ವಾಷಿಂಗ್ಟನ್: ಅಮೆರಿಕದಲ್ಲಿ (America) ಔಷಧ ಉತ್ಪಾದನೆ (Generic Drugs) ಹೆಚ್ಚಿಸುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald trump) ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಿಗಳ ಮೇಲೆ ಹೊಸ ಸುಂಕ ನೀತಿಯನ್ನು ಘೋಷಿಸಿದ್ದಾರೆ.
ಟ್ರಂಪ್ ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಿಗಳ ಮೇಲೆ ಹಂತಹಂತವಾಗಿ ಸುಂಕ ಹೆಚ್ಚಿಸುವ ಹೊಸ ಯೋಜನೆಯನ್ನು ಪ್ರಕಟಿಸಿದ್ದಾರೆ. 2028ರ ತನಕ ಯಾವುದೇ ಸುಂಕ ಇರುವುದಿಲ್ಲ. ಬಳಿಕ ಒಂದು ವರ್ಷ 100% ಮತ್ತು ನಂತರ 200% ಸುಂಕ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಟ್ರಂಪ್ ತಮ್ಮ Truth Social ವೇದಿಕೆಯಲ್ಲಿ ಈ ಘೋಷಣೆ ಮಾಡಿದ್ದು, ಔಷಧ ಕಂಪನಿಗಳು ಅಮೆರಿಕದಲ್ಲೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ. ವಿದೇಶಗಳಿಂದ ಔಷಧ ಆಮದು ಮಾಡುವ ಬದಲು ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶ ಎಂದಿದ್ದಾರೆ.
2026ರ ಆಗಸ್ಟ್ 1ರಿಂದ ಮುಂದಿನ ಎರಡು ವರ್ಷಗಳವರೆಗೆ ಜೆನೆರಿಕ್ ಔಷಧಿಗಳ ಆಮದಿಗೆ ಯಾವುದೇ ಸುಂಕ ಇರುವುದಿಲ್ಲ. 2028ರಿಂದ ಒಂದು ವರ್ಷದವರೆಗೆ 100% ಸುಂಕ, ಅದರ ನಂತರ 200% ಸುಂಕ ಜಾರಿಗೆ ಬರಲಿದೆ.
ನಿಗದಿತ ಅವಧಿಯೊಳಗೆ ಅಮೆರಿಕದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸದ ಕಂಪನಿಗಳಿಗೆ ಈ ಹೆಚ್ಚುವರಿ ಸುಂಕ ದಂಡದಂತೆ ಕೆಲಸ ಮಾಡಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಹೊಸ ಔಷಧ ಉತ್ಪಾದನಾ ಘಟಕಗಳು ನಿರ್ಮಾಣವಾಗುತ್ತಿವೆ ಎಂದೂ ಅವರು ಹೇಳಿದ್ದಾರೆ.ಇದನ್ನೂ ಓದಿ: ಕಚ್ಚಾ ತೈಲ ದರ ಭಾರೀ ಜಿಗಿತ – ಜೂನ್ ಬಳಿಕ ಸಾರ್ವಕಾಲಿಕ ಏರಿಕೆ
ಅಮೆರಿಕದಲ್ಲಿ ಬಳಕೆಯಾಗುವ ಔಷಧಿಗಳಲ್ಲಿ ಶೇ.90ಕ್ಕೂ ಹೆಚ್ಚು ಜೆನೆರಿಕ್ ಔಷಧಿಗಳೇ ಆಗಿವೆ. ಹೀಗಾಗಿ ಈ ಹೊಸ ನೀತಿ ಭಾರತದ ಔಷಧ ಉದ್ಯಮದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೂ ಮೊದಲು ಟ್ರಂಪ್ ಆಡಳಿತ ಬ್ರಾಂಡೆಡ್ ಔಷಧಿಗಳ ಮೇಲೂ ಹಲವು ನಿಯಮಗಳನ್ನು ಜಾರಿಗೆ ತಂದಿತ್ತು. ಈಗ ಜೆನೆರಿಕ್ ಔಷಧಿಗಳ ಮೇಲಿನ ಹೊಸ ಸುಂಕ ನೀತಿ ಔಷಧ ಕ್ಷೇತ್ರದಲ್ಲಿ ಮತ್ತೊಂದು ಪ್ರಮುಖ ಬದಲಾವಣೆಯಾಗಿ ಕಾಣುತ್ತಿದೆ. ಇದನ್ನೂ ಓದಿ: ಸ್ಪೇನ್‌ನ ಒಂದು ಗೋಲ್‌ನಿಂದ ಮಿಯಾ ಖಲೀಫಾಗೆ ಸಿಕ್ತು 15.92 ಕೋಟಿ!
