಿದ್ದರು.
ಚರ್ಚ್ ಬಳಿ ಹೇಮಾವತಿ ನದಿಯ ಹಿನ್ನೀರಿಯಲ್ಲಿ ಈಜಲು ಮೂವರು ಯುವಕರು ಇಳಿದಿದ್ದರು. ಉಳಿದವರು ದಡದಲ್ಲಿ ಕುಳಿತಿದ್ದರು. ಈಜು ಬಾರದ ಕಾರಣ ಮೂವರು ಯುವಕರು ನೀರಿನಲ್ಲಿ ಮುಳುಗಿದ್ದಾರೆ. ಕೂಡಲೇ ಉಳಿದ ಸ್ನೇಹಿತರು ನೀರಿನಲ್ಲಿ ಮುಳುಗುವುದನ್ನು ಕಂಡು ಕಿರುಚಾಡಿದ್ದಾರೆ. ಆದರೆ ಇವರನ್ನು ಹೊರತುಪಡಿಸಿ ಬೇರೆ ಯಾರು ಸ್ಥಳದಲ್ಲಿ ಇರಲಿಲ್ಲ. ಯಾರಿಗೂ ಈಜು ಬಾರದೇ ಇದ್ದಿದ್ದರಿಂದ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಇಬ್ಬರ ಯುವಕರ ಶವವನ್ನು ಹೊರತೆಗೆದಿದ್ದಾರೆ. ಕತ್ತಲಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಸೋಮವಾರ ಬೆಳಗ್ಗೆ ಮತ್ತೋರ್ವ ಯುವಕನ ಶವ ಶೋಧ ಕಾರ್ಯ ಮುಂದುವರೆಯಲಿದೆ. ಸ್ಥಳಕ್ಕೆ ಗೊರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
