ಮೈಸೂರು/ಬೆಂಗಳೂರು: ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿಚಾರ್ಜ್ ಖಂಡಿಸಿ ಕಾಂಗ್ರೆಸ್ ನಡೆಸುತ್ತಿದ್ದ ಪ್ರತಿಭಟನೆ ಕಿಚ್ಚು ಈಗ ರಾಜ್ಯಕ್ಕೂ ಹಬ್ಬಿದೆ. ಮೈಸೂರು, ಬೆಂಗಳೂರು, ಬಾಗಲಕೋಟೆ, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
ನೀಟ್ ಅಕ್ರಮ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಸಂಸತ್ ಭವನ ಚಲೋ ದಂಗಲ್ ಬಳಿಕ ಕಾಂಗ್ರೆಸ್ ಸೆಟೆದು ನಿಂತಿದೆ. ನೀಟ್ ಪರೀಕ್ಷಾ ಅಕ್ರಮದ ವಿಚಾರವಾಗಿ ಅಖಾಡಕ್ಕೆ ಇಳಿದಿರುವ ಕಾಂಗ್ರೆಸ್ ಇವತ್ತೂ ಕೂಡ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.

ಬಾಗಲಕೋಟೆ
ಇಲ್ಲಿನ ಬನಹಟ್ಟಿ ನಗರದಲ್ಲಿ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಕಾಂಗ್ರೆಸ್‌ನ ಸಾವಿರಾರು ಯುವ ಕಾರ್ಯಕರ್ತರು ಬನಹಟ್ಟಿ-ಕಾಗವಾಡ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಮಡಿಕೇರಿ
ಇನ್ನು ಮಡಿಕೇರಿಯ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆದಿದೆ. ನಗರದ ಇಂದಿರಗಾಂಧಿ ಸರ್ಕಲ್ ಬಳಿ ಪ್ರತಿಭಟನೆ ನಡೆದಿದೆ. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ್ದಾರೆ.

ಮಂಡ್ಯ
ಇತ್ತ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಮಂಡ್ಯದಲ್ಲೂ ಪ್ರತಿಭಟನೆ ನಡೆದಿದೆ. ಮಂಡ್ಯ ಶಾಸಕ ಗಣಿಗ ರವಿಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಭಾರತದ ಶಿಕ್ಷಣ ವ್ಯವಸ್ಥೆ ಐಸಿಯುನಲ್ಲಿದೆ ಎಂದು ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ವಿರುದ್ದ ಶಾಸಕ ಗಣಿಗ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು
ನೀಟ್ ಪ್ರಶ್ನೆ ಪತ್ರಿಕೆ ವಿರುದ್ಧ ಪ್ರತಿಭಟನೆ ವಿಚಾರವಾಗಿ ಮೈಸೂರಲ್ಲಿ ಕಾಂಗ್ರೆಸ್ – ಬಿಜೆಪಿ ನಡುವೆ ಜಟಾಪಟಿ ನಡೆದಿದೆ. ಸರ್ಕಾರಿ ಶಾಲೆ ವಿದ್ಯಾರ್ಥಿಗಳನ್ನು ಬಲವಂತವಾಗಿ ಪ್ರತಿಭಟನೆ ಕರೆ ತರಲಾಗುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪಿಸಿದ್ದಾರೆ. ಮೈಸೂರು ಮಹಾರಾಣಿ ಜೂನಿಯರ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ಬಿಜೆಪಿ ನಾಯಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರ ಆರೋಪಕ್ಕೆ ಕೈ ಶಾಸಕ ಹರೀಶ್ ಗೌಡ ಸ್ಪಷ್ಟನೆ ನೀಡಿದ್ದಾರೆ, ಎರಡು ಪಕ್ಷದ ನಾಯಕರ ನಡುವೆ ಪರಸ್ಪರ ವಾಗ್ವಾದ ನಡೆದಿದೆ.

ಕೋಲಾರ
ಇನ್ನೂ ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಕೋಲಾರದಲ್ಲಿ ಕಾಂಗ್ರೆಸ್ ಘಟಕದ ವತಿಯಿಂದ ಪ್ರತಿಭಟನೆ ನಡೆದಿದೆ. ಕೆಪಿಸಿಸಿ ಬಿ.ಅರ್ ನಾಯ್ಡು ಅವರ ನೇತೃತ್ವದಲ್ಲಿ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
