ಸಾರ್ವಜನಿಕ ಸಮಾರಂಭಗಳು, ದೇವಾಲಯಗಳು, ವಿವಾಹ ಮಂಟಪಗಳು ಹಾಗೂ ಇತರ ನಟರ ಕಾರ್ಯಕ್ರಮಗಳಲ್ಲಿ ‘ಡಿ-ಬಾಸ್’ ಹೆಸರಿನಲ್ಲಿ ನಡೆಯುತ್ತಿರುವ ಕೆಲವರ ಅತಿರೇಕದ ವರ್ತನೆಗೆ ಕೊನೆಗೂ ಬ್ರೇಕ್ ಹಾಕಲು ಸ್ವತಃ ನಟ ದರ್ಶನ್(Darshan) ಅವರ ಅಧಿಕೃತ ಬಳಗ ಮುಂದಾಗಿದೆ.
ಇನ್ಮುಂದೆ ಬೇರೆ ನಟರ ಹಾಗೂ ಗಣ್ಯರ ಕಾರ್ಯಕ್ರಮಗಳಲ್ಲಿ ಅಪ್ರಸ್ತುತವಾಗಿ ‘ಡಿ-ಬಾಸ್’ ಎಂದು ಕೂಗಿ ಮುಜುಗರ ಸೃಷ್ಟಿಸಬಾರದು ಎಂದು ಡಿ ಕಂಪನಿ (D Company) ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆ ಮತ್ತು ಮನವಿ ನೀಡಿದೆ.
ಕಳೆದ ಭಾನುವಾರ ಮಂಡ್ಯದಲ್ಲಿ(Mandya) ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಟ ಧ್ರುವ ಸರ್ಜಾ ಹಾಗೂ ಶಾಸಕ ರವಿ ಗಣಿಗ ವೇದಿಕೆಯಲ್ಲಿದ್ದಾಗ ಕೆಲವರು ಅನಗತ್ಯವಾಗಿ ‘ಡಿ ಬಾಸ್… ಡಿ ಬಾಸ್’ ಎಂದು ಕಿರುಚಿ ಗದ್ದಲ ಎಬ್ಬಿಸಿದ್ದರು. ಇದರಿಂದ ತೀವ್ರ ಕೆರಳಿದ ಶಾಸಕ ರವಿ ಗಣಿಗ, “ನೀವೆಲ್ಲ ಈ ರೀತಿ ಅತಿಯಾಗಿ ಕಿರುಚಾಡಿ, ಅತಿರೇಕ ತೋರಿದ್ದರಿಂದಲೇ ದರ್ಶನ್ ಇವತ್ತು ಜೈಲು ಸೇರುವಂತಾಯಿತು” ಎಂದು ಬಹಿರಂಗವಾಗಿಯೇ ಗರಂ ಆಗಿ ಆಕ್ರೋಶ ಹೊರಹಾಕಿದ್ದರು. ಈ ವಿಡಿಯೋ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ತೀವ್ರ ಮುಜುಗರ ಸೃಷ್ಟಿಸಿತ್ತು.
ಈ ಹಿಂದೆ ರಾಮನಗರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದ ವೇದಿಕೆಯಲ್ಲೂ ಇದೇ ರೀತಿ ಘೋಷಣೆ ಕೂಗಿದಾಗ ಡಿಕೆಶಿ ಬಹಿರಂಗವಾಗಿಯೇ ಸಿಟ್ಟಾಗಿದ್ದರು. ಇಷ್ಟೇ ಅಲ್ಲದೆ, ಈ ಹಿಂದೆ ಮದುವೆ ಸಮಾರಂಭವೊಂದಕ್ಕೆ ಆಗಮಿಸಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರನ್ನು ಕಂಡಾಗಲೂ ಕೆಲವರು ‘ಡಿ ಬಾಸ್’ ಘೋಷಣೆ ಕೂಗಿದ್ದರು. ಆಗ ಸ್ವತಃ ವಿಜಯಲಕ್ಷ್ಮಿ ಅವರೇ ಸ್ಥಳದಲ್ಲೇ ಬೇಸರ ವ್ಯಕ್ತಪಡಿಸಿ, “ದಯವಿಟ್ಟು ಹೀಗೆಲ್ಲಾ ಕೂಗಬೇಡಿ, ಇಂಥ ನಡವಳಿಕೆಗಳಿಂದಲೇ ಅವರಿಗೆ ತೊಂದರೆಯಾಗುತ್ತಿರೋದು” ಎಂದು ಅಭಿಮಾನಿಗಳಿಗೆ ಬುದ್ಧಿ ಹೇಳಿದ್ದರು.
View this post on Instagram
ಮಂಡ್ಯದ ಅಹಿತಕರ ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ದರ್ಶನ್ ಅವರ ಅಧಿಕೃತ ಡಿಜಿಟಲ್ ವೇದಿಕೆಯಾದ ‘ಡಿ ಕಂಪನಿ’, ವಿಜಯಲಕ್ಷ್ಮಿ ಅವರು ಈ ಹಿಂದೆ ನೀಡಿದ್ದ ಸಲಹೆಯನ್ನು ಪುನರುಚ್ಚರಿಸಿ ಪೋಸ್ಟ್ ಹಂಚಿಕೊಂಡಿದೆ ಬೇರೆ ಯಾವುದೇ ನಟರ ವೇದಿಕೆ, ಸಿನಿಮಾ ಕಾರ್ಯಕ್ರಮಗಳು ಅಥವಾ ಸಾರ್ವಜನಿಕ ಸಭೆಗಳಲ್ಲಿ ದರ್ಶನ್ ಹೆಸರನ್ನು ಅನಗತ್ಯವಾಗಿ ಕೂಗಬಾರದು. ನಿಮ್ಮ ನೆಚ್ಚಿನ ನಟನ ಮೇಲಿನ ಪ್ರೀತಿ, ಅಭಿಮಾನವನ್ನು ಮನಸ್ಸಿನಲ್ಲೇ ಇಟ್ಟುಕೊಂಡು ತಾಳ್ಮೆ ಪ್ರದರ್ಶಿಸಬೇಕು. ದರ್ಶನ್ ಅವರ ಪ್ರಸ್ತುತ ಕಾನೂನು ಮತ್ತು ಕಠಿಣ ಪರಿಸ್ಥಿತಿಯನ್ನು ಪ್ರತಿಯೊಬ್ಬ ಅಭಿಮಾನಿಯೂ ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದೆ.
ಈ ಕಟ್ಟುನಿಟ್ಟಿನ ಸಂದೇಶದ ಬಳಿಕವಾದರೂ ಸಾರ್ವಜನಿಕ ಸ್ಥಳಗಳಲ್ಲಿ ಇತರರಿಗೆ ಮುಜುಗರ ತರುವಂತಹ ವರ್ತನೆಗೆ ಪೂರ್ಣವಿರಾಮ ಬೀಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
