– ಡಿಎಂಕೆ ವಿರುದ್ಧ ಪರೋಕ್ಷ ಟೀಕೆ
ಚೆನ್ನೈ: ನೀಟ್ ಪರೀಕ್ಷೆ ಸುತ್ತ ವಿವಾದ ತೀವ್ರವಾಗಿರುವ ನಡುವೆಯೇ ತಮಿಳುನಾಡಿನ ಸಿಎಂ ವಿಜಯ್ (CM Vijay) ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷ, ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಪಡಿಸುವಂತೆ ಆಗ್ರಹಿಸಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ( NEET Paper Leak) ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ದೇಶದಾದ್ಯಂತ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಆಡಳಿತಾರೂಢ ಟಿವಿಕೆ ಪಕ್ಷ ತನ್ನ ನಿಲುವು ಸ್ಪಷ್ಟಪಡಿಸಿದೆ. ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದೆ.
ಮಂಗಳವಾರ ಪ್ರಕಟಿಸಿದ ಹೇಳಿಕೆಯಲ್ಲಿ, ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಬೇಕು ಎಂದು ಟಿವಿಕೆ ಆಗ್ರಹಿಸಿದೆ. ಶಿಕ್ಷಣವನ್ನು ಕೇಂದ್ರದ ಸಮವರ್ತಿ ಪಟ್ಟಿಯಿಂದ ರಾಜ್ಯ ಪಟ್ಟಿಗೆ ವರ್ಗಾಯಿಸಬೇಕು ಎಂದು ಪಕ್ಷ ಹೇಳಿದೆ. ಸಾಧ್ಯವಾಗದಿದ್ದರೆ, ಮಧ್ಯಂತರ ಕ್ರಮವಾಗಿ ವಿಶೇಷ ವ್ಯವಸ್ಥೆ ರೂಪಿಸಿ ರಾಜ್ಯಗಳಿಗೆ ವೈದ್ಯಕೀಯ ಶಿಕ್ಷಣ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಟಿವಿಕೆ ಸಲಹೆ ನೀಡಿದೆ.ಇದನ್ನೂ ಓದಿ: ಶಿವಾಜಿನಗರದಲ್ಲಿ GBA ಅಧಿಕಾರಿಗಳ ಮೇಲೆ ಹಲ್ಲೆ; ಬೆಳಗ್ಗೆಯೇ ದಾಳಿ ಪ್ಲಾನ್, 11 ಮಂದಿ ಅರೆಸ್ಟ್
ಪಕ್ಷವು ಡಿಎಂಕೆ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ನೀಟ್ ರದ್ದು ಮಾಡುತ್ತೇವೆ ಎಂದು ಹೇಳಿ ಜನರ ಮತ ಪಡೆಯುವ ರಾಜಕೀಯವನ್ನು ನಾವು ಮಾಡುವುದಿಲ್ಲ ಎಂದು ಟೀಕಿಸಿದೆ.
ದೆಹಲಿಯಲ್ಲಿ ನೀಟ್ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದ್ದು, ಕಾಂಗ್ರೆಸ್ ಪಕ್ಷವೂ ಈ ಹೋರಾಟಕ್ಕೆ ಬೆಂಬಲ ನೀಡಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಅಕ್ರಮದ ವಿರುದ್ಧ ಧ್ವನಿ ಎತ್ತಿದ್ದಾರೆ. ಇದೀಗ ತಮಿಳುನಾಡಿನಲ್ಲೂ ನೀಟ್ ವಿಚಾರ ರಾಜಕೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ ವಾರ್ – ಈಗ ಜೆನೆರಿಕ್ ಔಷಧಿಗಳ ಮೇಲೆ 200% ಸುಂಕ
