ಇಂಟರ್‌ನೆಟ್ ಸಂಪರ್ಕವಿಲ್ಲದಿದ್ದರೂ ಯುಪಿಐ ಮೂಲಕ ಹಣ ಪಾವತಿಸುವ ದಿನಗಳು ಶೀಘ್ರದಲ್ಲೇ ಬರಲಿವೆ. ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ, ಭೂಗತ ಮೆಟ್ರೋ ನಿಲ್ದಾಣದಲ್ಲಿದ್ದಾಗ ಅಥವಾ ನೆಟ್‌ವರ್ಕ್ ಸಮಸ್ಯೆ ಇರುವ ಪ್ರದೇಶದಲ್ಲಿದ್ದರೂ ಮೊಬೈಲ್ ಅನ್ನು ‘ಟ್ಯಾಪ್’ ಮಾಡುವ ಮೂಲಕ ಹಣ ಪಾವತಿಸಲು ಸಾಧ್ಯವಾಗುವ ಹೊಸ ವ್ಯವಸ್ಥೆಯನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ.
ವರದಿಗಳ ಪ್ರಕಾರ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಇಂಟರ್‌ನೆಟ್ ಇಲ್ಲದೆಯೇ ಕಾರ್ಯನಿರ್ವಹಿಸುವ Offline Tap and Pay UPI ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಈ ಹೊಸ ತಂತ್ರಜ್ಞಾನ ಜಾರಿಯಾದರೆ ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ.

ಇಂಟರ್‌ನೆಟ್ ಇಲ್ಲದೇ UPI ಪಾವತಿ ಹೇಗೆ ಸಾಧ್ಯ?
ಹೊಸ ವ್ಯವಸ್ಥೆಯು Near Field Communication (NFC) ತಂತ್ರಜ್ಞಾನವನ್ನು ಆಧರಿಸಿರುತ್ತದೆ. ಇದೇ ತಂತ್ರಜ್ಞಾನವನ್ನು ಈಗಾಗಲೇ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ Tap and Pay ಸೇವೆಯಲ್ಲಿ ಬಳಸಲಾಗುತ್ತಿದೆ. ಈ ಸೇವೆ ಬಳಸಲು ಮೊದಲು ಬಳಕೆದಾರರು ಇಂಟರ್‌ನೆಟ್ ಲಭ್ಯವಿರುವಾಗ ತಮ್ಮ UPI Lite Wallet ಗೆ ಹಣವನ್ನು ಲೋಡ್ ಮಾಡಬೇಕು. ನಂತರ ಇಂಟರ್‌ನೆಟ್ ಇಲ್ಲದಿದ್ದರೂ NFC ಸೌಲಭ್ಯ ಹೊಂದಿರುವ ಮೊಬೈಲ್ ಅನ್ನು ಹೊಂದಾಣಿಕೆಯ PoS (Point of Sale) ಯಂತ್ರದ ಮೇಲೆ ಟ್ಯಾಪ್ ಮಾಡಿದರೆ ಪಾವತಿ ಪೂರ್ಣಗೊಳ್ಳುತ್ತದೆ.
ವಹಿವಾಟಿನ ಮಾಹಿತಿಯನ್ನು PoS ಯಂತ್ರ ತಾತ್ಕಾಲಿಕವಾಗಿ ಸಂಗ್ರಹಿಸಿಟ್ಟುಕೊಂಡು, ನಂತರ ಇಂಟರ್‌ನೆಟ್ ಸಂಪರ್ಕ ಸಿಕ್ಕಾಗ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಿಂಕ್ ಮಾಡುತ್ತದೆ. ಹಣ ಈಗಾಗಲೇ UPI Lite Wallet ನಲ್ಲಿ ಇರುವುದರಿಂದ UPI PIN ನಮೂದಿಸುವ ಅಗತ್ಯವೂ ಇರುವುದಿಲ್ಲ.

ಯಾವ ಸ್ಥಳಗಳಲ್ಲಿ ಈ ಸೇವೆ ಹೆಚ್ಚು ಉಪಯುಕ್ತ?
ಈ ಹೊಸ ಆಫ್‌ಲೈನ್ UPI ವ್ಯವಸ್ಥೆ ಇಂಟರ್‌ನೆಟ್ ಸಂಪರ್ಕ ಕಡಿಮೆ ಅಥವಾ ಇಲ್ಲದ ಪ್ರದೇಶಗಳಲ್ಲಿ ಹೆಚ್ಚು ಪ್ರಯೋಜನಕಾರಿಯಾಗಲಿದೆ.
ಪ್ರಮುಖವಾಗಿ ವಿಮಾನ ಪ್ರಯಾಣದ ವೇಳೆ, ಭೂಗತ ಮೆಟ್ರೋ ನಿಲ್ದಾಣಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ, ದೊಡ್ಡ ಕಟ್ಟಡಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇರುವ ಸಂದರ್ಭಗಳಲ್ಲಿ ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸ್ಥಿರವಾಗಿರದ ಸಂದರ್ಭಗಳಲ್ಲಿ ಪ್ರಯೋಜನಕಾರಿಯಾಗಲಿದೆ.
ಒಂದು ವಹಿವಾಟಿಗೆ ಎಷ್ಟು ಹಣ ಪಾವತಿಸಬಹುದು?
ಸದ್ಯದ ಮಾಹಿತಿ ಪ್ರಕಾರ, ಈ ಹೊಸ ವ್ಯವಸ್ಥೆಯಲ್ಲಿ ಒಂದು ವಹಿವಾಟಿಗೆ ಗರಿಷ್ಠ 2,000 ರೂ. ವರೆಗೆ ಪಾವತಿ ಮಾಡಲು ಅವಕಾಶ ನೀಡುವ ಸಾಧ್ಯತೆ ಇದೆ. ಆದರೆ ಈ ಕುರಿತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಇನ್ನೂ ಯಾವುದೇ ಅಧಿಕೃತ ಮಾರ್ಗಸೂಚಿ ಅಥವಾ ದಿನಾಂಕ ಪ್ರಕಟಿಸಿಲ್ಲ. ಅಂತಿಮ ಮಿತಿಯನ್ನು ಪ್ರಕಟಿಸುವ ಅಧಿಕಾರ ಸಂಸ್ಥೆಯದ್ದೇ ಆಗಿರುತ್ತದೆ.

UPI Lite X ಗಿಂತ ಹೊಸ ವ್ಯವಸ್ಥೆಯಲ್ಲಿ ಏನು ವಿಶೇಷ?
2023ರಲ್ಲಿ NPCI ಸಂಸ್ಥೆಯು UPI Lite X ಸೇವೆಯನ್ನ ಪರಿಚಯಿಸಿತ್ತು. ಇದರಲ್ಲಿ NFC ಹೊಂದಿರುವ ಎರಡು ಸ್ಮಾರ್ಟ್‌ಫೋನ್‌ಗಳ ನಡುವೆ ಆಫ್‌ಲೈನ್ ಹಣ ವರ್ಗಾವಣೆ ಮಾಡಲು ಅವಕಾಶವಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ಮತ್ತೊಬ್ಬರ ಮೊಬೈಲ್ ಅಗತ್ಯವಿಲ್ಲ. ಬದಲಿಗೆ NPCI ಪ್ರಮಾಣೀಕರಿಸಿದ Offline PoS ಯಂತ್ರ ಹೊಂದಿರುವ ಯಾವುದೇ ಅಂಗಡಿ ಅಥವಾ ವ್ಯಾಪಾರಿಯ ಬಳಿ ನೇರವಾಗಿ ಹಣ ಪಾವತಿಸಬಹುದು. ಇದರಿಂದ ದೈನಂದಿನ ಖರೀದಿ-ಮಾರಾಟದಲ್ಲಿ ಆಫ್‌ಲೈನ್ UPI ಬಳಕೆ ಇನ್ನಷ್ಟು ಸುಲಭವಾಗಲಿದೆ.
ಈ ಸೇವೆ ಆರಂಭವಾಗಲು ಇನ್ನೇನು ಪ್ರಕ್ರಿಯೆ ಬಾಕಿ?
ಪ್ರಮುಖ PoS ಸಾಧನ ತಯಾರಕರ ಯಂತ್ರಗಳಿಗೆ NPCI ಶೀಘ್ರದಲ್ಲೇ ಪ್ರಮಾಣೀಕರಣ ಪ್ರಕ್ರಿಯೆ ಆರಂಭಿಸಲಿದೆ. ಜೊತೆಗೆ ಬ್ಯಾಂಕ್‌ಗಳು ಮತ್ತು ವಿವಿಧ UPI ಅಪ್ಲಿಕೇಶನ್‌ಗಳೂ ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಹೊಸ ವೈಶಿಷ್ಟ್ಯವನ್ನ ಅಳವಡಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿವೆ. ಪ್ರಮಾಣೀಕರಣ ಪೂರ್ಣಗೊಂಡ ಬಳಿಕ ವ್ಯಾಪಾರಿಗಳು ಹೊಸ ಹೊಂದಾಣಿಕೆಯ PoS ಯಂತ್ರಗಳನ್ನು ಬಳಸಿ ಆಫ್‌ಲೈನ್ UPI ಪಾವತಿಗಳನ್ನು ಸ್ವೀಕರಿಸಲು ಸಾಧ್ಯವಾಗಲಿದೆ.
ಹೊಸ ವ್ಯವಸ್ಥೆಯ ಮಹತ್ವವೇನು?
ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗೆ UPI ಹೊಸ ದಿಕ್ಕು ನೀಡಿದ್ದರೂ, ಅದರ ಕಾರ್ಯಕ್ಷಮತೆ ಬಹುತೇಕ ಇಂಟರ್‌ನೆಟ್ ಸಂಪರ್ಕವನ್ನು ಅವಲಂಬಿಸಿದೆ.

ಆಫ್‌ಲೈನ್ Tap and Pay UPI ವ್ಯವಸ್ಥೆ ಜಾರಿಗೆ ಬಂದರೆ,
* ಇಂಟರ್‌ನೆಟ್ ಇಲ್ಲದಿದ್ದರೂ ಡಿಜಿಟಲ್ ಪಾವತಿ ಸಾಧ್ಯವಾಗಲಿದೆ.
* ಗ್ರಾಮೀಣ ಹಾಗೂ ದೂರದ ಪ್ರದೇಶಗಳಲ್ಲಿ UPI ಬಳಕೆ ಹೆಚ್ಚಾಗಲಿದೆ.
* ವಿಮಾನ, ಮೆಟ್ರೋ ಸೇರಿದಂತೆ ನೆಟ್‌ವರ್ಕ್ ಇಲ್ಲದ ಸ್ಥಳಗಳಲ್ಲಿಯೂ ಸುಲಭವಾಗಿ ಹಣ ಪಾವತಿಸಬಹುದು.
* ಸಂಪರ್ಕರಹಿತ Debit ಮತ್ತು Credit Card ಪಾವತಿಗಳಿಗೆ ಪರ್ಯಾಯವಾಗಿ UPI ಹೊರಹೊಮ್ಮಲಿದೆ.
* ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಗಲಿದೆ.
ಒಟ್ಟಿನಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿಯನ್ನ ಇನ್ನಷ್ಟು ಸುಲಭ, ವೇಗ ಮತ್ತು ವಿಶ್ವಾಸಾರ್ಹವಾಗಿಸಲು NPCI ಹೊಸ ಹೆಜ್ಜೆ ಇಡುತ್ತಿದೆ. ಇಂಟರ್‌ನೆಟ್ ಇಲ್ಲದಿದ್ದರೂ UPI ಮೂಲಕ ಹಣ ಪಾವತಿಸುವ ವ್ಯವಸ್ಥೆ ಜಾರಿಗೆ ಬಂದರೆ, ಅದು ಕೋಟ್ಯಂತರ ಬಳಕೆದಾರರಿಗೆ ಅನುಕೂಲವಾಗುವುದರ ಜೊತೆಗೆ ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. ಆದರೆ ಈ ಸೇವೆ ಯಾವಾಗ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂಬ ಬಗ್ಗೆ NPCI ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.
