ನವದೆಹಲಿ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನ ಗುರಿಯಾಗಿಸಿಕೊಂಡು ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವಿನ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ (Rahul Gndhi) ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ದೇಶಾದ್ಯಂತ ಕಾಂಗ್ರೆಸ್ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲು ಬಿಜೆಪಿ ಸಜ್ಜಾಗಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಿರಂತರವಾಗಿ ಆಗ್ರಹಿಸುತ್ತಿದ್ದು, ಈ ವಿಷಯದ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಈಗಾಗಲೇ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಜಿರಳೆಗಳ ವಿರುದ್ಧ ಲಾಠಿಚಾರ್ಜ್| ವಿಡಿಯೋ ನೋಡಲು ಸಮಯವಿಲ್ಲ – ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಕಾಂಗ್ರೆಸ್ ಕಚೇರಿಗಳ ಮುಂದೆ ಬಿಜೆಪಿ ಪ್ರತಿಭಟನೆ
ಪಕ್ಷದ ಮೂಲಗಳು ಹೇಳುವಂತೆ, ರಾಜ್ಯಗಳಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಗಳ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಪ್ರಧಾನಿ ನಿವಾಸದ ಮುಂದೆ ಪ್ರತಿಭಟನೆ ನಡೆಸುವ ಮೂಲಕ ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದನ್ನೂ ಓದಿ: ತಡರಾತ್ರಿ ವಾಂಗ್ಚುಕ್‌ರನ್ನು ಭೇಟಿಯಾದ ಕೇಂದ್ರ ಸಚಿವರು – ಇಂದು ಸಿಜೆಪಿ ಜೊತೆ ಮತ್ತೊಂದು ಸಭೆ
ಪ್ರಧಾನಿಗಳ ಭದ್ರತೆಗೆ ಧಕ್ಕೆ
ಪ್ರಧಾನಮಂತ್ರಿಗಳ ಭದ್ರತೆಗೆ ಧಕ್ಕೆಯುಂಟು ಮಾಡುವ ರೀತಿಯಲ್ಲಿ ಕಾಂಗ್ರೆಸ್ ನಡೆದುಕೊಂಡಿದೆ ಎಂದು ಬಿಜೆಪಿ ಆರೋಪಿಸಿದ್ದು, ರಾಜಕೀಯ ವಿರೋಧಿಗಳ ನಿವಾಸಗಳ ಮುಂದೆ ಪ್ರತಿಭಟನೆ ನಡೆಸುವ ಸಂಸ್ಕೃತಿಯನ್ನು ಕಾಂಗ್ರೆಸ್ ಉತ್ತೇಜಿಸುತ್ತಿದೆ. ಹೀಗಾಗಿ ಮಂಗಳವಾರ ನಡೆದ ಪ್ರತಿಭಟನೆಯನ್ನು ವಿರೋಧಿಸಿ ಬಿಜೆಪಿ ಕೂಡ ದೇಶವ್ಯಾಪಿ ಪ್ರತಿಭಟನೆ ಯೋಜಿಸುತ್ತಿದೆ ಎಂದು ಪಕ್ಷ ತಿಳಿಸಿದೆ.

ನೀಟ್ ವಿವಾದದ ಸುತ್ತ ರಾಜಕೀಯ ಕದನ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ರಾಜಕೀಯ ವಲಯದಲ್ಲಿ ಪ್ರಮುಖ ಚರ್ಚಿತ ವಿಷಯವಾಗಿಯೇ ಉಳಿದಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಕಾಂಗ್ರೆಸ್‌ನ ಒತ್ತಾಯ ಮುಂದುವರಿದಿದೆ.
ಈ ಹಿಂದೆ ಸಂಸತ್ತಿನ ಉಭಯ ಸದನಗಳಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಸಬೇಕೆಂದು ಆಗ್ರಹಿಸಿದ್ದ ರಾಹುಲ್ ಗಾಂಧಿ, ಇದೀಗ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾತ್ರವಲ್ಲದೇ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನೆಗೆ ಟಿವಿಕೆ ಸಾಥ್ – ನೀಟ್ ರದ್ದುಪಡಿಸುವಂತೆ ವಿಜಯ್ ಪಕ್ಷ ಆಗ್ರಹ

ಆದರೆ, ರಾಹುಲ್ ಗಾಂಧಿ ತಮ್ಮ ಬೇಡಿಕೆಗಳನ್ನ ಪದೇಪದೆ ಬದಲಾಯಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಇದೇ ವೇಳೆ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ಕುರಿತು ಪ್ರತಿಕ್ರಿಯೆ ನೀಡಿ, ವಿದ್ಯಾರ್ಥಿಗಳನ್ನ ರಾಜಕೀಯ ಉದ್ದೇಶಕ್ಕಾಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ʻಕಾಕ್ರೋಚ್ʼ ಪ್ರತಿಭಟನೆಗೆ ವಿಪಕ್ಷ ನಾಯಕರ ಬೆಂಬಲ
ಇನ್ನೂ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಪ್ರತಿಭಟನೆಗೆ ಹಲವು ವಿರೋಧ ಪಕ್ಷಗಳ ನಾಯಕರು ಬೆಂಬಲ ಸೂಚಿಸಿದ್ದಾರೆ. ಎಎಪಿ ಪಕ್ಷದ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ರಾಹುಲ್ ಗಾಂಧಿ ಸೇರಿದಂತೆ ಅನೇಕ ವಿಪಕ್ಷಗಳ ನಾಯಕರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
