ನವದೆಹಲಿ: ಮಹಾರಾಷ್ಟ್ರದ ಪುಣೆ (Pune Metro) ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. 23 ಕಿಲೋಮೀಟರ್ ಉದ್ದದ ಪುಣೆ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ ಅವರು, ನಾಲ್ಕು ಹೊಸ ಮೆಟ್ರೋ ಕಾರಿಡಾರ್ಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
23 ಕಿ.ಮೀ ಉದ್ದದ ಈ ಮೆಟ್ರೋ ಮಾರ್ಗವು ಮಾಣ್ನಿಂದ ಜಿಲ್ಲಾ ನ್ಯಾಯಾಲಯ ಮೆಟ್ರೋ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸಲಿದೆ. ಪುಣೆಯ ಪ್ರಮುಖ ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿರುವ ಹಿಂಜೇವಾಡಿ ಮತ್ತು ಶಿವಾಜಿನಗರ ನಡುವಿನ ಸಂಚಾರಕ್ಕೆ ಇದು ಅನುಕೂಲವಾಗಲಿದೆ. 8,300 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಯೋಜನೆ ನಿರ್ಮಿಸಲಾಗಿದೆ.
ಮೆಟ್ರೋ ಮಾರ್ಗದ ವಿಶೇಷವೆಂದರೆ, ಸಂಪೂರ್ಣ ರೈಲು ಕಾರ್ಯಾಚರಣೆಯನ್ನು ಮಹಿಳಾ ಚಾಲಕರು ನಿರ್ವಹಿಸಲಿದ್ದಾರೆ. ಅಲ್ಲದೆ, ಯೋಜನೆಗೆ ಅಗತ್ಯವಿರುವ ವಿದ್ಯುತ್ನ ಸುಮಾರು ಶೇ.30ರಷ್ಟನ್ನು ಸೌರಶಕ್ತಿಯಿಂದ ಪೂರೈಸುವ ಉದ್ದೇಶ ಹೊಂದಲಾಗಿದೆ.
ಇದೇ ಸಂದರ್ಭದಲ್ಲಿ ಸುಮಾರು 13,500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಎರಡನೇ ಹಂತದ ನಾಲ್ಕು ಮೆಟ್ರೋ ಕಾರಿಡಾರ್ಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಹೊಸ ಮಾರ್ಗಗಳು ಖರಾಡಿ, ಮಗರಪಟ್ಟಾ, ಹಡಪ್ಸರ್, ಸ್ವಾರ್ಗೇಟ್, ಪುಣೆ ಕಂಟೋನ್ಮೆಂಟ್ ಸೇರಿದಂತೆ ಪ್ರಮುಖ ವಸತಿ, ವಾಣಿಜ್ಯ ಹಾಗೂ ಐಟಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿವೆ. ಸ್ವಾರ್ಗೇಟ್, ನಳ್ಸ್ಟಾಪ್ ಮತ್ತು ಖರಾಡಿ ಬೈಪಾಸ್ಗಳಲ್ಲಿ ಈಗಿರುವ ಮೆಟ್ರೋ ಹಾಗೂ ಬಸ್ ಸೇವೆಗಳೊಂದಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಹೊಸದಾಗಿ ಉದ್ಘಾಟನೆಯಾದ ಮೆಟ್ರೋ ಮಾರ್ಗದಲ್ಲಿ ನವೆಂಬರ್ 4ರಿಂದ ಪ್ರಯಾಣಿಕರ ಸಂಚಾರ ಆರಂಭವಾಗಲಿದೆ. ಆರಂಭದಲ್ಲಿ 17 ನಿಲ್ದಾಣಗಳಲ್ಲಿ ಸೇವೆ ಲಭ್ಯವಾಗಲಿದ್ದು, ಉಳಿದ ನಿಲ್ದಾಣಗಳನ್ನು ಹಂತ ಹಂತವಾಗಿ ಕಾರ್ಯಾರಂಭಗೊಳಿಸಲು ಯೋಜಿಸಲಾಗಿದೆ.ಇದನ್ನೂ ಓದಿ: ದರ್ಶನ್ಗಾಗಿ ಹರಕೆ ಹೊತ್ತ ವಿಜಯಲಕ್ಷ್ಮಿ- ತಿಪಟೂರಿನ ಚೌಲಿಹಳ್ಳಿ ಕರಿಕಲ್ಲಮ್ಮ ದೇವಾಲಯಕ್ಕೆ ಭೇಟಿ
ಸುಮಾರು 21,800 ಕೋಟಿ ಮೌಲ್ಯದ ಈ ಯೋಜನೆಗಳು ಪುಣೆ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸುವುದರ ಜತೆಗೆ ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ಪ್ರಯಾಣಿಕರ ಪ್ರಯಾಣದ ಸಮಯ ಉಳಿಸಲು ನೆರವಾಗುವ ನಿರೀಕ್ಷೆಯಿದೆ.ಇದನ್ನೂ ಓದಿ: ಪಂದ್ಯದ ವೇಳೆ ಗೋಲ್ಕೀಪರ್ ಜೊತೆ ಡಿಕ್ಕಿ: ಸ್ಪ್ಯಾನಿಷ್ ಫುಟ್ಬಾಲ್ ಆಟಗಾರ ಸಾವು
