– ಜನವರಿ 13ರೊಳಗೆ ಮಾಹಿತಿ ಸಲ್ಲಿಸಲು ಸೂಚನೆ
ನವದೆಹಲಿ: ದೇಶದ ಜೈಲುಗಳಲ್ಲಿ ನಡೆಯುತ್ತಿರುವ ಜಾತಿ ಆಧಾರಿತ ತಾರತಮ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಸಲ್ಲಿಸದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ (Supreme Court) ಕೊನೆಯ ಅವಕಾಶ ನೀಡಿದೆ. ಮುಂದಿನ ವಿಚಾರಣೆಯ ವೇಳೆಗೆ ಮಾಹಿತಿ ಸಲ್ಲಿಸದಿದ್ದರೆ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಅಥವಾ ಪ್ರಧಾನ ಕಾರ್ಯದರ್ಶಿಗಳು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಆದೇಶಿಸಬೇಕಾಗುತ್ತದೆ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನಮೋಹನ್ ಅವರನ್ನೊಳಗೊಂಡ ಪೀಠ ಪ್ರಕರಣದ ವಿಚಾರಣೆ ನಡೆಸಿತು. ಕೇಂದ್ರ ಗೃಹ ಸಚಿವಾಲಯ ಕೇಳಿರುವ ವಿವಿಧ ಮಾಹಿತಿಗಳಿಗೆ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇನ್ನೂ ಪ್ರತಿಕ್ರಿಯೆ ನೀಡದಿರುವುದಕ್ಕೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟುವ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ‘ಸುಕನ್ಯಾ ಶಾಂತಾ ವರ್ಸಸ್ ಭಾರತ ಒಕ್ಕೂಟ’ ಪ್ರಕರಣದಲ್ಲಿ ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹಿರಿಯ ವಕೀಲ ಎಸ್.ಮುರಳೀಧರ್ ಅವರನ್ನು ನ್ಯಾಯಾಲಯ ಅಮಿಕಸ್ ಕ್ಯೂರಿಯಾಗಿ ನೇಮಿಸಿದೆ. ಇದನ್ನೂ ಓದಿ: ಪ್ರತಿಭಟನೆ ನಡೆಸುವ ಸ್ಥಳವನ್ನು ಅನಿರ್ದಿಷ್ಟಾವಧಿಗೆ ಆಕ್ರಮಿಸುವಂತಿಲ್ಲ: ಸುಪ್ರೀಂ
ಜೈಲುಗಳ ದಾಖಲೆಗಳು ಮತ್ತು ಅರ್ಜಿ ನಮೂನೆಗಳಿಂದ ಜಾತಿ ಕಾಲಂಗಳನ್ನು ತೆಗೆದುಹಾಕಿರುವ ಕುರಿತು, ಜಾತಿ ದತ್ತಾಂಶವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋಗೆ (ಎನ್ಸಿಆರ್ಬಿ) ಸಂಗ್ರಹಿಸಿ ರವಾನಿಸುವ ವಿಧಾನ, ಸ್ವಚ್ಛತಾ ಕೆಲಸಗಳನ್ನು ಹೊರಗುತ್ತಿಗೆ ನೀಡಿರುವುದು ಹಾಗೂ ಜೈಲುಗಳಲ್ಲಿನ ನಿಯಮಗಳ ಪಾಲನೆ ಕುರಿತು ರಾಜ್ಯಗಳಿಂದ ಮಾಹಿತಿ ಕೇಳಲಾಗಿದೆ.
ಇದಲ್ಲದೆ, ಪ್ರತಿ ಜಿಲ್ಲೆಯಲ್ಲಿ ಜೈಲುಗಳ ಮೇಲ್ವಿಚಾರಣೆಗಾಗಿ ಸಂದರ್ಶಕರ ಮಂಡಳಿ ರಚನೆ, ಹೊಸ ಕಾಯ್ದೆಗಳು, ನಿಯಮಗಳು ಮತ್ತು ಕೈಪಿಡಿಗಳ ಸ್ಥಿತಿ ಹಾಗೂ ತಾರತಮ್ಯಕ್ಕೆ ಅವಕಾಶ ನೀಡುವ ನಿಯಮಗಳ ತಿದ್ದುಪಡಿ ಕುರಿತ ವಿವರಗಳನ್ನೂ ಸಲ್ಲಿಸುವಂತೆ ಸೂಚಿಸಲಾಗಿದೆ.
ಪ್ರತಿ ಜಿಲ್ಲೆಯಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಸಂದರ್ಶಕರ ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ನಿರ್ದೇಶನ ನೀಡಿತ್ತು. ನಾಲ್ಕು ವಾರಗಳೊಳಗೆ ಮಂಡಳಿಗಳನ್ನು ರಚಿಸುವಂತೆ ಸೂಚಿಸಿದ್ದರೂ, ಕೆಲವೇ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಮಾತ್ರ ಪ್ರಗತಿ ಕಂಡುಬಂದಿದೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: ಪುಣೆಯಲ್ಲಿ 23 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ; 4 ಹೊಸ ಕಾರಿಡಾರ್ಗಳಿಗೆ ಶಂಕುಸ್ಥಾಪನೆ
ಎಲ್ಲ ರಾಜ್ಯಗಳು ತಕ್ಷಣ ಅಗತ್ಯ ಮಾಹಿತಿಯನ್ನು ಒದಗಿಸಬೇಕು. ಇದರಿಂದ ಕೇಂದ್ರ ಸರ್ಕಾರ ವಿವಿಧ ನಿರ್ದೇಶನಗಳ ಅನುಷ್ಠಾನದ ಕುರಿತು ಸಮಗ್ರ ವರದಿ ಸಲ್ಲಿಸಲು ಸಾಧ್ಯವಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು 2027ರ ಜನವರಿ 13ಕ್ಕೆ ನಿಗದಿಪಡಿಸಲಾಗಿದೆ.
