ಮೈಸೂರು ದಸರಾ ಅಂದ್ರೆ ಕೇವಲ ಜಂಬೂ ಸವಾರಿ ಅಷ್ಟೇ ಅಲ್ಲ. ಅದರ ಜೊತೆಗೆ ಇಡೀ ಮೈಸೂರು ಸಿಂಗಾರಗೊಂಡಿರುತ್ತದೆ. ಹೀಗಾಗಿ ಒಮ್ಮೆ ನೋಡಿದರೂ ದಸರಾ ವೇಳೆ ಮೈಸೂರು ಇನ್ನೊಂದು ಮುಖ ಕಾಣುತ್ತದೆ. ಪ್ರವಾಸಿಗರಿಗೆ ಏನು ನೋಡಬೇಕು? ಏನು ಬಿಡಬೇಕು ಎಂಬ ಗೊಂದಲವುಂಟಾಗುತ್ತದೆ. ಏಕೆಂದರೆ ಇಲ್ಲಿ ಬಹಳಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ನಗರ ಕೇಂದ್ರಿತ ಕೆಲ ತಾಣಗಳು ಇಲ್ಲಿವೆ. ದಸರೆಗೆ ಬಂದಾಗ ಈ ಪ್ರವಾಸಿ ಸ್ಥಳಗಳಿಗೂ ಭೇಟಿ ನೀಡಬಹುದು.
ಅದರಲ್ಲೂ ದಸರಾ ಸಂದರ್ಭದಲ್ಲಿ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುವ ವಿವಿಧ ಅರಮನೆಗಳನ್ನ ನೋಡುವುದೇ ಸೋಜಿಗ. ದಸರಾ ಹಬ್ಬದ ಸಮಯದಲ್ಲಿ ಮೈಸೂರಿನ ಅರಮನೆಗಳು ಲಕ್ಷಾಂತರ ವಿದ್ಯುತ್ ದೀಪಗಳ ಬೆಳಕಿನಲ್ಲಿ ಚಿನ್ನದಂತೆ ಹೊಳೆಯುತ್ತವೆ. ಜಂಬೂ ಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ರಾಜ ಪರಂಪರೆಯ ಪೂಜೆಗಳು ಈ ನಾಡಹಬ್ಬದ ಅಂದವನ್ನ ಸಾವಿರ ಪಟ್ಟು ಹೆಚ್ಚಿಸುತ್ತವೆ.

ಸಹಜವಾಗಿ ಹೊರಗಿನಿಂದ ಬರುವ ಪ್ರವಾಸಿಗರಿಗೆ ಕಾಣೋದು ಅಂಬಾವಿಲಾಸ ಅರಮನೆ, ಲಲಿತಮಹಲ್ ಅರಮನೆ, ಜಗನ್‌ಮೋಹನ ಅರಮನೆ. ಆದ್ರೆ ಇನ್ನೂ ಬಗೆ ಬಗೆಯ ಮಹಲುಗಳು ದಸರೆಯ ಸೌಂದರ್ಯ ಹೆಚ್ಚಿಸುತ್ತವೆ. ದಸರಾ ನೋಡಲು ಬರುವವರು ಇಲ್ಲಿಗೆ ಭೇಟಿ ನೀಡದಿದ್ರೆ, ನಿಮ್ಮ ಸಂಭ್ರಮ ಅಪೂರ್ಣವಾದಂತಾಗುತ್ತದೆ. ಅಷ್ಟಕ್ಕೂ ದಸರಾ ಸಂದರ್ಭದಲ್ಲಿ ನೋಡಬೇಕಾದ ಅರಮನೆಗಳು ಯಾವುವು ಅನ್ನೋದನ್ನ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..
ಮೈಸೂರು ಅರಮನೆ (ಅಂಬಾ ವಿಲಾಸ ಅರಮನೆ)
ಒಡೆಯರ್ ರಾಜರ ಮುಖ್ಯ ಅಧಿಕೃತ ನಿವಾಸ ಮತ್ತು ಅತ್ಯಂತ ಭವ್ಯವಾದ ಅರಮನೆ. 1897ರಲ್ಲಿ ಕಟ್ಟಲಾರಂಭಿಸಿ 1912ರಲ್ಲಿ ಮುಕ್ತಾಯಗೊಳಿಸಲಾದ ಈ ಅರಮನೆಗೆ ಅಂಬಾವಿಲಾಸ ಅರಮನೆ ಎಂದು ಹೆಸರಿಡಲಾಯಿತು. ಈ ಅರಮನೆಯು ಗುಮ್ಮಟಗಳು, ಕಮಾನುಗಳು, ಗೋಪುರಗಳಿಂದ ಕೂಡಿದ್ದು ಇಂಡೋ ಸಾರ್ಸನಿಕ್ ಶೈಲಿಯಲ್ಲಿದೆ. ಅರಮನೆಯ ಹೊರಭಿತ್ತಿಗಳಲ್ಲಿ ಹಕ್ಕಿಗಳು, ಪ್ರಾಣಿಗಳು ಹಾಗೂ ಇತರ ಕಲಾಕೃತಿಗಳ ಕೆತ್ತನೆ ಇದೆ. ಒಳಭಾಗದ ಮುಚ್ಚಿಗೆಯಲ್ಲಿ ಕೆತ್ತನೆ ಇದೆ. ಅರಮನೆಯ ಪ್ರವೇಶವಾದಂತೆ ಬೊಂಬೆ ತೊಟ್ಟಿಲು ಮೊದಲು ಕಾಣಸಿಗುತ್ತದೆ. ಇಲ್ಲಿ 19 ಮತ್ತು 20ನೇ ಶತಮಾನದ ಪಾರಂಪರಿಕ ಬೊಂಬೆಗಳನ್ನ ಪ್ರದರ್ಶನಕ್ಕಿಡಲಾಗಿದೆ. ಅಪೂರ್ವವಾದ ಕೆತ್ತನೆಯಿರುವ ಕಂಬಗಳಿಂದ ಕೂಡಿದ ವಿಶಾಲವಾದ ಹಾಲ್‌ಗಳು, ದರ್ಬಾರ್‌ಹಾಲ್, ಕಲ್ಯಾಣ ಮಂಟಪಗಳು, ಆಯುಧಾಗಾರಗಳಿವೆ. ಭಾನುವಾರದಂದು, ಸಾರ್ವಜನಿಕ ರಜಾದಿನಗಳು ಮತ್ತು ದಸರಾ ಆಚರಣೆಗಳಲ್ಲಿ ಅರಮನೆಯನ್ನ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತದೆ ಮತ್ತು ಇದಕ್ಕಾಗಿ 97,000 ಎಲೆಕ್ಟ್ರಿಕ್ ಬಲ್ಬಗಳನ್ನ ಬೆಳಗಿಸಲು ಬಳಸಲಾಗುತ್ತದೆ.
ಈ ಅರಮನೆಯು 4 ಪ್ರವೇಶದ್ವಾರಗಳನ್ನ ಹೊಂದಿದೆ. ಮುಖ್ಯ ದ್ವಾರವನ್ನ ಪೂರ್ವಕ್ಕೆ ʻಜಯಮಾರ್ತಾಂಡʼ ಎಂದು ಕರೆಯಲಾಗುತ್ತದೆ, ಉತ್ತರದಲ್ಲಿ ʻಜಯರಾಮʼ, ದಕ್ಷಿಣಕ್ಕೆ ʻಬಲರಾಮʼ ಮತ್ತು ಪಶ್ಚಿಮಕ್ಕೆ ʻವರಾಹʼ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.

ಲಲಿತ ಮಹಲ್ ಅರಮನೆ
ಅರಮನೆಗಳ ನಗರಿ ಮೈಸೂರಿನಲ್ಲಿ ಅಂಬಾವಿಲಾಸ ಅರಮನೆ ನಂತರ 2ನೇ ಅತಿ ದೊಡ್ಡ ಅರಮನೆ ಅಂದ್ರೆ ಲಲಿತ ಮಹಲ್. ಇದು ಮೈಸೂರು ರೈಲ್ವೆ ನಿಲ್ದಾಣದಿಂದ 7 ಕಿ.ಮೀ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ 6.5 ಕಿ.ಮೀ ದೂರದಲ್ಲಿದ್ದು, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿದೆ. 1921 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ ಈ ಅರಮನೆ ಭಾರತ ಸ್ವಾತಂತ್ರ್ಯದ ನಂತರ, ಮೈಸೂರು ರಾಜ್ಯವನ್ನ ಭಾರತದ ಒಕ್ಕೂಟದೊಂದಿಗೆ ಸಂಯೋಜಿಸಿದ ನಂತರ, ಕರ್ನಾಟಕ ರಾಜ್ಯ ಸರ್ಕಾರದ ಆಸ್ತಿಯಾಯಿತು.
ಲಲಿತ ಮಹಲ್ ಅರಮನೆಯನ್ನು 1974 ರಲ್ಲಿ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದ್ದು, ಈಗ ದೇಶದ ಅತ್ಯುತ್ತಮ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದಾಗಿದೆ. ಇದು ಅತಿಥಿಗಳಿಗೆ ಐತಿಹಾಸಿಕ ವೈಭವ ಮತ್ತು ಶ್ರೀಮಂತ ಜೀವನ ನಡೆಸುವ ಅವಕಾಶ ಒದಗಿಸುತ್ತದೆ. ಅರಮನೆಯನ್ನ ಐಷಾರಾಮಿ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸುವುದರೊಂದಿಗೆ, ಸಾಂಪ್ರದಾಯಿಕ ಸೌಕರ್ಯಗಳಿಗೆ ವಿವಿಧ ಆಧುನಿಕ ಸೌಲಭ್ಯಗಳನ್ನು ಸೇರಿಸಲಾಗಿದೆ. ಅಂದರೆ ರಾಜಮನೆತನದ ಭವ್ಯತೆಗೆ ಧಕ್ಕೆಯಾಗದಂತೆ ಕೆಲವು ಬದಲಾವಣೆಗಳನ್ನು ಅಳವಡಿಸಲಾಗಿದೆ. ಅವುಗಳ ಹಳೆಯ ಸೊಬಗನ್ನು ಬದಲಾಯಿಸಿಲ್ಲ. ಸಭಾಂಗಣಗಳಲ್ಲಿ ಮರದ ನೆಲಹಾಸು, ಛಾವಣಿ ಜಾಗದಲ್ಲಿ ಗಾಜಿನ ಗುಮ್ಮಟಗಳಿವೆ. ಇದರೊಂದಿಗೆ, ಅರಮನೆಯ ಹೊರಭಾಗದ ಮೂಲ ಬಿಳಿ ಬಣ್ಣವನ್ನು ಸಹ ಹಾಗೆಯೇ ಇರಿಸಲಾಗಿದೆ. ಟೆರೇಸ್ ಮತ್ತು ಇತರ ಉದ್ಯಾನವನಗಳನ್ನು ಸಹ ಅದೇ ರೀತಿಯಲ್ಲಿ ಉಳಿಸಿಕೊಳ್ಳಲಾಗಿದೆ.

ಜಗನ್ಮೋಹನ ಅರಮನೆ (ಶ್ರೀ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿ)
ಮುಖ್ಯ ಅರಮನೆಯ ಪೂರ್ವ ಭಾಗದಲ್ಲಿ ಜಗನ್ಮೋಹನ ಅರಮನೆಯನ್ನ ರಾಜಕುಮಾರಿ ಮದುವೆಗಾಗಿ 3ನೇ ಕೃಷ್ಣರಾಜ ಒಡೆಯರ್ ಆಡಳಿತಾವಧಿಯಲ್ಲಿ 1861 ರಲ್ಲಿ ನಿರ್ಮಿಸಲಾಯಿತು. ಈ ಅರಮನೆಯ ಮುಖ್ಯ ದ್ವಾರದಲ್ಲಿ ಅಪೂರ್ವವಾದ ಕೆತ್ತನೆಗಳಿಂದ ಕೂಡಿದೆ. ಈ ಅರಮನೆಯಲ್ಲಿ ವಸ್ತು ಸಂಗ್ರಹಾಲಯವು 1915 ರಿಂದ ಪ್ರಾರಂಭವಾಯಿತು. ಮೈಸೂರು ಶೈಲಿಯ ತೈಲ ವರ್ಣ ಚಿತ್ರಗಳನ್ನೊಳಗೊಂಡಿದೆ. ಈ ಅರಮನೆಗೆ 1955 ರಲ್ಲಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಆರ್ಟ್ ಗ್ಯಾಲರಿ ಎಂದು ಹೆಸರು ಬಂದಿತು.
ಈ ಗ್ಯಾಲರಿಯಲ್ಲಿ ತಿರುವಂಕೂರಿನ ರಾಜ ರವಿ ವರ್ಮರವರಿಂದ ರಚಿತವಾದ ತೈಲವರ್ಣ ಚಿತ್ರಗಳು ಪ್ರದರ್ಶಿಸಲ್ಪಟ್ಟಿವೆ. ಚೀನಾ, ಜಪಾನ್ ಇತರ ದೇಶಗಳ ಸುಪ್ರಿಸಿದ್ಧ ಚಿತ್ರಕಾರರ ಚಿತ್ರಗಳನ್ನ ಇಲ್ಲಿ ಪ್ರದರ್ಶಿಸಲಾಗಿದೆ. ಮೊಘಲ್, ರಜಪೂತ ಶೈಲಿಯ ಕಲಾತ್ಮಕ ವಸ್ತುಗಳು, ವಿವಿಧ ರೀತಿಯ ಗಡಿಯಾರಗಳ ಉತ್ತಮ ಸಂಗ್ರಹಗಳು, ಆಟಿಕೆಯ ಸಂಗ್ರಹಗಳು, ವಿವಿಧ ವಿವರಣೆಯನ್ನು ನೀಡುವ ವಸ್ತು ಸಂಗ್ರಹವು, ಕಲಾತ್ಮಕ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ಇಂದು ಇದು ಒಂದು ಜನಪದ ವಸ್ತು ಸಂಗ್ರಹಾಲಯವೂ ಆಗಿದೆ. ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ನಿಗದಿತ ಸಮಯದಲ್ಲಿ ಭೇಟಿ ನೀಡಬಹುದಾಗಿದೆ. ಶುಲ್ಕ ಇರಲಿದೆ.

ಚಿತ್ತರಂಜನ್ ಅರಮನೆ
ಮೈಸೂರಿನಲ್ಲಿರುವ ಚಿತ್ತರಂಜನ್ ಅರಮನೆ 1916 ರಲ್ಲಿ ರಾಜಮನೆತನದ ರಾಜಕುಮಾರಿಯರಿಗಾಗಿ ನಿರ್ಮಿಸಲಾದ ಐತಿಹಾಸಿಕ ಕಟ್ಟಡ. ಪ್ರಸ್ತುತ ಇದನ್ನ ಗ್ರೀನ್ ಹೋಟೆಲ್ ಎಂದು ಕರೆಯಲಾಗುತ್ತದೆ. ಇದು ಪರಿಸರ ಸ್ನೇಹಿ ಮತ್ತು ಹಳೆ ಕಾಲದ ಅಂದವನ್ನು ಉಳಿಸಿಕೊಂಡಿರುವ ಸುಂದರವಾದ ಪಾರಂಪರಿಕ ತಾಣವಾಗಿದೆ. ಇಲ್ಲಿ ಬರುವ ಲಾಭವನ್ನ ದಾನ ಕಾರ್ಯಗಳಿಗೆ ಬಳಸಲಾಗುತ್ತದೆ.

ಚೆಲುವಾಂಬ ಮಹಲು
ಒಂದು ಕಾಲದಲ್ಲಿ ರಾಜಮನೆತನದ ನಿವಾಸವಾಗಿದ್ದ ಚೆಲುವಾಂಬಾ ಮ್ಯಾನ್ಷನ್ ಅನ್ನು 1918 ರಲ್ಲಿ ನಿರ್ಮಿಸಲಾಯಿತು. ಇಂದು ಇತಿಹಾಸವನ್ನು ಅತ್ಯಾಧುನಿಕ ವಿಜ್ಞಾನದೊಂದಿಗೆ ಸಂಯೋಜಿಸಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಆಗಿದೆ. ಸಾಂಪ್ರದಾಯಿಕ ಮೈಸೂರು ಶೈಲಿಯಲ್ಲಿ ಈ ಮಹಲನ್ನು ನಿರ್ಮಾಣ ಮಾಡಲಾಗಿದ್ದು, ದಿ. ರಾಜಕುಮಾರಿ ಚೆಲುವಾಂಬಾ ಅವರ ಹೆಸರನ್ನೇ ಇಡಲಾಗಿದೆ. ಈ ಸಂಸ್ಥೆಯು ಆಹಾರ ವಿಜ್ಞಾನದ ಆವಿಷ್ಕಾರಗಳಲ್ಲಿ ಮುಂಚೂಣಿಯಲ್ಲಿದೆ.

