ಮಂಡ್ಯ: ಕಾವೇರಿ ಮಡಿಲಿನ ಸಕ್ಕರೆ ನಾಡು ಮಂಡ್ಯದಲ್ಲಿ ಅನ್ನದಾತರ ಬದುಕು ಮತ್ತೆ ಅತಂತ್ರವಾಗಿದೆ. ಕೆಆರ್‌ಎಸ್ ಅಣೆಕಟ್ಟಿನಲ್ಲಿ (KRS Dam) ನೀರಿನ ಕೊರತೆಯ ನೆಪವೊಡ್ಡಿರುವ ಸರ್ಕಾರ, ರೈತರಿಗೆ ಭತ್ತ ಮತ್ತು ಕಬ್ಬು ಬೆಳೆಯದಂತೆ ತಾಕೀತು ಮಾಡಿದೆ. ಬದಲಾಗಿ ರಾಗಿ, ಜೋಳ, ಹುರುಳಿ, ಹಲಸಂದೆಯಂತಹ ಅರೆಖುಷ್ಕಿ ಬೆಳೆಗಳಿಗೆ ಆದ್ಯತೆ ನೀಡಿ ಎಂದು ಸಲಹೆ ನೀಡಿದೆ. ಆದರೆ ತಲತಲಾಂತರಗಳಿಂದ ಭತ್ತವನ್ನೇ ಉಸಿರಾಗಿಸಿಕೊಂಡಿರುವ ಮಂಡ್ಯದ ರೈತರು, ಸರ್ಕಾರದ ಎಚ್ಚರಿಕೆಯ ನಡುವೆಯೂ ದೇವರ ಮೇಲೆ ಭಾರ ಹಾಕಿ ಭತ್ತದ (Paddy) ನಾಟಿಗೆ ಇಳಿದಿದ್ದಾರೆ.

ಜಲಾಶಯದಿಂದ ಕಾಲುವೆಗಳಿಗೆ ನಿರಂತರ ನೀರು (Cauvery Water) ಹರಿಸಲು ಹಿಂದೇಟು ಹಾಕುತ್ತಿರುವ ಸರ್ಕಾರ, ಪ್ರಸ್ತುತ ಕಟ್ಟು ಪದ್ಧತಿಯ ಮೂಲಕ 15 ದಿನಗಳ ಅಂತರದಲ್ಲಿ ಮಾತ್ರ ನೀರು ಪೂರೈಸುತ್ತಿದೆ. ಈ ಅಲ್ಪಸ್ವಲ್ಪ ನೀರನ್ನೇ ನಂಬಿ ರೈತರು ಕೆಸರುಗದ್ದೆಗೆ ಇಳಿದು ನಾಟಿ ಕಾರ್ಯ ಕೈಗೊಂಡಿದ್ದಾರೆ. ಕೈಕಟ್ಟಿ ಕುಳಿತರೆ ಹೊಟ್ಟೆಗೆ ಹಿಟ್ಟಿಲ್ಲ, ಮಾಡಿದ ಸಾಲ ತೀರಿಸಲು ದಾರಿಯಿಲ್ಲ. ಅದಕ್ಕೇ ದೇವರಿಗೆ ಕೈಮುಗಿದು ಗದ್ದೆಗೆ ಸಸಿ ಇಳಿಸುತ್ತಿದ್ದೇವೆ ಎಂದು ರೈತರು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.

ಕಾಳು ಕಟ್ಟುವ ಹೊತ್ತಿಗೆ ನೀರಿನ ಅಭಾವ ಬಂದ್ರೆ ಬೆಳೆ ಸರ್ವನಾಶ
ಸದ್ಯಕ್ಕೇನೋ ಇರುವ ನೀರಿನಲ್ಲೇ ನಾಟಿ ಮಾಡಲಾಗುತ್ತಿದೆ. ಆದರೆ ಭತ್ತ ತೆನೆಬಿಟ್ಟು ಕಾಳು ಕಟ್ಟುವ ನಿರ್ಣಾಯಕ ಹಂತದಲ್ಲಿ ಕಾಲುವೆಗೆ ನೀರು ಬಾರದೇ ಹೋದರೆ ಏನು ಕಥೆ? ಎಂಬ ಆತಂಕ ಪ್ರತಿಯೊಬ್ಬ ರೈತರನ್ನೂ ಕಾಡುತ್ತಿದೆ. ಆ ಹಂತದಲ್ಲಿ ನೀರಿನ ಅಭಾವ ಉಂಟಾದರೆ ಇಡೀ ಬೆಳೆ ಒಣಗಿ ಬೂದಿಯಾಗಲಿದ್ದು, ಲಕ್ಷಾಂತರ ರೂಪಾಯಿ ಹೂಡಿಕೆ ಸಂಪೂರ್ಣ ಮಣ್ಣುಪಾಲಾಗಲಿದೆ. ಇಂತಹ ಅಪಾಯ ಗೊತ್ತಿದ್ದರೂ, ಬೇರೆ ದಾರಿಯಿಲ್ಲದೆ ರೈತರು ಮಳೆ ಮೇಲೆ ಜೂಜಾಟಕ್ಕೆ ನಿಂತಿದ್ದಾರೆ.

ತಮಿಳುನಾಡಿಗೆ ಧಾರಾಳ, ನಮ್ಮ ಬೆಳೆಗೆ ಕೊರತೆಯೇ?
ಸರ್ಕಾರದ ಈ ಧೋರಣೆ ವಿರುದ್ಧ ಮಂಡ್ಯದ ರೈತ ಸಮುದಾಯದಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದೆ. ತಮಿಳುನಾಡಿಗೆ ಕಾವೇರಿ ನೀರನ್ನ ನಿರಂತರವಾಗಿ ಹರಿಸುವ ಆಡಳಿತ ವ್ಯವಸ್ಥೆ, ರಾಜ್ಯದ ಅನ್ನದಾತನ ಬೆಳೆಗೆ ನೀರು ಕೊಡುವಾಗ ಮಾತ್ರ ಕಟ್ಟು ಪದ್ಧತಿಯ ನಾಟಕವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೇಳಿಕೊಳ್ಳಲು ನಮ್ಮ ಭಾಗದವರೇ ಜಲಸಂಪನ್ಮೂಲ ಮತ್ತು ಕೃಷಿ ಸಚಿವರಾಗಿದ್ದಾರೆ. ಆದರೆ ನೆಲದ ಮಕ್ಕಳ ಹಿತ ಕಾಯಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ರಾಜಕಾರಣಿಗಳು, ಅಧಿಕಾರಿಗಳ ಭರವಸೆ ನಂಬಿ ಫಲವಿಲ್ಲ. ಇನ್ನೇನಿದ್ದರೂ ಆ ವರುಣ ದೇವನೇ ಕರುಣೆ ತೋರಿ, ಉತ್ತಮ ಮಳೆ ಸುರಿಸಿ ನಮ್ಮ ಬೆಳೆಯನ್ನು ಕಾಪಾಡಬೇಕು ಎಂದು ರೈತರು ಕಣ್ಣೀರಿಡುತ್ತಿದ್ದಾರೆ.
