ನವದೆಹಲಿ: ದೇಶದಲ್ಲಿ ಇಂಧನ ಪೂರೈಕೆಯ ಪರಿಸ್ಥಿತಿ ಸುಧಾರಿಸಿರುವುದನ್ನು ಗಮನದಲ್ಲಿಟ್ಟುಕೊಂಡು, ಜುಲೈ 1 ರಿಂದ ಜಾರಿಗೆ ಬರುವಂತೆ ವಾಣಿಜ್ಯ ಗ್ರಾಹಕರಿಗೆ (Commercial Buyers) ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿದ್ದ ತಾತ್ಕಾಲಿಕ ನಿರ್ಬಂಧಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇನ್ನು ಮುಂದೆ ವಾಣಿಜ್ಯ, ಕೈಗಾರಿಕಾ ಸಾಮಾನ್ಯ ರಿಟೇಲ್ ಪೆಟ್ರೋಲ್ ಬಂಕ್‌ಗಳಿಂದಲೇ ನೇರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಬಹುದಾಗಿದೆ. ಜೂನ್ 12 ರಂದು ವಿಧಿಸಲಾಗಿದ್ದ ಪ್ರತಿ ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ (Diesel) ಮಾರಾಟದ ಮಿತಿಯನ್ನು (Cap) ಈಗ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಜೂನ್ 29 ರಂದು ಹೊರಡಿಸಿದ ಹೊಸ ಆದೇಶದಲ್ಲಿ, ಜೂನ್ 12 ರಂದು ಹೇರಲಾಗಿದ್ದ ತುರ್ತು ನಿಯಮಗಳು ಸಾರ್ವಜನಿಕ ಹಿತದೃಷ್ಟಿಯಿಂದ ಇನ್ನು ಮುಂದೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಪರಸ್ಪರ ದಾಳಿ ನಿಲ್ಲಿಸಲು ಒಪ್ಪಿಕೊಂಡ ಅಮೆರಿಕ – ಇರಾನ್; ಕತಾರ್‌ನಲ್ಲಿ ಹಾರ್ಮುಜ್ ಕುರಿತು ಹೈವೋಲ್ಟೇಜ್ ಟಾಕ್
ನಿರ್ಬಂಧ ಹೇರಿದ್ದು ಯಾಕೆ?
ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಜಾಗತಿಕವಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಈ ವೇಳೆ ಸಾರ್ವಜನಿಕ ರಿಟೇಲ್ ಬಂಕ್‌ಗಳಲ್ಲಿನ ಡೀಸೆಲ್ ಬೆಲೆಗಿಂತ ಬಲ್ಕ್ ಆಗಿ ಖರೀದಿಸುವ ಡೀಸೆಲ್ ಬೆಲೆ ಗಣನೀಯವಾಗಿ ಹೆಚ್ಚಾಗಿತ್ತು. ಈ ದೊಡ್ಡ ಬೆಲೆ ವ್ಯತ್ಯಾಸದಿಂದಾಗಿ ದೊಡ್ಡ ಕೈಗಾರಿಕೆಗಳು, ಟ್ರಕ್ಕಿಂಗ್ ಕಂಪನಿಗಳು ಮತ್ತು ಟೆಲಿಕಾಂ ಟವರ್ ಆಪರೇಟರ್‌ಗಳು ಸಗಟು ಮಾರುಕಟ್ಟೆ ಬಿಟ್ಟು ರಿಟೇಲ್ ಬಂಕ್‌ಗಳಿಂದಲೇ ಇಂಧನ ಖರೀದಿಸಲು ಮುಗಿಬಿದ್ದಿದ್ದರು. ಇದರಿಂದಾಗಿ ಸ್ಥಳೀಯವಾಗಿ ಇಂಧನ ಕೊರತೆ ಮತ್ತು ಕಾಳಸಂತೆ ತಡೆಯಲು ಸರ್ಕಾರ ಜೂನ್ 12 ರಂದು ನಿಯಂತ್ರಣ ಹೇರಿತ್ತು.
ಗಲ್ಫ್ ರಾಷ್ಟ್ರಗಳಿಂದ ಕಚ್ಚಾ ತೈಲ ಮತ್ತು ಇಂಧನ ಪೂರೈಕೆ ಸಹಜ ಸ್ಥಿತಿಗೆ ಮರಳಿರುವುದರಿಂದ ಹಾಗೂ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರ ಸುಗಮವಾಗಿರುವುದರಿಂದ ದೇಶೀಯ ಇಂಧನ ಲಭ್ಯತೆ ಉತ್ತಮಗೊಂಡಿದೆ. ಹೀಗಾಗಿ ಸರ್ಕಾರ ಈ ತುರ್ತು ನಿಯಮಗಳನ್ನು ಹಿಂಪಡೆದಿದ್ದು, ಜುಲೈ 1 ರಿಂದ ಎಂದಿನಂತೆ ಮುಕ್ತ ಮಾರಾಟ ವ್ಯವಸ್ಥೆ ಜಾರಿಗೆ ಬರಲಿದೆ.
