ಬೆಂಗಳೂರು: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು(ASHA Workers) ನಡೆಸುತ್ತಿದ್ದ 13 ದಿನಗಳ ಸುದೀರ್ಘ ಅಹೋರಾತ್ರಿ ಹೋರಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಮಾಸಿಕ 2,000 ರೂ. ಗೌರವಧನ ಹೆಚ್ಚಳ ಮಾಡುವ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಲಿಖಿತ ಆದೇಶ (ಟಿಪ್ಪಣಿ) ಹೊರಡಿಸಿದ ಬೆನ್ನಲ್ಲೇ, ಎಐಯುಟಿಯುಸಿ (AIUTUC) ನೇತೃತ್ವದ ಆಶಾ ಸಂಘಟನೆ ಮುಖಂಡರು ಹೋರಾಟವನ್ನು ಅಧಿಕೃತವಾಗಿ ಹಿಂಪಡೆದಿದ್ದಾರೆ.
ಸರ್ಕಾರದ ಲಿಖಿತ ಆದೇಶ ಕೈಸೇರಿದ ಬಳಿಕ ಮಾತನಾಡಿದ ಆಶಾ ಸಂಘಟನೆ ಕಾರ್ಯದರ್ಶಿ ನಾಗಲಕ್ಷ್ಮಿ, “ಮೂರ್ನಾಲ್ಕು ಬಾರಿ ಸಭೆಗಳನ್ನು ನಡೆಸಿದ ಬಳಿಕ ಈಗ ಅಧಿಕೃತ ಲಿಖಿತ ಪತ್ರ ನಮ್ಮ ಕೈಸೇರಿದೆ. ಹೀಗಾಗಿ ಹೋರಾಟವನ್ನು ಕೈಬಿಟ್ಟಿದ್ದೇವೆ. ಇದು ಆಶಾ ಸಹೋದರಿಯರ ಅಭೂತಪೂರ್ವ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ” ಎಂದು ಸಂತಸ ವ್ಯಕ್ತಪಡಿಸಿದರು.
ಜನವರಿ ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ಒಟ್ಟು 11,000 ದಿಂದ 11,500 ರೂ. ರವರೆಗೆ ವೇತನ ಸಿಗಲಿದೆ. ಟೀಮ್ ಬೇಸ್ಡ್ ಇನ್ಸೆಂಟಿವ್ (ಪ್ರೋತ್ಸಾಹಧನ) ಕುರಿತು ಸರ್ಕಾರ ಮತ್ತೊಂದು ಪ್ರತ್ಯೇಕ ಆದೇಶ ಪ್ರತಿ ಹೊರಡಿಸಲಿದೆ. ನಿವೃತ್ತಿ ಬಳಿಕ ಇಡಿಗಂಟು ನೀಡುವುದು, ಮೊಬೈಲ್ ವಿತರಣೆ ಸೇರಿದಂತೆ ಇನ್ನುಳಿದ ಬೇಡಿಕೆಗಳ ಬಗ್ಗೆ ಡಿಸೆಂಬರ್ 10ರ ಒಳಗೆ ಮತ್ತೊಂದು ಹಂತದ ಸಭೆ ನಡೆಸಲು ಸರ್ಕಾರ ಒಪ್ಪಿದೆ” ಎಂದು ಅವರು ಮಾಹಿತಿ ನೀಡಿದರು.
ಹೋರಾಟದ ರಾಜ್ಯಾಧ್ಯಕ್ಷ ಸೋಮಶೇಖರ್ ಮಾತನಾಡಿ, “ಜನವರಿಯಿಂದ ನಿಶ್ಚಿತ 10,000 ರೂ. ವೇತನದ ಜೊತೆಗೆ ಕೆಲಸದ ಪ್ರದರ್ಶನದ ಆಧಾರದ ಮೇಲೆ ಹೆಚ್ಚುವರಿ ಹಣವೂ ಸಿಗಲಿದೆ. ಹೋರಾಟದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕಾರ್ಯಕರ್ತೆಯರು ಕೆಲಸಕ್ಕೆ ಹಾಜರಾಗದಿದ್ದರೂ, ಈ ತಿಂಗಳ ಗೌರವಧನವನ್ನು ಕಡಿತಗೊಳಿಸದೆ ಪೂರ್ಣವಾಗಿ ನೀಡಲು ಸರ್ಕಾರ ಒಪ್ಪಿಕೊಂಡಿದೆ” ಎಂದು ತಿಳಿಸಿದರು. ಅಲ್ಲದೆ, ಆಶಾ ಕಾರ್ಯಕರ್ತೆಯರು ಬರೆಯಬೇಕಿರುವ ಎನ್ಐಒಎಸ್ (NIOS) ಪರೀಕ್ಷೆಯನ್ನು ಮುಂದೂಡುವಂತೆ ಸರ್ಕಾರಕ್ಕೆ ಒತ್ತಾಯಿಸಿರುವುದಾಗಿ ಹೇಳಿದರು.
ಫ್ರೀಡಂಪಾರ್ಕ್ನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆಶಾಗಳು ಸೇರಿ ಚಳುವಳಿ ನಡೆಸಿದ್ದು ಒಂದು ಇತಿಹಾಸ. ನಮ್ಮ ಹೋರಾಟಕ್ಕೆ ಬೆಂಬಲವಾಗಿ ನಿಂತ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು, ಕಲಾವಿದರು, ಸಾಹಿತಿಗಳು, ರೈತ, ಕನ್ನಡಪರ, ದಲಿತ ಸಂಘಟನೆಗಳು, ಸಾರ್ವಜನಿಕರು ಹಾಗೂ ರಕ್ಷಣೆ ನೀಡಿದ ಪೊಲೀಸರಿಗೂ ಸಂಘಟನೆಯ ಮುಖಂಡರು ಹೃತ್ಪೂರ್ವಕ ಧನ್ಯವಾದ ಅರ್ಪಿಸಿದರು.
ಸರ್ಕಾರದ ಲಿಖಿತ ಆದೇಶ ಘೋಷಣೆಯಾಗುತ್ತಿದ್ದಂತೆಯೇ ಫ್ರೀಡಂಪಾರ್ಕ್ನಲ್ಲಿ ನೆರೆದಿದ್ದ ಸಾವಿರಾರು ಆಶಾ ಕಾರ್ಯಕರ್ತೆಯರ ಮುಖದಲ್ಲಿ ಸಂಭ್ರಮ ಮನೆಮಾಡಿತ್ತು.
