ಶ್ರೀನಗರ: ಕಾಶ್ಮೀರಿ ಪಂಡಿತ ಸಮುದಾಯದ ನರ್ಸ್ ಸರಳಾ ಭಟ್(Sarala Bhat) ಹತ್ಯೆ ಪ್ರಕರಣದಲ್ಲಿ 36 ವರ್ಷಗಳ ಬಳಿಕ ಮಹತ್ವದ ಬೆಳವಣಿಗೆ ನಡೆದಿದೆ. ಜಮ್ಮು-ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ (SIA) ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ(charge sheet) ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್‌ನನ್ನು ಈ ಹತ್ಯೆಯ ಸಂಚುಕೋರ ಎಂದು ಹೆಸರಿಸಲಾಗಿದೆ.
1990ರ ಏಪ್ರಿಲ್ 18ರಂದು ಶ್ರೀನಗರದ ಶೇರ್-ಇ-ಕಾಶ್ಮೀರ್ ವೈದ್ಯಕೀಯ ವಿಜ್ಞಾನ ಸಂಸ್ಥೆ (SKIMS)ಯಲ್ಲಿ ನರ್ಸ್ ಆಗಿದ್ದ ಸರಳಾ ಭಟ್ ಅವರನ್ನು ಅಪಹರಿಸಿ, ಅತ್ಯಾಚಾರ ನಡೆಸಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿದ್ದರೂ ಆಸ್ಪತ್ರೆಯಲ್ಲಿ ಸೇವೆ ಮುಂದುವರಿಸಿದ್ದ ಕೆಲವೇ ಕಾಶ್ಮೀರಿ ಪಂಡಿತ ಮಹಿಳೆಯರಲ್ಲಿ ಅವರು ಒಬ್ಬರಾಗಿದ್ದರು.
ಈ ಪ್ರಕರಣದಲ್ಲಿ ಜಮ್ಮು-ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ 737 ಪುಟಗಳ ಚಾರ್ಜ್‌ಶೀಟ್ ಅನ್ನು ವಿಶೇಷ ಟಾಡಾ/ಪೋಟಾ ನ್ಯಾಯಾಲಯಕ್ಕೆ ಸಲ್ಲಿಸಿದೆ. ಅದರಲ್ಲಿ ಜೆಕೆಎಲ್‌ಎಫ್‌ನ ಅಂದಿನ ಮುಖ್ಯ ಕಮಾಂಡರ್ ಯಾಸಿನ್ ಮಲಿಕ್ ಈ ಹತ್ಯೆಯ ಹಿಂದಿನ ಪ್ರಮುಖ ಸಂಚುಕೋರ ಎಂದು ಉಲ್ಲೇಖಿಸಲಾಗಿದೆ.
ಚಾರ್ಜ್‌ಶೀಟ್ ಪ್ರಕಾರ, 1990ರ ಏಪ್ರಿಲ್ 8ರಂದು ನರ್ವಾರಾ ಪ್ರದೇಶದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಯಾಸಿನ್ ಮಲಿಕ್ ತಪ್ಪಿಸಿಕೊಂಡಿದ್ದ. ಈ ವೇಳೆ ಅವನಿಗೆ ಗಾಯವಾಗಿತ್ತು. ಈ ಕಾರ್ಯಾಚರಣೆಯ ಮಾಹಿತಿ ಸರಳಾ ಭಟ್ ನೀಡಿದ್ದರು ಎಂಬ ಅನುಮಾನದಿಂದ ಅವರ ವಿರುದ್ಧ ಸಂಚು ರೂಪಿಸಲಾಗಿದೆ ಎನ್ನಲಾಗಿದೆ.ಇದನ್ನೂ ಓದಿ: ಮಹಾತ್ಮಾ ಗಾಂಧಿ ವಿಬಿ ಜಿ ರಾಮ್ ಜಿ ಹೆಸರಿಡಲು ಕೇಂದ್ರಕ್ಕೆ ಈಶ್ವರ ಖಂಡ್ರೆ ಆಗ್ರಹ
ಆದರೆ ತನಿಖೆಯಲ್ಲಿ ಸರಳಾ ಭಟ್ ಮಾಹಿತಿ ನೀಡಿದ್ದರು ಎಂಬ ಆರೋಪಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಈ ಆರೋಪ ಸಂಪೂರ್ಣ ಸುಳ್ಳು ಎಂದು ಎಸ್‌ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ಸ್ಪಷ್ಟಪಡಿಸಿದೆ. ಕಾಶ್ಮೀರಿ ಪಂಡಿತರಲ್ಲಿ ಭಯ ಹುಟ್ಟಿಸಿ, ಅವರನ್ನು ಕಣಿವೆಯಿಂದ ಹೊರಹೋಗುವಂತೆ ಮಾಡುವ ಉದ್ದೇಶದಿಂದಲೇ ಈ ಹತ್ಯೆ ನಡೆದಿದೆ ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.
2024ರ ಮಾರ್ಚ್‌ನಲ್ಲಿ ಈ ಪ್ರಕರಣವನ್ನು ಎಸ್‌ಐಎಗೆ ವರ್ಗಾಯಿಸಲಾಗಿತ್ತು. ಬಳಿಕ ಅಧಿಕಾರಿಗಳು ಮೂರುವರೆ ದಶಕಗಳ ಹಿಂದಿನ ಸಾಕ್ಷಿಗಳನ್ನು ಪತ್ತೆಹಚ್ಚಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ಪೂರ್ಣಗೊಳಿಸಿದ್ದಾರೆ. ಘಟನೆಯ ವೇಳೆ ಕೆಲಸ ಮಾಡುತ್ತಿದ್ದ ನರ್ಸ್‌ಗಳು, ಪತ್ರಕರ್ತರು ಹಾಗೂ ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿದೆ.
ಚಾರ್ಜ್‌ಶೀಟ್‌ನಲ್ಲಿ ಯಾಸಿನ್ ಮಲಿಕ್ ಜೊತೆಗೆ ಖುರ್ಷಿದ್ ಅಹ್ಮದ್ ಚಾಲ್ಕೂ, ಅಬ್ದುಲ್ ಹಮೀದ್ ಶೇಖ್, ಮೊಹಮ್ಮದ್ ಯೂಸುಫ್ ಸೋಫಿ ಅಲಿಯಾಸ್ ಇದ್ರೀಸ್ ಹಾಗೂ ಗುಲಾಂ ಮೊಹಮ್ಮದ್ ಟಪ್ಲೂ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಇವರಲ್ಲಿ ಮೂವರು ಮೃತಪಟ್ಟಿದ್ದು, ಖುರ್ಷಿದ್ ಚಾಲ್ಕೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಫೊರೆನ್ಸಿಕ್ ಮತ್ತು ಬ್ಯಾಲಿಸ್ಟಿಕ್ ಪರೀಕ್ಷೆಯಲ್ಲಿ ಘಟನಾ ಸ್ಥಳದಲ್ಲಿ ಪತ್ತೆಯಾದ ಮೂರು ಕಾರ್ಟ್ರಿಡ್ಜ್‌ಗಳು ಒಂದೇ 7.62×39 ಮಿ.ಮೀ. ರೈಫಲ್‌ನಿಂದ ಹಾರಿಸಲಾಗಿದ್ದವು ಎಂಬುದು ದೃಢಪಟ್ಟಿದೆ. ಸಾಕ್ಷಿದಾರರ ಹೇಳಿಕೆ, ವೈದ್ಯಕೀಯ ವರದಿ, ಎಲೆಕ್ಟ್ರಾನಿಕ್ ಸಾಕ್ಷ್ಯ ಹಾಗೂ ಇತರ ದಾಖಲೆಗಳು ಪ್ರಕರಣಕ್ಕೆ ಬಲವಾದ ಆಧಾರವಾಗಿವೆ ಎಂದು ಎಸ್‌ಐಎ ತಿಳಿಸಿದೆ.
ಪೊಲೀಸರ ಪ್ರಕಾರ, ಇದು ಕೇವಲ ಒಂದು ಕೊಲೆ ಪ್ರಕರಣವಲ್ಲ. ಕಾಶ್ಮೀರಿ ಪಂಡಿತರ ವಿರುದ್ಧ ನಡೆಸಲಾಗಿದ್ದ ಸಂಘಟಿತ ಹಿಂಸಾಚಾರದ ಭಾಗವಾಗಿದೆ. ಈ ತನಿಖೆಯಿಂದ ನ್ಯಾಯಮೂರ್ತಿ ನೀಲಕಂಠ ಗಂಜೂ, ವಕೀಲ ಟಿಕ್ಕಾ ಲಾಲ್ ಟಪ್ಲೂ ಹಾಗೂ ಕವಿ ಸರ್ವಾನಂದ್ ಕೌಲ್ ಪ್ರೇಮಿ ಹತ್ಯೆ ಪ್ರಕರಣಗಳಿಗೂ ಹೊಸ ಸುಳಿವುಗಳು ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಆ ಪ್ರಕರಣಗಳಲ್ಲೂ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆ ಇದೆ.ಇದನ್ನೂ ಓದಿ: ಭಾರತ-ಸೀಶೆಲ್ಸ್ ಬಾಂಧವ್ಯಕ್ಕೆ ಚಟ್ನಿ, ಸಮೋಸಾ ಸಾಕ್ಷಿ ಎಂದ ಪ್ರಧಾನಿ ಮೋದಿ
