ಮೈಸೂರು ದಸರಾ (Mysuru Dasara) ಮತ್ತೆ ಬಂದಿದೆ. ಸಾಂಸ್ಕೃತಿಕ ನಗರಿಗೆ ದೇಶ-ವಿದೇಶಗಳ ಪ್ರವಾಸಿಗರನ್ನು ಸೆಳೆಯಲು ದಸರಾಗೆ ಸಿದ್ಧತೆಗಳೂ ನಡೆಯುತ್ತಿವೆ. ಹಿಂದೆಲ್ಲಾ ದಸರಾ ಎಂದರೆ ರಾಜರ ಅರಮನೆಯ ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆ ಪ್ರತೀಕವಾಗಿತ್ತು. ಒಡೆಯರ ನೇತೃತ್ವದಲ್ಲೇ ಅರಮನೆಯಲ್ಲಿ ಎಲ್ಲಾ ಆಚರಣೆಗಳು ನಡೆಯುತ್ತಿದ್ದವು. ಜಂಬೂಸವಾರಿ (Dasara Jamboo Savari) ಮೆರವಣಿಗೆ ನೋಡೋದಕ್ಕೆ ಮಾತ್ರ ಜನರಿಗೆ ಅವಕಾಶವಿರುತ್ತಿತ್ತು. ರಾಜರ ಆಡಳಿತದಲ್ಲೇ ದಸರಾ ಸಂದರ್ಭದಲ್ಲಿ ಒಂದೊಂದು ಹೊಸ ಆಚರಣೆಗಳು ಸೇರ್ಪಡೆಯಾಗುತ್ತಾ ಬಂದವು. ಆದರೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ನಂತರ ದಸರಾ ಆಚರಣೆಯಲ್ಲೂ ನಾನಾ ಬದಲಾವಣೆಗಳು ಆದವು. ದಸರಾ ಈಗ ಪ್ರವಾಸೋದ್ಯಮ ಕೇಂದ್ರವಾಗಿದೆ. ಹಲವು ಆಚರಣೆ, ಕಾರ್ಯಕ್ರಮಗಳ ಮೂಲಕ ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ. ಹಾಗಾದ್ರೆ, ಮೈಸೂರು ದಸರಾದಲ್ಲಿ ಏನೆಲ್ಲಾ ಇರುತ್ತೆ? ಈ ಬಾರಿಯ ಹೊಸ ಸೇರ್ಪಡೆಗಳೇನು? ಇಲ್ಲಿದೆ ವಿವರ.
ಮೈಸೂರು ದಸರಾ ಇತಿಹಾಸ
ಹಿಂದಿನ ಆಡಳಿತಗಾರರು ದಸರಾವನ್ನು ಆಚರಿಸುತ್ತಿದ್ದರಾದರೂ, ವಿಜಯನಗರ ಸಾಮ್ರಾಜ್ಯದ ಅರಸರೇ ಈ ಹಬ್ಬಕ್ಕೆ ಒಂದು ನಿರ್ದಿಷ್ಟ ಸ್ವರೂಪವನ್ನು ನೀಡಿದರು. ವಿಜಯನಗರ ಸಾಮ್ರಾಜ್ಯದ ಕ್ರಮೇಣ ಪತನದ ನಂತರ, ಇತರ ರಾಜವಂಶಗಳು ರಾಜಕೀಯವಾಗಿ ಪ್ರಮುಖ ಸ್ಥಾನಕ್ಕೇರಿದವು. ಅವುಗಳಲ್ಲಿ ಒಡೆಯರ್ ರಾಜವಂಶವೂ ಒಂದು. ಇದು ಒಂದು ಸಣ್ಣ ಭೌಗೋಳಿಕ-ರಾಜಕೀಯ ಪ್ರದೇಶದ ಮೇಲೆ ರಾಜಕೀಯ ನಿಯಂತ್ರಣವನ್ನು ಹೊಂದಿತ್ತು. ಸಾಮಂತ ಮುಖ್ಯಸ್ಥನಾಗಿದ್ದ ಸ್ಥಿತಿಯಿಂದ ಸ್ವತಂತ್ರ ಆಡಳಿತಗಾರನಾಗಿ ಹೊರಹೊಮ್ಮಿದ ರಾಜ ಒಡೆಯರ್ (1578-1617), ವಿಜಯನಗರದ ವೈಭವ ಮತ್ತು ಅದ್ದೂರಿಗೆ ಸಾಟಿಯಾಗುವ ಮಟ್ಟದಲ್ಲಿ ದಸರಾ ಹಬ್ಬವನ್ನು ಪುನರುಜ್ಜೀವನಗೊಳಿಸಿದರು. ಅವರ ಆಳ್ವಿಕೆಯ ಅವಧಿಯಲ್ಲೇ ದಸರಾ ‘ರಾಜ್ಯೋತ್ಸವ’ವಾಗಿ ಪ್ರಮುಖ ಸ್ಥಾನವನ್ನು ಪಡೆಯಿತು. 1610ರಲ್ಲಿ, ರಾಜಧಾನಿಯಾದ ಶ್ರೀರಂಗಪಟ್ಟಣದಲ್ಲಿ ಇದನ್ನು ಅತ್ಯಂತ ವೈಭವ, ಘನತೆ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಇದನ್ನೂ ಓದಿ: ಮೈಸೂರಿನಲ್ಲಿ ದಸರಾ ಸೊಬಗು, ಅರಮನೆ ಬೆಡಗು – ದಸರೆಯಲ್ಲಿ ನೀವು ನೋಡಲೇಬೇಕಾದ ಅರಮನೆಗಳಿವು!

ಈ ಬಾರಿ ದಸರಾ ಉದ್ಘಾಟನೆ ಯಾವಾಗ?
ಮೈಸೂರು ದಸರಾ ಈ ವರ್ಷ ಅಕ್ಟೋಬರ್ 11 ರಿಂದ 21ರ ವರೆಗೆ ನಡೆಯಲಿದೆ. ಅ.11 ರಂದು ದಸರಾಗೆ ಚಾಲನೆ ದೊರೆಯಲಿದೆ. ವಿಜಯದಶಮಿ ಜಂಬೂಸವಾರಿ ಅ.21 ರಂದು ಜರುಗಲಿದೆ. ಈ ನಡುವೆ ಪ್ರವಾಸಿಗರನ್ನು ಸೆಳೆಯಲು ಹಲವಾರು ಕಾರ್ಯಕ್ರಮಗಳು ಸಹ ನಡೆಯಲಿವೆ. ಇದೇ ಮೊದಲ ಬಾರಿಗೆ ದಸರಾದಲ್ಲಿ ಕರಾವಳಿಯ ಕ್ರೀಡೆ ‘ಕಂಬಳ’ವನ್ನು ಆಯೋಜಿಸಲಾಗುತ್ತಿದೆ. ಈ ಸಲ ಚಿನ್ನದಂಬಾರಿ ಹೊರುವ ಕರ್ತವ್ಯದಿಂದ ಅಭಿಮನ್ಯು ಆನೆ ನಿವೃತ್ತಿ ಹೊಂದಿದೆ. ಚಿನ್ನದ ಅಂಬಾರಿ ಹೊರಲು ಹೊಸ ಸಾರಥಿಯ ಆಯ್ಕೆಯಾಗಲಿದೆ. ಯಾವ ಆನೆ ಅಂಬಾರಿ ಹೊರುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ.
ಚಾಮುಂಡಿ ಬೆಟ್ಟದಲ್ಲಿ ವಿದ್ಯುಕ್ತ ಚಾಲನೆ
ಸಾಂಪ್ರದಾಯಿಕವಾಗಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನೆರವೇರುವ ವಿಧ್ಯುಕ್ತ ಪೂಜೆಯೊಂದಿಗೆ ಈ ಸಂಭ್ರಮಾಚರಣೆಗಳು ಪ್ರಾರಂಭವಾಗುತ್ತವೆ. ಈ ಉದ್ಘಾಟನಾ ಸಮಾರಂಭವು ಸಾರ್ವಜನಿಕ ಉತ್ಸವವನ್ನು ಮೈಸೂರು ದಸರೆಯ ಮೂಲದಲ್ಲಿರುವ ಧಾರ್ಮಿಕ ಕಥನದೊಂದಿಗೆ ಬೆಸೆಯುತ್ತದೆ. ಪ್ರತಿ ವರ್ಷ ಸರ್ಕಾರದಿಂದ ಆಯ್ಕೆಯಾಗುವ ಹಿರಿಯ ಸಾಧಕರೊಬ್ಬರು ದಸರಾವನ್ನು ಉದ್ಘಾಟಿಸಲಿದ್ದಾರೆ. ಬಳಿಕ ದಸರಾದಲ್ಲಿ ಎಲ್ಲಾ ಸಾಂಸ್ಕೃತಿಕ-ಸಾಂಪ್ರದಾಯಿಕ-ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಯುವ ಸಂಭ್ರಮ, ಯುವ ದಸರಾ
ದಸರಾಗೆ ಯುವಜನರನ್ನು ಸೆಳೆಯಲು ಯುವ ಸಂಭ್ರಮ ಮತ್ತು ಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮೈಸೂರು ವಿಶ್ವವಿದ್ಯಾಲಯದಲ್ಲಿರುವ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಸಮಾರಂಭ ನಡೆಯುತ್ತದೆ. ಇದರಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ. ಜನಪದ ಸೇರಿದಂತೆ ವಿವಿಧ ಪ್ರಾಕಾರಗಳ ನೃತ್ಯ ಕಲಾವಿದರ ಪ್ರದರ್ಶನ ಗಮನ ಸೆಳೆಯುತ್ತದೆ. ವಿವಿಧ ಜಿಲ್ಲೆಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಇನ್ನು ಯುವ ದಸರಾದಲ್ಲಿ ಸಿನಿಮಾ ತಾರೆಯರು ಹಾಗೂ ಖ್ಯಾತ ಗಾಯಕರ ಸಮಾಗಮವಾಗುತ್ತದೆ. ಮಹಾರಾಜ ಮೈದಾನದಲ್ಲಿ ಸಮಾರಂಭ ನಡೆಯುತ್ತದೆ. ತಮ್ಮ ನೆಚ್ಚಿನ ನಟ-ನಟಿಯರು, ಗಾಯಕರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಯುವ ದಸರಾದಲ್ಲಿ ಜನ ಸೇರುತ್ತದೆ. ಒಟ್ಟಾರೆ, ಯುವಜನರ ಕೇಂದ್ರೀಕೃತ ಮನರಂಜನಾ ಕಾರ್ಯಕ್ರಮಗಳು ಇವಾಗಿವೆ. ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವ – ಅರಮನೆಗೆ ಎರಡನೇ ಹಂತದ ಗಜಪಡೆ ಆಗಮನ
ಕುಸ್ತಿ-ವಜ್ರಮುಷ್ಠಿ ಕಾಳಗ
ದಸರಾದಲ್ಲಿ ಕ್ರೀಡೆಗೂ ಮಹತ್ವ ನೀಡಲಾಗಿದೆ. ಮಣ್ಣಿನ ಅಖಾಡದಲ್ಲಿ ಜಗಜಟ್ಟಿ ಪೈಲ್ವಾನರು ಕುಸ್ತಿ ಮಾಡಲಿದ್ದಾರೆ. ಕರ್ನಾಟಕ ಹಾಗೂ ದೇಶದ ನಾನಾ ಭಾಗಗಳಿಂದ, ವಿವಿಧ ವಯೋಮಾನದ ಪೈಲ್ವಾನರು ಆಗಮಿಸಿ ಕುಸ್ತಿಯಲ್ಲಿ ಪಾಲ್ಗೊಳ್ಳುತ್ತಾರೆ. ವಿಜೇತರಿಗೆ ಬಂಪರ್ ಬಹುಮಾನ ಇರುತ್ತದೆ. ಕುಸ್ತಿಯಂತೆಯೇ ವಜ್ರಮುಷ್ಠಿ ಕಾಳಗವೂ ನಡೆಯುತ್ತದೆ. ದಸರಾ ಮಹೋತ್ಸವದ ವಿಜಯದಶಮಿಯ ದಿನದಂದು ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಸಮ್ಮುಖದಲ್ಲಿ ಜಟ್ಟಿ ಸಮುದಾಯದವರಿಂದ ನಡೆಯುವ ಐತಿಹಾಸಿಕ ಹಾಗೂ ರೋಚಕ ಸಾಂಪ್ರದಾಯಿಕ ಕುಸ್ತಿ ಪಂದ್ಯವೇ ವಜ್ರಮುಷ್ಠಿ ಕಾಳಗ. ನೋಡುಗರ ಮೈ ಜುಮ್ಮೆನಿಸುವ ಕಾಳಗ ಇದು. ಜಟ್ಟಿಗಳು ಆನೆ ದಂತದಿಂದ ಅಥವಾ ಮರದಿಂದ ಮಾಡಲಾದ ‘ವಜ್ರಮುಷ್ಠಿ’ ಎಂಬ ವಿಶೇಷ ಆಯುಧವನ್ನು ತಮ್ಮ ಬೆರಳುಗಳ ಮಧ್ಯೆ ಹಿಡಿದು ಕಾದಾಡುತ್ತಾರೆ. ಎದುರಾಳಿಯ ತಲೆಗೆ ವಜ್ರಮುಷ್ಠಿಯಿಂದ ಹೊಡೆದು ರಕ್ತ ಚಿಮ್ಮಿಸುವ ಮೂಲಕ ಈ ಕಾಳಗವನ್ನು ಮುಕ್ತಾಯಗೊಳಿಸಲಾಗುತ್ತದೆ.

ಗೋಷ್ಠಿಗಳು
ಖ್ಯಾತ ವಿದ್ವಾಂಸರು, ಸಾಹಿತಿಗಳು, ಕವಿಗಳ ನೆಲೆವೀಡು ಮೈಸೂರು. ಸಂಗೀತ-ಸಾಹಿತ್ಯ ಕ್ಷೇತ್ರಗಳಿಗೆ ಮೈಸೂರು ತನ್ನದೇ ಆದ ಕೊಡುಗೆ ನೀಡಿದೆ. ಆದ್ದರಿಂದ ದಸರಾದಲ್ಲಿ ಕವಿಗೋಷ್ಠಿ, ವಿಚಾರ ಸಂಕಿರಣಗಳು, ಸಂಗೀತ ಕಚೇರಿಗಳನ್ನು ಆಯೋಜಿಸಲಾಗುತ್ತದೆ. ದಸರಾ ಮತ್ತು ಯುವ ಕವಿಗೋಷ್ಠಿ ಮೂಲಕ ಸಾಹಿತ್ಯಾಸಕ್ತರನ್ನು ಸೆಳೆಯಲಾಗುತ್ತದೆ. ಓದುಗ ಪ್ರಿಯರಿಗಾಗಿ ಪುಸ್ತಕ ಮೇಳ ಕೂಡ ನಡೆಸಲಾಗುತ್ತದೆ. ಸಂಗೀತ ಪ್ರಿಯರಿಗಾಗಿ ಅರಮನೆಯಲ್ಲಿ ಸಂಗೀತ ಕಾರ್ಯಕ್ರಮಗಳು ಜರುಗುತ್ತವೆ. ಖ್ಯಾತ ವಿದ್ವಾಂಸರು, ಕಲಾವಿದರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಕಲಾಸಕ್ತರಿಗಾಗಿ ಚಲಚಿತ್ರೋತ್ಸವ, ನಾಟಕ ಪ್ರದರ್ಶನಗಳು ಸಹ ನಡೆಯುತ್ತವೆ. ಆದರೆ, ಈ ಬಾರಿ ಚಲನಚಿತ್ರೋತ್ಸವ ಆಯೋಜನೆ ಮಾಡಿಲ್ಲ.
ಫಲಪುಷ್ಪ, ವಸ್ತು ಪ್ರದರ್ಶನ
ದಸರಾದಲ್ಲಿ ಫಲಪುಷ್ಪ ಮತ್ತು ವಸ್ತು ಪ್ರದರ್ಶನಗಳು ಪ್ರಮುಖ ಆಕರ್ಷಣೆಯಾಗಿದೆ. ವಿವಿಧ ಬಗೆಯ ಪುಷ್ಪಗಳಿಂದ ನಾನಾ ಮಾದರಿಗಳನ್ನು ರಚಿಸಿ ಪ್ರದರ್ಶಿಸಲಾಗುತ್ತದೆ. ಆಕರ್ಷಕ ಪುಷ್ಪ ಮಾದರಿಗಳು ಜನರನ್ನು ಸೆಳೆಯುವಂತಿರುತ್ತವೆ. ಅನೇಕರಿಗೆ ಇದು ಸೆಲ್ಫಿ ಸ್ಪಾಟ್ ಆಗುತ್ತದೆ. ಸರ್ಕಾರಗಳ ಪ್ರಮುಖ ಯೋಜನೆಗಳನ್ನು ಈ ಪ್ರದರ್ಶನಗಳ ಮೂಲಕ ಜನತೆಗೆ ಅರಿವು ಮೂಡಿಸಲಾಗುತ್ತದೆ. ವಿವಿಧ ಇಲಾಖೆಗಳ ಯೋಜನೆ, ಕಾರ್ಯಸಾಧನೆಗಳನ್ನು ವಸ್ತುಪ್ರದರ್ಶನದ ಮೂಲಕ ತಿಳಿಸಲಾಗುತ್ತದೆ. ನಾಡು-ದೇಶದ ಇತಿಹಾಸ, ಪ್ರವಾಸಿ ತಾಣಗಳ ಬಗ್ಗೆ ಅರಿವು ಮೂಡಿಸುವ ಮಾದರಿಗಳು ಇರುತ್ತವೆ.

ಮೇಳಗಳು
ಕೃಷಿ, ಆಹಾರ ಮೇಳಗಳನ್ನು ದಸರಾದಲ್ಲಿ ನಡೆಸಲಾಗುತ್ತದೆ. ರಾಜ್ಯದ ನಾನಾ ಭಾಗಗಳ ಸ್ಥಳೀಯ ಹಾಗೂ ವಿಶೇಷ ತಿನಿಸುಗಳು ಮಳಿಗೆಗಳಲ್ಲಿ ಸಿಗುತ್ತವೆ. ಆಹಾರ ಪ್ರಿಯರಿಗೆ ಈ ಮೇಳ ಖುಷಿಕೊಡುತ್ತದೆ. ಇಲ್ಲಿ ಸ್ಪರ್ಧೆಗಳನ್ನು ಸಹ ಆಯೋಜನೆ ಮಾಡಲಾಗುತ್ತದೆ. ತಿನ್ನುವ ಮತ್ತು ಅಡುಗೆ ಸ್ಪರ್ಧೆಗಳು ನಡೆಯುತ್ತವೆ. ವಿಜೇತರಿಗೆ ವಿಶೇಷ ಬಹುಮಾಗಳು ಸಹ ಇರುತ್ತವೆ. ಕೃಷಿ ಮೇಳವು ರೈತರಿಗೆ ಸಹಕಾರಿಯಾಗಲಿದೆ. ನಾನಾ ತಳಿಯ ಬೆಳೆಗಳು ಮತ್ತು ಹಣ್ಣುಗಳ ಪ್ರದರ್ಶನ, ಮಾರಾಟಕ್ಕೆ ಅವಕಾಶ ಇರುತ್ತದೆ. ರೈತರಿಗೆ ಕೃಷಿ ಸಂಬಂಧಿತ ಸಲಹೆಗಳಿಗಾಗಿ ವಿಚಾರಣಾ ಸಂಕಿರಣಗಳನ್ನು ಸಹ ಆಯೋಜನೆ ಮಾಡಲಾಗುತ್ತದೆ. ಇದನ್ನೂ ಓದಿ: ಈ ಬಾರಿ ಮೈಸೂರು ದಸರಾ ಮೆರವಣಿಗೆಯಲ್ಲಿ ನಟ – ನಟಿಯರು ಭಾಗಿ
ಪಾರಂಪರಿಕ ಚಟುವಟಿಕೆಗಳು
ವಿಶೇಷವಾದ ಪಾರಂಪರಿಕ ನಡಿಗೆಗಳು, ಪಾರಂಪರಿಕ ಸೈಕ್ಲಿಂಗ್ ಪ್ರವಾಸಗಳು ಮತ್ತು ಸಾಂಪ್ರದಾಯಿಕ ಟಾಂಗಾ ಸವಾರಿಗಳು ಪ್ರವಾಸಿಗರಿಗೆ ಮೈಸೂರಿನ ಶತಮಾನಗಳಷ್ಟು ಹಳೆಯದಾದ ರಾಜಮನೆತನದ ಪರಂಪರೆಯನ್ನು ಪರಿಚಯಿಸುತ್ತದೆ. ಮೈಸೂರು ದಸರಾ ವಿಂಟೇಜ್ ಮತ್ತು ಕ್ಲಾಸಿಕ್ ಕಾರು ರ‍್ಯಾಲಿಯು ದಸರಾ ಉತ್ಸವದ ಸಂದರ್ಭದಲ್ಲಿ ನಡೆಯುವ ಒಂದು ವಿಶೇಷ ಕಾರ್ಯಕ್ರಮವಾಗಿದ್ದು, ಇದರಲ್ಲಿ 1920 ರಿಂದ 1970 ರ ದಶಕದ ಅವಧಿಯಲ್ಲಿ ತಯಾರಾದ, ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ 50ಕ್ಕೂ ಹೆಚ್ಚು ಅಪರೂಪದ ವಿಂಟೇಜ್ ವಾಹನಗಳ ಮೆರವಣಿಗೆ ನಡೆಯುತ್ತದೆ.

ಗೊಂಬೆ ಪ್ರದರ್ಶನ
ಸ್ಥಳೀಯವಾಗಿ ‘ಗೊಂಬೆ ಹಬ್ಬ’ ಅಥವಾ ‘ಬೊಂಬೆ ಮನೆ’ ಎಂದು ಕರೆಯಲ್ಪಡುವ ಮೈಸೂರು ದಸರಾ ಗೊಂಬೆ ಪ್ರದರ್ಶನವು ಶತಮಾನಗಳಷ್ಟು ಹಳೆಯ ಸಂಪ್ರದಾಯವಾಗಿದೆ. ಇದರಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸುಂದರವಾಗಿ ಹಾಗೂ ವ್ಯವಸ್ಥಿತವಾಗಿ ಜೋಡಿಸಲಾದ ಗೊಂಬೆಗಳು ಮತ್ತು ಮೂರ್ತಿಗಳನ್ನು ಪ್ರದರ್ಶಿಸಲಾಗುತ್ತದೆ. ಈ ಪ್ರದರ್ಶನವು ರಾಮಾಯಣದಂತಹ ಪೌರಾಣಿಕ ಮಹಾಕಾವ್ಯಗಳು, ದಸರಾ ಮೆರವಣಿಗೆಯ ದೃಶ್ಯಗಳು (ಜಂಬೂ ಸವಾರಿ), ನವದುರ್ಗೆಯರು ಮತ್ತು ಅಷ್ಟಲಕ್ಷ್ಮಿಯರ ಜೊತೆಗೆ ಸಮಕಾಲೀನ ಅಥವಾ ಸಾಮಾಜಿಕ, ಸಾಂಸ್ಕೃತಿಕ ವಿಷಯಗಳನ್ನು ಹೆಚ್ಚಾಗಿ ಬಿಂಬಿಸುತ್ತವೆ.
ಡಬಲ್ ಡೆಕ್ಕರ್ ಬಸ್ ಸಂಚಾರ
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿದ್ಯುತ್ ದೀಪಾಲಂಕಾರವನ್ನು ಡಬಲ್ ಡೆಕ್ಕರ್ ಬಸ್‌ನಲ್ಲಿ ಸಂಚರಿಸುವ ಮೂಲಕ ವೀಕ್ಷಿಸುವ ಅವಕಾಶ ಇರುತ್ತದೆ. ದಸರಾ ಹಿನ್ನೆಲೆ ನಗರದ ಪ್ರಮುಖ ಹಾಗೂ ಐತಿಹಾಸಿಕ ವೃತ್ತಗಳಿಗೆ ದೀಪಾಲಂಕಾರ ಮಾಡಲಾಗುತ್ತದೆ. ಪ್ರವಾಸಿಗರು ಡಬಲ್ ಡೆಕ್ಕರ್ ಬಸ್‌ಗಳಲ್ಲಿ ನಗರವನ್ನು ಸುತ್ತಾಡಬಹುದು. ಪ್ರಮುಖ ವೃತ್ತಗಳಲ್ಲಿನ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಬಹುದು. ಇಡೀ ನಗರವೇ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತದೆ. ಈ ದೃಶ್ಯ ವೈಭೋಗ ನೋಡುಗರ ಕಣ್ಮನ ಸೆಳೆಯುವಂತಿರುತ್ತದೆ. ಇದನ್ನೂ ಓದಿ: ಕಾಕನಕೋಟೆಯಲ್ಲಿ ಆಪರೇಷನ್ ʻಖೆಡ್ಡಾʼ – ಕಾಡಿನಿಂದ ಅರಮನೆಯ ಅಂಬಾರಿವರೆಗೆ; ದಸರಾ ಆನೆಗಳ ಇತಿಹಾಸವೇ ರೋಚಕ!

ಖಾಸಗಿ ದರ್ಬಾರ್
ದಸರಾ ಹಬ್ಬದ ಸಮಯದಲ್ಲಿ ಒಡೆಯರ್ ರಾಜವಂಶದವರಿಂದ ನಡೆದುಕೊಂಡು ಬರುತ್ತಿರುವ ಶತಮಾನಗಳ ಹಳೆಯ ರಾಜಪರಂಪರೆಯ ವಿಶೇಷ ಧಾರ್ಮಿಕ ಆಚರಣೆ ಇದಾಗಿದೆ. ಐತಿಹಾಸಿಕ ರತ್ನಖಚಿತ ಚಿನ್ನದ ಸಿಂಹಾಸನವನ್ನು ಈ ದರ್ಬಾರ್‌ಗಾಗಿ ಜೋಡಿಸಲಾಗುತ್ತದೆ. ಈ ಪರಂಪರೆಯಲ್ಲಿ ರಾಜವಂಶಸ್ಥರು ರತ್ನಖಚಿತ ಬಂಗಾರದ ಸಿಂಹಾಸನವನ್ನೇರಿ, ವಿಶೇಷ ಪೂಜೆ ಹಾಗೂ ಸಂಪ್ರದಾಯಗಳನ್ನು ನೆರವೇರಿಸುತ್ತಾರೆ.
ಕಂಬಳ
ಮೈಸೂರು ದಸರಾದಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಕೃಷಿ ಸಂಸ್ಕೃತಿ ಹಾಗೂ ಜನಪದದ ಪ್ರತೀಕವಾದ ‘ಕಂಬಳ’ ಆಯೋಜನೆ ಮಾಡಗುತ್ತಿದೆ. ಅಕ್ಟೋಬರ್ 18 ಮತ್ತು 19 ರಂದು ಮೈಸೂರಿನ ಸಾತಗಳ್ಳಿಯಲ್ಲಿ ಆಯೋಜಿಸಲು ಅಧಿಕೃತವಾಗಿ ಸಿದ್ಧತೆಗಳು ನಡೆದಿವೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳುನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಈ ಕ್ರೀಡೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನಪದದೊಂದಿಗೆ ಹಾಸು ಹೊಕ್ಕಾಗಿದೆ. ಸಾಂಸ್ಕೃತಿಕ ಹಿನ್ನೆಲೆಯ ಕ್ರೀಡೆಯನ್ನು ದಸರಾದಲ್ಲಿ ಆಯೋಜಿಸಲಾಗುತ್ತಿದೆ.

ಜಂಬೂಸವಾರಿ
ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯೇ ಜಂಬೂಸವಾರಿ. 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡ ಅಧಿದೇವತೆ ಚಾಮುಂಡಿಯನ್ನು ಹೊತ್ತು ದಸರಾ ಆನೆಗಳು ಮೆರವಣಿಗೆ ಸಾಗುತ್ತವೆ. ಅರಮನೆಯಿಂದ ಬನ್ನಿಮಂಟಪದ ವರೆಗೆ ಪ್ರಮುಖ ವೃತ್ತಗಳ ಮೂಲಕ ಜಂಬೂಸವಾರಿ ಸಾಗುತ್ತದೆ. ಜಂಬೂಸವಾರಿ ಜೊತೆಗೆ ಕಲಾ-ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ದಚಿತ್ರಗಳು ಕೂಡ ಮೆರವಣಿಗೆಯಲ್ಲಿ ಸಾಗುತ್ತವೆ. ವಿವಿಧ ಕಲಾತಂಡಗಳ ಪ್ರದರ್ಶನವೂ ಇರಲಿದೆ. ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಜನಸ್ತೋಮ ನೆರೆದು, ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಕಣ್ತುಂಬಿಕೊಂಡು ಪುನೀತರಾಗುತ್ತಾರೆ. ಇದನ್ನೂ ಓದಿ: ದಸರಾ ಚಿತ್ರೋತ್ಸವಕ್ಕೆ ಕೊಕ್ – ಸಿನಿಗಣ್ಯರ ಬೇಸರ

ಪಂಜಿನ ಕವಾಯತು
ವಿಜಯದಶಮಿಯಂದು ಜಂಬೂಸವಾರಿ ಮೆರವಣಿಗೆ ಬಳಿಕ ಸಂಜೆ ಮೈಸೂರಿನ ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಅತ್ಯಂತ ಆಕರ್ಷಕ ಮತ್ತು ರೋಮಾಂಚಕ ಅಂತಿಮ ಕಾರ್ಯಕ್ರಮ ಪಂಜಿನ ಕವಾಯತು. ಇದು ಪೊಲೀಸ್ ಪಡೆಗಳ ಕವಾಯತು, ಸಾಹಸ ಪ್ರದರ್ಶನ ಹಾಗೂ ಬಣ್ಣಬಣ್ಣದ ಪಟಪಟಿಸುವ ಪಂಜುಗಳ ಬೆಳಕಿನ ಸಂಭ್ರಮದೊಂದಿಗೆ ಕಣ್ಮನ ಸೆಳೆಯುತ್ತದೆ. ಅತ್ಯಾಕರ್ಷಕ ಅಶ್ವಾರೋಹಿ ದಳದ ಸಾಹಸಗಳು, ಮೈ ಜುಮ್ಮೆನಿಸುವ ಮೋಟಾರ್ ಸೈಕಲ್ ಸಾಹಸ ಪ್ರದರ್ಶನಗಳು (ಡೇರ್‌ಡೆವಿಲ್ ಸ್ಟಂಟ್ಸ್), ಪೊಲೀಸ್ ಬ್ಯಾಂಡ್ ವಾದನ ಮತ್ತು ಪಂಜುಗಳೊಂದಿಗೆ ಸಾಮೂಹಿಕ ಕವಾಯತು ನಡೆಯುತ್ತದೆ. ರಾತ್ರಿಯ ವೇಳೆ ಆಕಾಶದಲ್ಲಿ ಮೂಡುವ ವರ್ಣರಂಜಿತ ಸುಂದರ ಸಿಡಿಮದ್ದು ಪ್ರದರ್ಶನ ಹಾಗೂ ಲೇಸರ್/ಡ್ರೋನ್ ಶೋ ಕೂಡ ಗಮನ ಸೆಳೆಯಲಿದೆ. ದಸರಾಗೆ ಅಂತಿಮ ಸ್ಪರ್ಶ ನೀಡುವ ಕಾರ್ಯಕ್ರಮ ಇದಾಗಿದೆ. ರಾಜರ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಪರಂಪರೆಯು ದಸರಾ ಉತ್ಸವದ ಸಮಾಪ್ತಿಯನ್ನು ಸಾರುತ್ತದೆ.

