ಹಾಸನ/ ಚಿಕ್ಕಬಳ್ಳಾಪುರ: ಭಯೋತ್ಪಾದನೆಗೆ (Terrorism) ಪಿತೂರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಚಿಕ್ಕಬಳ್ಳಾಪುರ (Chikkaballapur) ಪೊಲೀಸರು ಹಾಸನದ (Hassan) ಅರಕಲಗೂಡಿನಲ್ಲಿ ಬಂಧಿಸಿದ್ದಾರೆ.
ಬಿಹಾರ (Bihar) ಮೂಲದ ಸಲಾಮಿನ್ (25) ಬಂಧಿತ ಆರೋಪಿ. ಈತ ಹಾವೇರಿಯಲ್ಲಿ ಅಣ್ಣನೊಂದಿಗೆ ರಸ್ತೆ ನಿರ್ಮಾಣ ಕೆಲಸ ಮಾಡುತ್ತಿದ್ದ. ಹಾವೇರಿಯಲ್ಲಿ ಕೆಲಸ ಮುಗಿದಿದ್ದು, ಅರಕಲಗೂಡಿಗೆ ಕೆಲಸಕ್ಕೆ ತೆರಳುವಂತೆ ಗುತ್ತಿಗೆದಾರ ಹೇಳಿದ್ದ. ಸೆ.24 ರಂದು ಅರಕಲಗೂಡಿಗೆ ಬಂದು ತಂಗಿದ್ದ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭಯೋತ್ಪಾದನೆಗೆ ಪಿತೂರಿ – ಮಾಸ್ಟರ್ ಮೈಂಡ್ ಶಬ್ಬೀರ್ ಸಿಕ್ಕಿಬಿದ್ದಿದ್ದು ಹೇಗೆ?
ಶಬ್ಬೀರ್ ನೀಡಿದ ಮಾಹಿತಿ ಆಧಾರದ ಮೇಲೆ ಸಲಾಮಿನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಅರಕಲಗೂಡು ಪೊಲೀಸರಿಗೆ ಚಿಕ್ಕಬಳ್ಳಾಪುರ ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಸಲಾಮಿನ್, ಶಬ್ಬೀರ್ ಟೆಲಿಗ್ರಾಂ ಗ್ರೂಪ್‌ನಲ್ಲಿ ಆಕ್ಟಿವ್ ಆಗಿದ್ದ ಎಂದು ತಿಳಿದು ಬಂದಿದೆ.
ಶಬ್ಬೀರ್ ಸಿಕ್ಕಿಬಿದ್ದಿದ್ದು ಹೇಗೆ?
ಮಾಸ್ಟರ್ ಮೈಂಡ್ ಶಬ್ಬೀರ್ ಇನ್‌ಸ್ಟಾಗ್ರಾಮ್ ನಲ್ಲಿ ಉಗ್ರರ ಪೋಸ್ಟ್‌ಗಳಿಗೆ ಲೈಕ್ ಮತ್ತು ಕಾಮೆಂಟ್ ಮಾಡಿ ಬೆಂಬಲಿಸುತ್ತಿದ್ದ. ಇದರಿಂದ ಅನುಮಾನಗೊಂಡಿದ್ದ ಗುಪ್ತಚರ ಇಲಾಖೆ, ಶಬ್ಬೀರ್ ಇನ್‌ಸ್ಟಾ ಐಡಿ ಫಾಲೂ ಮಾಡಿ ಸದ್ದಿಲ್ಲದೇ ತನಿಖೆ ನಡೆಸೋದಕ್ಕೆ ಶುರು ಮಾಡಿತ್ತು. ಈ ಬಗ್ಗೆ ಚಿಕ್ಕಬಳ್ಳಾಪುರ ನಗರ ಪೊಲೀಸರಿಗೆ (Chikkaballapura City Police) ಮಾಹಿತಿ ಕೂಡ ನೀಡಲಾಗಿತ್ತು.

ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಶಬ್ಬೀರ್ ಬಂಧನಕ್ಕೆ ಪೊಲೀಸರು ಪ್ಲ್ಯಾನ್ ಮಾಡಿಕೊಂಡಿದ್ದರು. ಅದರಂತೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಶಬ್ಬೀರ್‌ನನ್ನ ಬಂಧನ ಮಾಡಿ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಮೊಬೈಲ್ ಪರಿಶೀಲನೆ ವೇಳೆ ಇನ್‌ಸ್ಟಾ, ಟೆಲಿಗ್ರಾಂ ಆಪ್‌ಗಳನ್ನೂ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬೆಬ್ಬಿಬೀಳುವ ಮಾಹಿತಿಗಳು ಲಭ್ಯವಾಗಿವೆ. ಭಯೋತ್ಪಾದನೆಗೆ ಪಿತೂರಿ ನಡೆಸಿರುವುದು ಬಯಲಿಗೆ ಬಂದಿದೆ.
ಈ ಬಗ್ಗೆ ಚಿಕ್ಕಬಳ್ಳಾಪುರ ಎಸ್ಪಿ ಪದ್ಮಿನಿ ಸಾಹು ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿ, ಸಾಮಾಜಿಕ ಜಾಲತಾಣದ ಕ್ಲೋಸ್ಡ್ ಗ್ರೂಪ್ ನಲ್ಲಿ ಪ್ರಚೋದನಕಾರಿ ಮೆಸೇಜ್‌ಗಳು ಸಿಕ್ಕಿವೆ. ಪ್ರಚೋದನಕಾರಿ ಸಂದೇಶಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿ ಆರೋಪಿ ಬಂಧಿಸಿದ್ದೇವೆ. ಆರೋಪಿ ಹಿನ್ನೆಲೆ, ಪ್ರಕರಣ ಸಂಬಂಧ ಇನ್ನೂ ಹೆಚ್ಚಿನ ತನಿಖೆ ಆಗತ್ಯವಿದೆ. ಪೊಲೀಸ್ ಕಸ್ಟಡಿಗೆ ಪಡೆದು ಆರೋಪಿಯನ್ನ ಹೆಚ್ಚಿನ ವಿಚಾರಣೆ ಮಾಡಲಿದ್ದೇವೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಕೇಸ್ ದಾಖಲಿಸಿದ್ದೇವೆ. ಮೊಬೈಲ್‌ನಲ್ಲಿ ನಡೆದಿರುವ ಚರ್ಚೆ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ತನಿಖೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟೆಲಿಗ್ರಾಮ್ ಬಳಸಿ ಉಗ್ರಕೃತ್ಯಕ್ಕೆ ಸಂಚು ಮಾಹಿತಿ ಇಲ್ಲ: ಪರಮೇಶ್ವರ್

