ಬೆಂಗಳೂರು: ಕರ್ನಾಟಕವು ಎಂದೂ ಕಾಣದ ಭೀಕರ ಬರವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರ ಪರಿಹಾರದ (Drought Relief) ಆರ್ಥಿಕ ನೆರವನ್ನು ತ್ವರಿತವಾಗಿ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ಕೋರಿ ಡಿಸಿಎಂ ಹಾಗೂ ಕಂದಾಯ ಸಚಿವ ಡಾ. ಜಿ.ಪರಮೇಶ್ವರ್ (G.Parameshwara) ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.
ನವೆಂಬರ್ 2ರಂದು ಬರೆದಿರುವ ಪತ್ರಗಳಲ್ಲಿ ರಾಜ್ಯದ ಪರಿಷ್ಕೃತ ಒಟ್ಟು ಬರ ಪರಿಹಾರದ ಬೇಡಿಕೆಯಾದ 22,400.58 ಕೋಟಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿರುವ ಪರಮೇಶ್ವರ್ ಅವರು, ಬರ ಪರಿಸ್ಥಿತಿಯ ಗಂಭೀರತೆಯನ್ನು ಖುದ್ದಾಗಿ ವಿವರಿಸಲು, ರಾಜ್ಯದ ಮನವಿ ಪತ್ರವನ್ನು ಸಲ್ಲಿಸಲು ಹಾಗೂ ತ್ವರಿತ ಆರ್ಥಿಕ ನೆರವು ಕೋರಲು ಮೂವರ ಭೇಟಿಗೂ ಸಮಯ ನೀಡುವಂತೆ ಮನವಿ ಮಾಡಿದ್ದಾರೆ.
ರಾಜ್ಯದ 226 ತಾಲ್ಲೂಕುಗಳು ಬರ ಪೀಡಿತವಾಗಿದ್ದು, 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ. ಇದರಿಂದ 62,481.88 ಕೋಟಿ ಅಂದಾಜು ಆರ್ಥಿಕ ನಷ್ಟ ಉಂಟಾಗಿದೆ. ಈ ಸಂಕಷ್ಟದಿಂದ ಲಕ್ಷಾಂತರ ರೈತ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಪತ್ರಗಳಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಕನಿಷ್ಠ 750 ರೂ. ಬೆಲೆ ಕೊಡಬೇಕು: ಕುಮಾರಸ್ವಾಮಿ ಆಗ್ರಹ
ಕೇಂದ್ರದ ಪರಿಷ್ಕೃತ ಪರಿಹಾರ ಮಾನದಂಡಗಳೂ ಅಸಮರ್ಪಕ
ಕೇಂದ್ರ ಗೃಹ ಸಚಿವಾಲಯವು 2026ರ ಅಕ್ಟೋಬರ್ 26ರಂದು ಹೊರಡಿಸಿರುವ ಅಧಿಸೂಚನೆಯ ಮೂಲಕ 2026–27ರಿಂದ 2030–31ರ ಅವಧಿಗೆ ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿ (SDRF) ಹಾಗೂ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (NDRF) ಅಡಿಯಲ್ಲಿನ ಪರಿಹಾರ ಮಾನದಂಡಗಳನ್ನು ಪರಿಷ್ಕರಿಸಿದೆ ಡಿಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಪರಿಷ್ಕೃತ ಮಾನದಂಡಗಳ ಪ್ರಕಾರ, ಕರ್ನಾಟಕದ ಬೆಳೆ ಹಾನಿ ಇನ್ಪುಟ್ ಸಬ್ಸಿಡಿ ಪರಿಹಾರದ ಅಗತ್ಯವು 6,128.70 ಕೋಟಿಯಿಂದ 7,943.55 ಕೋಟಿಗೆ ಹೆಚ್ಚಳವಾಗಿದ್ದು, 1,814.85 ಕೋಟಿಯಷ್ಟು ಹೆಚ್ಚುವರಿ ನೆರವು ಅಗತ್ಯವಾಗಿದೆ. ಇದರ ಪರಿಣಾಮವಾಗಿ ರಾಜ್ಯದ ಒಟ್ಟು ಬರ ಪರಿಹಾರದ ಬೇಡಿಕೆಯು 20,585.73 ಕೋಟಿಯಿಂದ 22,400.58 ಕೋಟಿಗೆ ಪರಿಷ್ಕೃತಗೊಂಡಿದೆ. ಈ ಹಿಂದೆ ಸಲ್ಲಿಸಲಾಗಿದ್ದ ಮನವಿ ಪತ್ರದಲ್ಲಿನ ಇತರ ಎಲ್ಲ ಅಂಶಗಳು ಯಥಾಸ್ಥಿತಿಯಲ್ಲಿವೆ.
ಕೇಂದ್ರ ಸರ್ಕಾರವು ಪರಿಹಾರದ ಮಾನದಂಡಗಳನ್ನು ಪರಿಷ್ಕರಿಸಿರುವ ನಿರ್ಧಾರವನ್ನು ಸ್ವಾಗತಿಸಿರುವ ಡಾ. ಜಿ.ಪರಮೇಶ್ವರ್ ಅವರು, ಕೃಷಿ ವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹವಾಮಾನ ವೈಪರಿತ್ಯಗಳಿಂದ ಉಂಟಾಗುತ್ತಿರುವ ವಿಪತ್ತುಗಳ ತೀವ್ರತೆಯೂ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಹೋಲಿಸಿದರೆ ಪರಿಹಾರದ ಮೊತ್ತದಲ್ಲಿ ಮಾಡಿರುವ ಹೆಚ್ಚಳ ಸಾಕಾಗುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪರಿಷ್ಕೃತ ಮಾನದಂಡಗಳ ಪ್ರಕಾರ ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ 11,000, ನೀರಾವರಿ ಬೆಳೆಗಳಿಗೆ 22,000 ಹಾಗೂ ಬಹುವಾರ್ಷಿಕ ಬೆಳೆಗಳಿಗೆ 30,000 ಪರಿಹಾರ ನಿಗದಿಪಡಿಸಲಾಗಿದೆ. ಆದರೆ ಬೀಜ, ರಸಗೊಬ್ಬರ, ಕೃಷಿ ಕಾರ್ಮಿಕರ ಕೂಲಿ, ನೀರಾವರಿ ಮತ್ತು ಇತರ ಅಗತ್ಯ ಕೃಷಿ ಪರಿಕರಗಳಿಗೆ ರೈತರು ಮಾಡುತ್ತಿರುವ ನೈಜ ವೆಚ್ಚಕ್ಕೆ ಹೋಲಿಸಿದರೆ ಈ ಪರಿಹಾರ ಮೊತ್ತಗಳು ಸಾಕಾಗುವುದಿಲ್ಲ ಎಂದು ತಿಳಿಸಿದ್ದಾರೆ.
2026ರ ಕೃಷಿ ವೆಚ್ಚ ಹಾಗೂ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಪರಿಹಾರ ಮಾನದಂಡಗಳು ಇರಬೇಕು. ರೈತರು ಬೆಳೆ ಬೆಳೆಯಲು ಮಾಡಿರುವ ನೈಜ ಖರ್ಚು ಹಾಗೂ ಅನುಭವಿಸಿರುವ ನಷ್ಟವನ್ನು ಸರಿಯಾಗಿ ಪರಿಗಣಿಸದ ಪರಿಹಾರ ವ್ಯವಸ್ಥೆಯಿಂದ ಅವರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಪತ್ರಗಳಲ್ಲಿ ತಿಳಿಸಿದ್ದಾರೆ.
ವಿಪತ್ತು ಪರಿಹಾರವು ಕೇವಲ ಸಾಂಕೇತಿಕ ನೆರವಿಗೆ ಸೀಮಿತವಾಗಬಾರದು. ಬೆಳೆ ನಷ್ಟದಿಂದ ರೈತರು ಚೇತರಿಸಿಕೊಳ್ಳಲು, ತಮ್ಮ ಜೀವನೋಪಾಯವನ್ನು ಮರಳಿ ಕಂಡುಕೊಳ್ಳಲು ಹಾಗೂ ಆತ್ಮವಿಶ್ವಾಸದಿಂದ ಮತ್ತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವಷ್ಟು ಅರ್ಥಪೂರ್ಣ ಆರ್ಥಿಕ ನೆರವನ್ನು ಒದಗಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಹಳೆಯ ಕೃಷಿ ಗಣತಿ ಬದಲು FRUITS ದತ್ತಾಂಶ ಬಳಸಲು ಆಗ್ರಹ
ಬರ ಪರಿಹಾರಕ್ಕೆ ಅರ್ಹರಾಗಿರುವ ರೈತರನ್ನು ಗುರುತಿಸಲು ಈಗಲೂ 2015–16ರ ಕೃಷಿ ಗಣತಿಯ ದತ್ತಾಂಶವನ್ನು ಬಳಸುತ್ತಿರುವ ಬಗ್ಗೆ ಜಿ.ಪರಮೇಶ್ವರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುಮಾರು ಹತ್ತು ವರ್ಷಗಳ ಹಿಂದಿನ ಕೃಷಿ ಗಣತಿಯ ಮಾಹಿತಿಯು ಇಂದಿನ ರೈತರ ಭೂಹಿಡುವಳಿ ಮತ್ತು ಕೃಷಿ ಪರಿಸ್ಥಿತಿಯನ್ನು ಸರಿಯಾಗಿ ತೋರಿಸುವುದಿಲ್ಲ. ಇದರಿಂದ ಪರಿಹಾರ ಪಡೆಯಲು ಅರ್ಹರಾಗಿರುವ ಸಣ್ಣ ಮತ್ತು ಅತಿಸಣ್ಣ ರೈತರು ಕೂಡ ನೆರವಿನಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ FRUITS ದತ್ತಾಂಶವನ್ನು ಬಳಸುವ ಬಗ್ಗೆ ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ. ಇದರಲ್ಲಿ ರೈತರ ಇತ್ತೀಚಿನ ಹಾಗೂ ಪರಿಶೀಲಿಸಿದ ಮಾಹಿತಿ ಲಭ್ಯವಿರುವುದರಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಲು ಹೆಚ್ಚು ಅನುಕೂಲವಾಗಲಿದೆ ಎಂದು ವಿವರಿಸಿದ್ದಾರೆ.
ಪ್ರಸ್ತುತ ಜಾರಿಯಲ್ಲಿರುವ ವಿಪತ್ತು ಪರಿಹಾರ ವ್ಯವಸ್ಥೆಯನ್ನು ಸಮಗ್ರವಾಗಿ ಮರುಪರಿಶೀಲಿಸಬೇಕು. ರೈತರು ಕೃಷಿಗೆ ಮಾಡುತ್ತಿರುವ ನೈಜ ವೆಚ್ಚ, ಇತ್ತೀಚಿನ ಭೂಹಿಡುವಳಿ ದಾಖಲೆಗಳು, ರೈತರ ಜೀವನೋಪಾಯದ ರಕ್ಷಣೆ ಹಾಗೂ ಹವಾಮಾನ ವೈಪರೀತ್ಯಗಳಿಂದ ಹೆಚ್ಚುತ್ತಿರುವ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಪರಿಹಾರದ ಮಾನದಂಡಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಅಭಿವೃದ್ಧಿಗೆ ಗುಜರಾತ್ ಮಾಡೆಲ್ ಆದ್ರೆ ಸ್ಟಿಂಗ್ ಆಪರೇಷನ್ಗೆ ಕರ್ನಾಟಕ ಮಾಡೆಲ್ ಆಗಲಿದೆ: ಕೆ.ಎನ್.ರಾಜಣ್ಣ
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಪ್ರಸ್ತಾಪಿಸಿರುವ ಡಾ. ಜಿ. ಪರಮೇಶ್ವರ ಅವರು, ʼಒಂದು ಮುಂಗಾರು ವೈಫಲ್ಯದಿಂದಲೇ ರೈತರ ಹಲವು ವರ್ಷಗಳ ಪರಿಶ್ರಮ ವ್ಯರ್ಥವಾಗಿ, ಕುಟುಂಬದ ಉಳಿತಾಯವೆಲ್ಲ ಖಾಲಿಯಾಗಿ, ಒಂದು ಪೀಳಿಗೆಯ ರೈತರ ಭವಿಷ್ಯವೇ ಅನಿಶ್ಚಿತತೆಗೆ ಸಿಲುಕುವ ಪರಿಸ್ಥಿತಿ ಇದ್ದರೆ ವಿಕಸಿತ ಭಾರತ ನಿರ್ಮಿಸಲು ಸಾಧ್ಯವಿಲ್ಲʼ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರದ ತುರ್ತು ಮಧ್ಯಪ್ರವೇಶ ಹಾಗೂ ಪರಿಹಾರ ಬಿಡುಗಡೆಗೆ ಮನವಿ
ಕರ್ನಾಟಕದ ಪರಿಷ್ಕೃತ ಬರ ಪರಿಹಾರದ ಬೇಡಿಕೆಯಾದ 22,400.58 ಕೋಟಿಯನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು. ರಾಜ್ಯ ಸಲ್ಲಿಸಿರುವ ಪರಿಷ್ಕೃತ ಮನವಿ ಪತ್ರದ ಪರಿಶೀಲನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ನಿಯಮಗಳ ಪ್ರಕಾರ ನೀಡಬಹುದಾದ ಪರಿಹಾರದ ಮೊತ್ತವನ್ನು ಆದಷ್ಟು ಬೇಗ ಅನುಮೋದಿಸಿ ಬಿಡುಗಡೆ ಮಾಡಬೇಕು ಎಂದು ಪ್ರಧಾನಿ ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.
ರೈತರ ಹಿತಾಸಕ್ತಿ ವಿಚಾರದಲ್ಲಿ ರಾಜಕೀಯ ಹಾಗೂ ಆಡಳಿತಾತ್ಮಕ ಭಿನ್ನಾಭಿಪ್ರಾಯಗಳು ಅಡ್ಡಿಯಾಗಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಕ್ಕೂಟ ವ್ಯವಸ್ಥೆಯ ಆಶಯದಂತೆ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. ಕರ್ನಾಟಕ ಎದುರಿಸುತ್ತಿರುವ ಬರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರವೂ ಅಷ್ಟೇ ಗಂಭೀರವಾಗಿ ಮತ್ತು ಮಾನವೀಯ ದೃಷ್ಟಿಯಿಂದ ಸ್ಪಂದಿಸಬೇಕು. ಸಂಕಷ್ಟದಲ್ಲಿರುವ ರೈತರಿಗೆ ಸಕಾಲದಲ್ಲಿ ನೆರವು ತಲುಪಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಒತ್ತಿ ಹೇಳಿದ್ದಾರೆ.
ಉತ್ತಮ ಮಳೆಯಾದ ವರ್ಷದಲ್ಲಿ ನಮ್ಮ ರೈತರು ಎಷ್ಟು ಬೆಳೆ ಬೆಳೆಯುತ್ತಾರೆ ಎನ್ನುವುದಷ್ಟೇ ದೇಶದ ಪ್ರಗತಿಯ ನಿಜವಾದ ಮಾನದಂಡವಲ್ಲ. ಸಂಕಷ್ಟದ ಸಮಯದಲ್ಲಿ ನಾವು ರೈತರ ಬೆಂಬಲಕ್ಕೆ ಎಷ್ಟು ಗಟ್ಟಿಯಾಗಿ ನಿಲ್ಲುತ್ತೇವೆ ಎನ್ನುವುದೇ ನಿಜವಾದ ಪ್ರಗತಿಯ ಮಾನದಂಡ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ತುರ್ತು ಮಧ್ಯಪ್ರವೇಶಕ್ಕೆ ಮತ್ತೊಮ್ಮೆ ಮನವಿ ಮಾಡಿರುವ ಅವರು, ಕರ್ನಾಟಕದ ರೈತರಿಗೆ ಕೇವಲ ಸಹಾನುಭೂತಿ ಅಥವಾ ಅಲ್ಪ ಪ್ರಮಾಣದ ಪರಿಹಾರದ ಹೆಚ್ಚಳ ಸಾಕಾಗುವುದಿಲ್ಲ. ರೈತರಿಗೆ ಸಕಾಲದಲ್ಲಿ ಆರ್ಥಿಕ ನೆರವು ದೊರೆಯಬೇಕು. ಅವರು ಅನುಭವಿಸಿರುವ ನಷ್ಟಕ್ಕೆ ಅನುಗುಣವಾಗಿ ನ್ಯಾಯಯುತ ಪರಿಹಾರ ಸಿಗಬೇಕು. ಭೀಕರ ಬರದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ರೈತ ಕುಟುಂಬಗಳು ಮಾತ್ರವೇ ಎದುರಿಸಬೇಕಾದ ಪರಿಸ್ಥಿತಿ ಬರಬಾರದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
