– ಪ್ರತಿಭಟನೆಗೆ ಎಲ್ಲರಿಗೂ ಹಕ್ಕಿದೆ, ಆದರೆ ನಿಗದಿತ ಅವಧಿ ಅಗತ್ಯ ಎಂದ ಸಿಜೆಐ
ನವದೆಹಲಿ: ಪ್ರತಿಭಟನೆ(Protest) ನಡೆಸಲು ನಿಗದಿಪಡಿಸಿರುವ ಸಾರ್ವಜನಿಕ ಸ್ಥಳವನ್ನು ಯಾವುದೇ ಸಂಘಟನೆ ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್(Supreme Court) ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್(Gyanesh Kumar) ವಿರುದ್ಧ ಪ್ರತಿಭಟನೆಯಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ವ್ಯಾಪಾರಿಗಳ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಇಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠದಲ್ಲಿ ನಡೆಯಿತು.
ಈ ವೇಳೆ ರೈತರು, ಕಾರ್ಮಿಕರು, ಪತ್ರಕರ್ತರು ಸೇರಿದಂತೆ ಇತರ ಸಂಘಟನೆಗಳಿಗೂ ಪ್ರತಿಭಟನೆ ನಡೆಸುವ ಹಕ್ಕಿದೆ. ಹೀಗಾಗಿ ಪ್ರತಿಭಟನೆಗೆ ನಿಗದಿತ ಸ್ಥಳ ಮತ್ತು ನಿರ್ದಿಷ್ಟ ಅವಧಿಯನ್ನು ನಿಗದಿಪಡಿಸಬೇಕು. ‘ಯಾವುದೇ ಸ್ಥಳವನ್ನು ಶಾಶ್ವತವಾಗಿ ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ರೈತರು, ಪತ್ರಕರ್ತರು ಮತ್ತು ಇತರರು ಪ್ರತಿಭಟನೆ ನಡೆಸಲು ಎಲ್ಲಿಗೆ ಹೋಗಬೇಕು? ಪ್ರತಿಯೊಬ್ಬರಿಗೂ ಪ್ರತಿಭಟನೆ ನಡೆಸುವ ಹಕ್ಕಿದೆ. ಆದರೆ ಅದಕ್ಕೆ ನಿಗದಿತ ಸ್ಥಳ ಮತ್ತು ನಿರ್ದಿಷ್ಟ ಅವಧಿ ಇರಬೇಕು’ ಎಂದು ಸಿಜೆಐʼ ಅಭಿಪ್ರಾಯಪಟ್ಟರು.
ವ್ಯಾಪಾರಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಪ್ರತಿಭಟನೆಗಳಿಂದ ದೆಹಲಿಯ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ಕುಸಿದಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಪ್ರತಿಭಟನಾ ಸ್ಥಳದ ಸುತ್ತಮುತ್ತ ಸುಮಾರು 50 ಲಕ್ಷ ಜನರು ವಾಸಿಸುತ್ತಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಅಂಗಡಿಗಳು ಮುಚ್ಚಿದ್ದು, ಕನ್ನಾಟ್ ಪ್ಲೇಸ್ನಲ್ಲೂ ವ್ಯಾಪಾರ ಚಟುವಟಿಕೆಗಳು ಸ್ಥಗಿತಗೊಂಡಿವೆ ಎಂದು ಅವರು ವಾದಿಸಿದರು. ಇದನ್ನೂ ಓದಿ: 6ರ ಬಾಲಕಿ ಮೇಲೆ 3ನೇ ತರಗತಿ ವಿದ್ಯಾರ್ಥಿ ರಾಕ್ಷಸಿ ಕೃತ್ಯ – PUBG ಆಟದ ಪ್ರಭಾವವೇ ಕಾರಣವಾಯ್ತಾ?
ವ್ಯಾಪಾರಿಗಳ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಪೀಠ, ಸಿಇಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳನ್ನೂ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಸೇರಿಸುವಂತೆ ವ್ಯಾಪಾರಿಗಳ ಸಂಘಟನೆಗಳಿಗೆ ಸೂಚಿಸಿತು. ಪ್ರತಿಭಟನಾ ಸಂಘಟನೆಗಳ ವಾದವನ್ನು ಆಲಿಸದೆ ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿತು.
ಹಬ್ಬದ ಸಂದರ್ಭದಲ್ಲಿ ಪ್ರತಿಭಟನೆಗಳನ್ನು ಸ್ಥಗಿತಗೊಳಿಸುವಂತೆ ವ್ಯಾಪಾರಿಗಳ ಸಂಘಟನೆಗಳು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಇತರ ಸಂಬಂಧಪಟ್ಟ ಕಕ್ಷಿದಾರರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ದೆಹಲಿಯ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಸಾಮೂಹಿಕ ಬಂಧನ, ಪೊಲೀಸರ ದೌರ್ಜನ್ಯ, ಮೆಟ್ರೋ ನಿಲ್ದಾಣಗಳ ಬಂದ್ ಹಾಗೂ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ ಆರೋಪಗಳಿಗೆ ಸಂಬಂಧಿಸಿದ ಅರ್ಜಿಗಳನ್ನೂ ನ್ಯಾಯಪೀಠ ವಿಚಾರಣೆ ನಡೆಸಿತು. ಪ್ರತಿಭಟನೆ ನಡೆಸುವ ಹಕ್ಕು ಮತ್ತು ವ್ಯಾಪಾರ ಮಾಡುವ ಹಕ್ಕು ಎರಡನ್ನೂ ಸಮತೋಲನದಿಂದ ಪರಿಗಣಿಸಬೇಕೆಂಬ ವಿಚಾರವನ್ನು ನ್ಯಾಯಪೀಠ ತನ್ನ ವಿಚಾರಣೆಯಲ್ಲಿ ಪ್ರಸ್ತಾಪಿಸಿದೆ.
