`ಕೆಲವೇ ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಬೆಲೆ ಕೇವಲ 15 ರೂ. ಆಗಲಿದೆ. ರೈತರು ಉತ್ಪಾದಿಸುವ ಎಥೆನಾಲ್ ಇಂಧನದಿಂದ ದೇಶದ ಎಲ್ಲಾ ವಾಹನಗಳೂ ಚಲಿಸುವ ದಿನಗಳು ದೂರವಿಲ್ಲ’ ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದ ಮಾತು ಇದು. ʻಇದೆಲ್ಲ ಸಾಧ್ಯನಾ? ಅಂತ ಕೆಲವರಲ್ಲಿ ಪ್ರಶ್ನೆಗಳೂ ಹುಟ್ಟಿಕೊಂಡವು. ನಾಗಾಲೋಟದಲ್ಲಿ ಓಡುತ್ತಿರುವ ಪೆಟ್ರೋಲ್ ದರವನ್ನು ಕೇವಲ 15 ರೂ.ಗೆ ಸೀಮಿತಗೊಳಿಸುವುದಾದರೂ ಹೇಗೆ?
ಇಂದು ನಮ್ಮ ಬೈಕು, ಕಾರುಗಳಿಗೆ ಲೀಟರ್‌ಗಟ್ಟಲೇ ತುಂಬಿಸಿಕೊಳ್ಳುವ ಇದೇ ಪೆಟ್ರೋಲ್ ಭವಿಷ್ಯದಲ್ಲಿ ಭೂಮಿಯಿಂದ ಸಂಪೂರ್ಣ ಖಾಲಿಯಾಗುವ ಸಂಭವವಿದೆ ಎನ್ನುವುದು ಭೂಗರ್ಭಶಾಸ್ತ್ರಜ್ಞರ ಬಹುದಿನಗಳ ಆತಂಕ. ಇದು ನಿಜ ಕೂಡ. ಹೀಗೆ ನಶಿಸಬಹುದಾದ ಇಂಧನಗಳಿಗೆ ಪರ್ಯಾಯವಾಗಿ ಪರಿಸರಕ್ಕೆ ಹಾನಿಯಾಗದಂತೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿರುವಂಥ ಇನ್ನಿತರ ಇಂಧನಗಳಿಗೆ ಜಗತ್ತು ಹುಡುಕಾಡುತ್ತಲೇ ಇದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳ ಕಣ್ಣಿಗೆ ಅಮೃತದಂತೆ ತೋರುತ್ತಿರುವುದು ಎಥೆನಾಲ್! ಸಮಸ್ತ ಜೀವರಾಶಿಗಳ ಆರೋಗ್ಯದ ದೃಷ್ಟಿಯಿಂದಲೂ ಎಥೆನಾಲ್ ದಿ ಬೆಸ್ಟ್ ಅಂತಲೇ ಹೇಳಲಾಗ್ತಿದೆ.

ಭೂಮಿಯಿಂದ ತೆಗೆಯುವ ತೈಲವಲ್ಲ
ಎಥೆನಾಲ್ ಇಂಧನ ಹುಡುಕಿಕೊಂಡು ನಾವು ಗಲ್ಫ್ ರಾಷ್ಟ್ರಗಳಿಗೋ, ರಷ್ಯಾಕ್ಕೋ ಹೋಗಬೇಕಂತೇನಿಲ್ಲ. ಇದು ನಮ್ಮೂರಿನಲ್ಲೇ ಇರುವ ಕಬ್ಬು, ಮೆಕ್ಕೆಜೋಳ, ಹಣ್ಣು, ಅಕ್ಕಿ, ಹುಲ್ಲು, ತರಕಾರಿ ಹಾಗೂ ಇನ್ನಿತರ ಕೆಲವು ಧಾನ್ಯಗಳಿಂದ ಉತ್ಪಾದಿಸಬಹುದಾದಂಥ ಸಸ್ಯ ಜನ್ಯ ಇಂಧನ. ಸುಲಭ ನವೀಕರಣ ಇದರ ಬಹುದೊಡ್ಡ ಪ್ಲಸ್‌ಪಾಯಿಂಟ್. ಕಡಿಮೆ ವೆಚ್ಚದಲ್ಲಿ ಎಥೆನಾಲ್ ಉತ್ಪಾದಿಸಲು ಗುಣಮಟ್ಟದ ಕಬ್ಬು ಪ್ರಮುಖ ಕಚ್ಚಾವಸ್ತು. ಕಬ್ಬಿನಲ್ಲಿರುವ ಅಲ್ಕೋಹಾಲ್ ಸಂಬಂಧಿ ಅಂಶಗಳು ಗುಣಮಟ್ಟದ ಎಥೆನಾಲ್ ಉತ್ಪಾದನೆಗೆ ಸಹಕಾರಿಯಾಗಿವೆ. ಎಥೆನಾಲ್‌ನಲ್ಲಿ ಯಾವುದೇ ರೀತಿಯ ರಾಸಾಯನಿಕಗಳ ಮಿಶ್ರಣ ಇಲ್ಲದಿರುವುದರಿಂದ ಜೀವಿಗಳಿಗೆ ಹಾಗೂ ಪರಿಸರಕ್ಕೆ ಹಾನಿಕಾರಕವಾಗಿಲ್ಲ ಎಂಬುದು ವಿಶೇಷ.
ಅದಕ್ಕಾಗಿಯೇ ಕೇಂದ್ರದ ರಾಷ್ಟ್ರೀಯ ಜೈವಿಕ ಇಂಧನ ನೀತಿಯು ಸಸ್ಯಜನ್ಯ ಎಥೆನಾಲ್ ಅನ್ನು ಪೆಟ್ರೋಲ್‌ನೊಂದಿಗೆ ಬೆರೆಸಲು ಪ್ರೋತ್ಸಾಹ ನೀಡಿದೆ. ದೇಶದಲ್ಲಿ ಎರಡು ದಶಕಗಳಿಂದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸಲಾಗುತ್ತಿದೆ. ಮಿಶ್ರಣದ ಪ್ರಮಾಣವನ್ನ ಹಂತ-ಹಂತವಾಗಿ ಹೆಚ್ಚಿಸಲಾಗುತ್ತಿದೆ. 2008-2009 ರಿಂದ ಈ ಪ್ರಕ್ರಿಯೆ ಆರಂಭಗೊಂಡಿದ್ದು, ಕಳೆದ ವರ್ಷದಿಂದ ಶೇ.20 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನೇ ದೇಶಾದ್ಯಂತ ಪೂರೈಸಲಾಗುತ್ತಿದೆ. E20 ಇಂಧನ ನೀತಿ 2022ರಿಂದ ಜಾರಿಗೆ ಬಂದಿದೆ.
ಮೈಲೇಜ್ ಕೊರತೆಯೇ?
ಆದ್ರೆ ಈ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ಶುರು ಮಾಡಿದ ನಂತರ ಅನೇಕ ವಾಹನ ಬಳಕೆದಾರರು ಮೈಲೇಜ್, ನಿರ್ವಹಣಾ ವೆಚ್ಚ ಹಾಗೂ ವಾಹನದ ಕಾರ್ಯಕ್ಷಮತೆಯಲ್ಲಿನ ಬದಲಾವಣೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಇ20 ಇಂಧನವು ವಾಹನಗಳ ಎಂಜಿನ್‌ಗಳಿಗೆ ಹಾನಿ ಮಾಡಿದ್ರೆ, ವಿಮಾ ಕಂಪನಿಗಳು ಅದರ ವೆಚ್ಚವನ್ನು ಭರಿಸುತ್ತವೆಯೇ ಅನ್ನೋ ಬಗ್ಗೆ ಕಳವಳ ವ್ಯಕ್ತವಾಗಿದೆ.
ಕೋಟ್ಯಂತರ ಭಾರತೀಯ ಕುಟುಂಬಳಿಗೆ ಇಂದು ಕಾರು ಅಥವಾ ದ್ವಿಚಕ್ರ ವಾಹನಗಳನ್ನ ಖರೀದಿರುವುದೇ ದೊಡ್ಡ ವಿಚಾರ. ಅನೇಕ ವರ್ಷಗಳ ಉಳಿತಾಯಗಳ ನಂತರ ತಮ್ಮಿಷ್ಟದ ವಾಹನಗಳನ್ನ ಖರೀದಿ ಮಾಡ್ತಾರೆ. ಅವುಗಳಿಗೆ ಹಾನಿಯಾದ್ರೆ ವಾರ್ಷಿಕ ವಿಮಾ ಪ್ರೀಮಿಯಂ ಕಂಪನಿಗಳ ಮೂಲಕ ರಕ್ಷಣೆ ಮಾಡಿಕೊಳ್ಳಲಾಗುತ್ತೆ. ಇಂಧನಗಳಿಂದ ಎಂಜಿನ್ ಹಾನಿಯಾದ್ರೆ ಅದನ್ನ ವಿಮಾ ಕಂಪನಿಗಳು ಹೇಗೆ ಪರಿಗಣಿಸುತ್ತವೆ? ಈ ಬಗ್ಗೆ ಅನೇಕರು ಪ್ರಶ್ನೆ ಎತ್ತಿದ್ದು, ಹೆಚ್ಚಿನ ಮಾಹಿತಿ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

E20 ಇಂಧನ ಬಗ್ಗೆ ವಾಹನ ಮಾಲೀಕರಿಗೆ ಏಕೆ ಕಳವಳ?
ಇತ್ತೀಚೆಗೆ 2023 ಕ್ಕೂ ಮುನ್ನ ತಯಾರಿಸಿದ ಪೆಟ್ರೋಲ್ ವಾಹನಗಳ ಮಾಲೀಕರು ಲೋಕಲ್ ಸರ್ಕಲ್ಸ್ ಸಮೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಇ20 ಇಂಧನ ಪರಿಣಾಮ ಬಗ್ಗೆ ಅಸಮಾಧಾನವಿರುವುದು ಕಂಡುಬಂದಿತು.
ಸಮೀಕ್ಷೆ ಪ್ರಕಾರ, ಇ20 ಇಂಧನ ಬಳಕೆಯಿಂದ ಮೇಲೇಜ್ ಕೊರತೆಯಾಗುತ್ತಿದೆ, ನಿರ್ವಹಣಾ ವೆಚ್ಚ (ಸರ್ವೀಸ್ ಚಾರ್ಜ್) ಹೆಚ್ಚಾಗುತ್ತಿದೆ, ಇಂಜಿನ್‌ಗಳ ಮೇಲೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಹಳೆಯ ಪೆಟ್ರೋಲ್ ವಾಹನಗಳ ಇಬ್ಬರು ಮಾಲೀಕರಲ್ಲಿ ಒಬ್ಬರು, E0 (ಎಥೆನಾಲ್ ಮಿಶ್ರಣವಿಲ್ಲದೇ) ಮತ್ತೊಬ್ಬರು ಇ10 (10% ಎಥೆನಾಲ್ ಮಿಶ್ರಿತ) ಪೆಟ್ರೋಲ್ ಬಳಸಲು ಬಯಸುತ್ತಾರೆ.
ಕಾರಣ ಏನು?
ಹಲವು ಮಧ್ಯಮ ವರ್ಗದ ಕುಟುಂಬಗಳಿಗೆ ಹಳೆಯ ವಾಹನಗಳನ್ನ ಬದಲಾವಣೆ ಮಾಡಬೇಕೆಂಬುದು ಪ್ರಾಯೋಗಿಕ ಆಯ್ಕೆಯಲ್ಲ. ಕಾರುಗಳು ಮತ್ತು ದ್ವಿಚಕ್ರ ವಾಹನಗಳು ದೀರ್ಘಾವಧಿಯ ಸ್ವತ್ತುಗಳಾಗಿವೆ. ಹೀಗಾಗಿ ಮಾಲೀಕರು ಇನ್ನೂ ಅನೇಕ ವರ್ಷಗಳವರೆಗೆ ಅದೇ ವಾಹನ ಬಳಸಲು ಬಯಸುತ್ತಿದ್ದಾರೆ.
ICICI Lombard Clarifies Motor Insurance Coverage with E-20 Fuel Usage
ICICI Lombard General Insurance reaffirms that motor insurance policies remain fully valid by the use of E-20 fuel. We clarify that we do not treat usage of E-20 fuel in older vehicles as a negligence and we… pic.twitter.com/21OOvj1mPF
— ICICI Lombard GIC (@ICICILombard) June 15, 2026
ಸಹಜವಾಗಿ ಯಾವುದಕ್ಕೆ ವಿಮೆ ಒಳಗೊಳ್ಳುತ್ತದೆ?
1. ಥರ್ಡ್ ಪಾರ್ಟಿ ವಿಮೆ
ಇದು ಅತ್ಯಂತ ಮೂಲಭೂತ ವಿಮೆ, ಇದು ಅಪಘಾತದಲ್ಲಿ ಮೂರನೇ ವ್ಯಕ್ತಿಗೆ ಉಂಟಾದ ಹಾನಿಗಳನ್ನು ಮಾತ್ರ ಒಳಗೊಳ್ಳುತ್ತದೆ. ಆದ್ರೆ ವಿಮೆ ಮಾಡಲಾದ ವಾಹನಕ್ಕೆ ಉಂಟಾದ ಒಳಗೊಳ್ಳುವುದಿಲ್ಲ.
2. ಸ್ವಂತ ವಿಮೆ
ಈ ಪಾಲಿಸಿಯು ವಿಮೆ ಮಾಡಲಾದ ವಾಹನಕ್ಕೆ ಉಂಟಾದ ಹಾನಿಯನ್ನು ಮಾತ್ರ ಒಳಗೊಳ್ಳುತ್ತದೆ. ಸಾಮಾನ್ಯವಾಗಿ ಅಪಘಾತಗಳು ಮತ್ತು ಕೆಲವು ವಿಮಾ ರಕ್ಷಣೆಯ ಘಟನೆಗಳಿಂದ ಉಂಟಾಗುತ್ತದೆ.
2 ಸಮಗ್ರ ವಿಮೆ
ಥರ್ಡ್ ಪಾರ್ಟಿ ವಿಮೆ ಜೊತೆಗೆ, ಕಳ್ಳತನ, ಬೆಂಕಿ, ನೈಸರ್ಗಿಕ ವಿಕೋಪಗಳು ಮತ್ತು ಅಪಘಾತಗಳಿಂದ ನಿಮ್ಮ ವಾಹನಕ್ಕೆ ಉಂಟಾದ ಹಾನಿಗಳನ್ನು ಸಹ ಇದು ಒಳಗೊಳ್ಳುತ್ತದೆ. ಜೊತೆಗೆ ಮೂರನೇ ವ್ಯಕ್ತಿಯ ಹೊಣೆಗಾರಿಕೆಯನ್ನೂ ಒಳಗೊಳ್ಳುತ್ತದೆ.
ಇ20 ಹಾನಿಯನ್ನು ವಿಮಾ ಸಂಸ್ಥೆಗಳು ಪಾವತಿಸುತ್ತವೆಯೇ?
ಮೂಲಗಳ ಪ್ರಕಾರ, ಇಂಧನ ಸಂಬಂಧಿತ ಹಾನಿಗೆ ವಿಮೆ ರಕ್ಷಣೆ ಇರುವುದಿಲ್ಲ, ವಿಮಾ ಕಂಪನಿಗಳಿಂದ ಬಳಸಬೇಕಾದ ಇಂಧನದ ಬಗ್ಗೆ ನಿರ್ದಿಷ್ಟ ಷರತ್ತುಗಳನ್ನು ಮೊದಲೇ ಒಳಗೊಂಡಿದ್ದು, ಅದರ ಹೊರತಾಗಿ ಬೇರೆ ಇಂಧನಗಳನ್ನ ಬಳಸಿದ್ರೆ, ಕಂಪನಿಗಳು ವಿಮೆ ಕ್ಲೈಮ್ ಮಾಡುವುದನ್ನು ತಿರಸ್ಕರಿಸುವ ಸಾಧ್ಯತೆ ಇರಬಹುದು. ವಾಹನ ನಿರ್ಲಕ್ಷ್ಯ, ಅನುಚಿತ ಬಳಕೆ ಹಾಗೂ ವಾಹನ ತಯಾರಿಕ ಕಂಪನಿಗಳ ಶಿಫಾರಸು ಅನುಸರಿಸದೇ ಇದ್ದರೆ, ಅಗಷ್ಟೇ ವಿಮೆ ತಿರಸ್ಕರಿಸಬಹುದು.
ಇಂಧನ ಬಳಕೆ ನಿರ್ಣಾಯಕ ಅಂಶವಲ್ಲ – ICICI ವಿಮಾ ಕಂಪನಿ ಹೇಳೋದೇನು?
ವಾಹನಗಳಲ್ಲಿ ಎಥೆನಾಲ್ ಮಿಶ್ರಿತ ಇಂಧನ (E20) ಬಳಸುವುದರಿಂದ ಆಗುವ ಹಾನಿಗೆ ವಿಮೆ ಸಿಗುವುದಿಲ್ಲ ಎಂಬ ಆತಂಕದ ಬಗ್ಗೆ ಅತಿದೊಡ್ಡ ವಿಮಾ ಪೂರೈಕೆದಾರ ಕಂಪನಿಗಳಲ್ಲಿ ಒಂದಾದ ICICI ಲೊಂಬಾರ್ಡ್ ಸ್ಪಷ್ಟನೆ ನೀಡಿದೆ.
ICICI ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಹೇಳುವಂತೆ, E-20 ಇಂಧನದ ಬಳಕೆಯಿಂದ ಮೋಟಾರು ವಿಮಾ ಪಾಲಿಸಿಗಳು ಸಂಪೂರ್ಣವಾಗಿ ಮಾನ್ಯವಾಗಿರುತ್ತವೆ. ಹಳೆಯ ವಾಹನಗಳಲ್ಲಿ E-20 ಇಂಧನದ ಬಳಕೆಯನ್ನ ನಿರ್ಲಕ್ಷ್ಯವೆಂದು ಪರಿಗಣಿಸುವುದಿಲ್ಲ, ಬದಲಾಗಿ ಪ್ರಗತಿಪರ ಪರಿಸರ ಸ್ನೇಹಿ ಹೆಜ್ಜೆಯಾಗಿ ಪರಿಗಣಿಸುತ್ತೇವೆ ಎಂದು ಸ್ಪಷ್ಟಪಡಿಸುತ್ತೇವೆ. ಅದಕ್ಕಾಗಿ ವಿಮೆದಾರರು ಆಯ್ಕೆ ಮಾಡಿದ ರೀತಿಯನ್ನು ಆಧರಿಸಿ, ನಮ್ಮ ವಿಮಾ ಪಾಲಿಸಿಗಳನ್ನು ವಿನ್ಯಾಸಗೊಳಿಸಲಾಗಿದೆ.
ವಾಹನ ಅಪಘಾತಗಳು ಅಥವಾ ಕಳ್ಳತನದಂತಹ ಅಪಾಯಗಳ ಸಂಭವ ಆಧರಿಸಿ ವಿಮೆ ಕ್ಲೈಮ್‌ಗಳನ್ನ ಸ್ವೀಕಾರಾರ್ಹಗೊಳಿಸಲಾಗುತ್ತದೆ. ಪೆಟ್ರೋಲ್, ಡೀಸೆಲ್, CNG ಮತ್ತು ಮುಂತಾದ ವಾಹನದಲ್ಲಿ ಬಳಸುವ ಇಂಧನದ ಪ್ರಕಾರವು ವಿಮೆ ಸ್ವೀಕಾರಾರ್ಹತೆಯಲ್ಲಿ ನಿರ್ಣಾಯಕ ಅಂಶವಲ್ಲ. ಸಾಂಪ್ರದಾಯಿಕ ಇಂಧನಗಳು ವಿಮೆ ಕ್ಲೈಮ್‌ಗೆ ಸ್ವೀಕಾರಾರ್ಹವಾಗಿದ್ದರೆ E-20 ಇಂಧನದೊಂದಿಗೂ ವಿಮೆ ಸ್ವೀಕಾರಾರ್ಹವಾಗಿರುತ್ತದೆ. ಆದ್ರೆ ICICI ಲೊಂಬಾರ್ಡ್ ಕೇವಲ ಇಂಧನ ಬಳಕೆಯ ಆಧಾರದ ಮೇಲೆ ವಿಮೆ ಕ್ಲೈಮ್‌ಗಳನ್ನ ತಿರಸ್ಕರಿಸುವುದಿಲ್ಲ ಎಂದು ಒತ್ತಿ ಹೇಳಿದೆ.

ವಾಹನ ಮಾಲೀಕರು ಏನು ಮಾಡಬೇಕು?
ಹಳೆಯ ಪೆಟ್ರೋಲ್ ವಾಹನಗಳ ಮಾಲೀಕರು ತಮ್ಮ ವಾಹನ ಮ್ಯಾನ್ಯುವಲ್ (ಕೈಪಿಡಿ)ಗಳನ್ನ ಪರಿಶೀಲಿಸಬೇಕು. ಅಧಿಕೃತ ಸೇವಾ ಕೇಂದ್ರಗಳೊಂದಿಗೆ ಇಂಧನ ಹೊಂದಾಣಿಕೆಯನ್ನು ದೃಢೀಕರಿಸಬೇಕು. ಇಂಧನ-ಸಂಬಂಧಿತ ಸಮಸ್ಯೆಗಳಿಗೆ ಸಂಬಂಧಿಸಿದ ಕ್ಲೈಮ್‌ಗಳನ್ನು ಸಲ್ಲಿಸುವ ಮೊದಲು ವಿಮಾ ಪಾಲಿಸಿ ನಿಯಮಗಳನ್ನು ಪರಿಶೀಲಿಸಬೇಕು. ಎಥೆನಾಲ್ ಮಿಶ್ರಣವು ವಿಸ್ತರಿಸಿದಂತೆ, ತಯಾರಕರ ಮಾರ್ಗದರ್ಶನ ಮತ್ತು ವಿಮಾ ಪಾಲಿಸಿ ಷರತ್ತುಗಳ ಮೇಲೆ ಗಮನಹರಿಸಬೇಕು.
ಯಾವ ಸರ್ಕಾರದಲ್ಲಿ ಎಥೆನಾಲ್‌ಗೆ ಪ್ರೋತ್ಸಾಹ?
ಈಗ ಇ 20, ಇ 85, ಇ100 ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಆದರೆ ಇದು ಜಾರಿಯಾಗುವ ಮೊದಲು ಯಾವ ಸರ್ಕಾರ ಎಥೆನಾಲ್ ಬಳಕೆಗೆ ಹೇಗೆ ಪ್ರೋತ್ಸಾಹ ನೀಡಿತ್ತು ಅಂತ ತಿಳ್ಕೊಳ್ಳೋದು ಬಹಳ ಮುಖ್ಯ. ಹಾಗೆ ನೋಡಿದ್ರೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗ 2001 ರಲ್ಲಿ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಸುಮಾರು 300 ಪೆಟ್ರೋಲ್ ಬಂಕ್‌ಗಳಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಎಥೆನಾಲ್ ಮಿಶ್ರಣವನ್ನು ಪರಿಚಯಿಸಿತ್ತು.
2002 ರಲ್ಲಿ ವಾಜಪೇಯಿ ಸರ್ಕಾರವು ಒಂಬತ್ತು ಪ್ರಮುಖ ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇಕಡಾ 5 ರಷ್ಟು ಎಥೆನಾಲ್ ಮಿಶ್ರಣ ಮಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತು. ಇದು ಜನವರಿ 2003 ರಲ್ಲಿ ಅಧಿಕೃತವಾಗಿ ಜಾರಿಗೆ ಬಂದಿತು.
ಮನಮೋಹನ್ ಸಿಂಗ್ ಅವಧಿ ಅಂದ್ರೆ 2006 ರಲ್ಲಿ ಪೆಟ್ರೋಲಿಯಂ ಸಚಿವಾಲಯವು 5% ಎಥೆನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯನ್ನು ದೇಶದ 20 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಲು ತೈಲ ಕಂಪನಿಗಳಿಗೆ ಸೂಚಿಸಿತ್ತು. ಯುಪಿಎ ಅವಧಿಯಲ್ಲಿ 2009 ರಲ್ಲಿ ಮೊದಲ ಬಾರಿಗೆ ‘ರಾಷ್ಟ್ರೀಯ ಜೈವಿಕ ಇಂಧನ ನೀತಿ’ಯನ್ನು ತರಲಾಯಿತು. ಇದರಲ್ಲಿ 2017 ರ ಒಳಗಡೆ ಶೇ.20 ರಷ್ಟು ಎಥೆನಾಲ್ ಮಿಶ್ರಣ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಲಾಗಿತ್ತು.

ಭಾರತದಲ್ಲಿ ಎಥೆನಾಲ್ 85 ಪ್ರಯೋಜನಗಳೇನು?:
ಜಾಗತಿಕ ತೈಲ ಬಿಕ್ಕಟ್ಟು ಮತ್ತು ಆಮದು ಕಡಿತ:
ಕಚ್ಚಾ ತೈಲದ ಬೆಲೆ ಏರಿಳಿತಗಳಿಂದ ದೇಶದ ಆರ್ಥಿಕತೆಯ ಮೇಲಾಗುವ ಪರಿಣಾಮವನ್ನು ತಪ್ಪಿಸಲು, ಪೆಟ್ರೋಲ್ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಭಾರತಕ್ಕೆ ಅನಿವಾರ್ಯವಾಗಿದೆ. ಎಥೆನಾಲ್ 85ರ ಅನುಷ್ಠಾನದಿಂದ ತೈಲ ಆಮದು ವೆಚ್ಚದಲ್ಲಿ ವರ್ಷಕ್ಕೆ ಲಕ್ಷಾಂತರ ಕೋಟಿ ರೂಪಾಯಿ ಉಳಿತಾಯವಾಗಲಿದ್ದು, ʼಆತ್ಮನಿರ್ಭರ ಭಾರತʼ ಕನಸು ನನಸಾಗಲು ಇದು ದಾರಿ ಮಾಡಿಕೊಡಲಿದೆ.
ರೈತರಿಗೆ ಆರ್ಥಿಕ ವರದಾನ:
ಇದು ಕೃಷಿ ವಲಯವನ್ನು ಇಂಧನ ವಲಯದೊಂದಿಗೆ ನೇರವಾಗಿ ಬೆಸೆಯುತ್ತದೆ. ಎಥೆನಾಲ್ ಉತ್ಪಾದನೆಯಿಂದ ಕಬ್ಬು ಮತ್ತು ಮೆಕ್ಕೆಜೋಳ ಬೆಳೆಯುವ ಭಾರತೀಯ ರೈತರಿಗೆ ಹೊಸ ಮಾರುಕಟ್ಟೆ ಸೃಷ್ಟಿಯಾಗಿ, ಅವರ ಆದಾಯ ದ್ವಿಗುಣಗೊಳ್ಳಲು ಸಹಾಯವಾಗುತ್ತದೆ.
ಪರಿಸರ ಸಂರಕ್ಷಣೆ:
ಇ85 ಇಂಧನವು ಶುದ್ಧವಾಗಿ ದಹಿಸುತ್ತದೆ. ಇದರ ಬಳಕೆಯಿಂದ ಕಾರ್ಬನ್ ಮೋನೋಕ್ಸೈಡ್ (ಸಿಒ) ಮತ್ತು ಹಸುರುಮನೆ ಅನಿಲಗಳ ಹೊರಸೂಸುವಿಕೆ ಶೇ.40-50ರಷ್ಟು ಕಡಿಮೆಯಾಗುತ್ತದೆ. ದಿಲ್ಲಿ, ಬೆಂಗಳೂರು, ಮುಂಬೈನಂಥ ಮಹಾನಗರಗಳಲ್ಲಿನ ವಾಯುಮಾಲಿನ್ಯವನ್ನು ನಿಯಂತ್ರಿಸಲು ಇದು ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದೆ. ಎಥೆನಾಲ್ 85 ಭಾರತದ ಭವಿಷ್ಯದ ಇಂಧನ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಆರ್ಥಿಕತೆಗೆ, ಪರಿಸರಕ್ಕೆ ಮತ್ತು ರೈತರಿಗೆ ದೊಡ್ಡ ಮಟ್ಟದ ಲಾಭ ತರುವ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂಬುದು ತಜ್ಞರ ಅಭಿಪ್ರಾಯ.
