ಕಡಲ ತೀರದ ಕಾಲ್ಪನಿಕ ಊರು ಅಮರಾವತಿ (Amaravatii). ಅಲ್ಲಿ ನಡೆಯುವ ನಿಗೂಢ ನಾಪತ್ತೆ ಪ್ರಕರಣಗಳು, ಕೊಲೆಗಳು ಮತ್ತು ಅಚ್ಚರಿಯ ಘಟನೆಗಳ ಸುತ್ತ ಸಾಗುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಅಮರಾವತಿ ಪೊಲೀಸ್ ಸ್ಟೇಷನ್’. ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಗುರುರಾಜ್ ಜಗ್ಗೇಶ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಬಾಮಾ ಹರೀಶ್ ಹಾಗೂ ಹಿರಿಯ ಪ್ರಚಾರಕರ್ತ ನಾಗೇಂದ್ರ ಟ್ರೈಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಅಮರಾವತಿ ಊರಿನ ಗೌಡ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾನೆ. ಪ್ರಕರಣದ ತನಿಖೆಗೆ ಬಂದ ಪೊಲೀಸರೂ ಕಾಣೆಯಾಗುತ್ತಾರೆ. ಇದೆಲ್ಲದರ ಹಿಂದೆ ಯಾರ ಕೈವಾಡವಿದೆ? ಇದರ ಹಿಂದಿನ ರಹಸ್ಯವೇನು? ಎಂಬುದನ್ನು ಪತ್ತೆಹಚ್ಚಲು ಅಮರಾವತಿಗೆ ಬರುವ ಮಫ್ತಿ ಪೊಲೀಸ್ ಸುತ್ತ ಚಿತ್ರದ ಕಥೆ ಸಾಗುತ್ತದೆ.
ಚಿತ್ರದಲ್ಲಿ ಅಮಾನತುಗೊಂಡ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿರುವ ಧರ್ಮ ಕೀರ್ತಿರಾಜ್ ಮಾತನಾಡಿ, ನಿರ್ದೇಶಕರು ತಮ್ಮ ಸಹೋದರನಿದ್ದಂತೆ. ಸಿನಿಮಾ ಚೆನ್ನಾಗಿ ಮೂಡಿಬರಬೇಕು ಎಂಬ ಉದ್ದೇಶದಿಂದ ಕೆಲವು ಭಾಗಗಳನ್ನು ಮರುಚಿತ್ರೀಕರಣ ಮಾಡಿದ್ದಾರೆ. ಹಲವು ಹೆಸರಾಂತ ಖಳನಟರನ್ನು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ರೋಣದ ಬಕ್ಕೇಶ್ ಅವರ ಸಂಗೀತವೂ ಅದ್ಭುತವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗುರುರಾಜ್ ಜಗ್ಗೇಶ್ ಮಾತನಾಡಿ, ನಿರ್ದೇಶಕರಿಗೆ ಚಿತ್ರದ ಬಗ್ಗೆ ಸಾಕಷ್ಟು ಆತ್ಮವಿಶ್ವಾಸವಿದೆ. ಅಂದುಕೊಂಡ ರೀತಿಯಲ್ಲಿ ಸಿನಿಮಾ ಬರಬೇಕು ಎಂದು ಸಾಕಷ್ಟು ಶ್ರಮ ಹಾಕಿದ್ದಾರೆ. ಚಿತ್ರದಲ್ಲಿ ತಮ್ಮದು ನೆಗೆಟಿವ್ ಶೇಡ್ ಇರುವ, ‘ಟಗರು ಡಾಲಿ’ ಮಾದರಿಯ ಕ್ರೂರಿ ಪಾತ್ರ. ಈ ಪಾತ್ರ ಸವಾಲಿನಿಂದ ಕೂಡಿತ್ತು ಎಂದು ಹೇಳಿದರು.
ಹಿರಿಯ ನಟ ಧರ್ಮ ಮಾತನಾಡಿ, ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದೇನೆ. ಚಿತ್ರದ ಆಕ್ಷನ್ ದೃಶ್ಯಗಳು ವಿಶೇಷವಾಗಿವೆ. ನಾಯಕ ಧರ್ಮ ಕೀರ್ತಿರಾಜ್ ಸಾಕಷ್ಟು ರಿಸ್ಕ್ ತೆಗೆದುಕೊಂಡು ಸಾಹಸ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ. ನಿರ್ಮಾಪಕರು ನಿರ್ದೇಶಕ ಪುನೀತ್ ಅವರನ್ನು ನಂಬಿ ಹಣ ಹೂಡಿಕೆ ಮಾಡಿದ್ದಾರೆ ಎಂದರು.ಇದನ್ನೂ ಓದಿ: ಸ್ಪರ್ಧಿಗಳಿಗೆ ಪ್ರೀತಿಪಾತ್ರರ ಪತ್ರ – ಅಕ್ಷರಗಳು ಕಾಣದೇ ಕಣ್ಣೀರಾದ ಕಂಗಳು
ಚಿತ್ರದ ನಾಯಕಿ, ತೆಲುಗು ಮೂಲದ ವೇದ್ವಿಕಾ ಮಾತನಾಡಿ, ಇದು ತಮ್ಮ ಮೊದಲ ಕನ್ನಡ ಸಿನಿಮಾ ಎಂದು ತಿಳಿಸಿದರು. ಇಡೀ ಚಿತ್ರ ಗ್ರಾಮೀಣ ಹಿನ್ನೆಲೆಯಲ್ಲಿದೆ. ಮನಾಲಿಯಲ್ಲಿ ಚಿತ್ರೀಕರಿಸಿರುವ ಡ್ಯುಯೆಟ್ ಹಾಡು ಚೆನ್ನಾಗಿ ಮೂಡಿಬಂದಿದೆ ಎಂದರು.
ನಿರ್ದೇಶಕ ಪುನೀತ್ ಅರಸೀಕೆರೆ ಮಾತನಾಡಿ, ಕಥೆ ಸಿದ್ಧಪಡಿಸಿದ ತಕ್ಷಣ ನಾಗೇಂದ್ರ ಅವರಿಗೆ ವಿವರಿಸಿದ್ದೆ. ಚಿತ್ರದಲ್ಲಿ ರೈತರ ಬದುಕಿನ ಜೊತೆಗೆ ಕೃತಕ ಆಹಾರದಿಂದ ಜನರಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆಯೂ ಹೇಳಿದ್ದೇವೆ. ಮಾಳವಿಕಾ ಅವಿನಾಶ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಒಟ್ಟು 29 ಕಲಾವಿದರಿದ್ದಾರೆ. ಸಿನಿಮಾ ಚೆನ್ನಾಗಿ ಮೂಡಿಬಂದಿದ್ದು, ಡಿಸೆಂಬರ್ನಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.
ಖಳನಟರಾದ ಕಾಕ್ರೋಚ್ ಸುಧಿ ಮತ್ತು ಡ್ರಾಗನ್ ಮಂಜು ಕೂಡ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು.
ಯುವ ಪವರ್ ಪಿಕ್ಚರ್ಸ್ ಲಾಂಛನದಲ್ಲಿ ಪವರ್ ಪಿಕ್ಚರ್ ಹಾಗೂ ಎನ್. ಅನಿತಾ ಸುಕೇಂದ್ರ ಚಿತ್ರವನ್ನು ನಿರ್ಮಿಸಿದ್ದಾರೆ. ಕೆ.ಆರ್. ಪ್ರದೀಪ್ ಕಮಲಾಪುರ ಮತ್ತು ಗೀತಾ ಅಂಜನರೆಡ್ಡಿ ಸಹ ನಿರ್ಮಾಪಕರಾಗಿದ್ದಾರೆ.
ಚಿತ್ರದಲ್ಲಿ ಸಾಧು ಕೋಕಿಲ, ಮಾಳವಿಕಾ ಅವಿನಾಶ್, ನಾಗೇಂದ್ರ ಪ್ರಸಾದ್, ಧರ್ಮಣ್ಣ ಕಡೂರು ಸೇರಿದಂತೆ ಹಲವರು ನಟಿಸಿದ್ದಾರೆ. ನಾಲ್ಕು ಹಾಡುಗಳಿಗೆ ರೋಣದ ಬಕ್ಕೇಶ್ ಸಂಗೀತ ಸಂಯೋಜಿಸಿದ್ದಾರೆ. ಗೌತಮ್ ಮಟ್ಟಿ ಛಾಯಾಗ್ರಹಣ, ದೀಪು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಡಿಫರೆಂಟ್ ಡ್ಯಾನಿ ಮತ್ತು ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಮಾಡಿದ್ದಾರೆ.ಇದನ್ನೂ ಓದಿ: ಸಾರ್ವಜನಿಕ ಸಮಾರಂಭಗಳಲ್ಲಿ ‘ಡಿ-ಬಾಸ್’ ಘೋಷಣೆ ಕೂಗಬೇಡಿ: ಅಭಿಮಾನಿಗಳಲ್ಲಿ ‘ಡಿ ಕಂಪನಿ’ ಮನವಿ
