ವಾಷಿಂಗ್ಟನ್/ಟೆಹ್ರಾನ್: ಕದನ ವಿರಾಮ ಉಲ್ಲಂಘಿಸಿದ್ದಕ್ಕಾಗಿ ಇರಾನ್ (Iran) ಮೇಲೆ ಅಮೆರಿಕ ದಾಳಿ ನಡೆಸಿತ್ತು. ಆ ಬಳಿಕ ದಿನವಿಡೀ ಉದ್ವಿಗ್ನತೆ ಮುಂದುವರಿದ ನಂತರ ಉಭಯ ರಾಷ್ಟ್ರಗಳು ದಾಳಿಯನ್ನ (US Iran Attacks) ನಿಲ್ಲಿಸಲು ಒಪ್ಪಿಕೊಂಡಿವೆ. ಹಾರ್ಮುಜ್ ಜಲಸಂಧಿ ವಿವಾದ ಪರಿಹರಿಸಲು ನಾಳೆ (ಮಂಗಳವಾರ) ಕತಾರ್‌ನಲ್ಲಿ (Qatar) ಮಾತುಕತೆ ನಡೆಸಲಿವೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ದೋಹಾದಲ್ಲಿ (Doha) ಮಾತುಕತೆಗಳು ಮುಂದುವರಿಯುತ್ತಿದ್ದಂತೆ ಎರಡೂಕಡೆಯವರು ಮಿಲಿಟರಿ ಕ್ರಮವನ್ನ ಸ್ಥಗಿತಗೊಳಿಸಲು ಒಪ್ಪಿಕೊಂಡಿದ್ದಾರೆ. ಉಭಯ ದೇಶಗಳು ಪರಸ್ಪರ ದಾಳಿ ನಡೆಸದೇ ಶಾಂತವಾಗಿರಲು ಹಾಗೂ ಹಡಗುಗಳ ಮುಕ್ತ ಸಂಚಾರಕ್ಕೆ ಅವಕಾಶ ನೀಡಲು ನಿರ್ಧರಿಸಿವೆ ಎಂದು ಅಮೆರಿಕದ (America) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ; ಕದನ ವಿರಾಮ ಉಲ್ಲಂಘಿಸಿದ್ದಕ್ಕೆ ಅಟ್ಯಾಕ್ – ಇರಾನ್ ಮೇಲೆ ದಾಳಿ ನಡೆಸಿದ ಅಮೆರಿಕ

‘ಶಾಂತಿ ಒಪ್ಪಂದ ಕುರಿತಂತೆ ತಾಂತ್ರಿಕ ಮಾತುಕತೆ ಮುಂದುವರಿದಿದೆ. ಜೂನ್ 17 ರಂದು ತಲುಪಿದ 14 ಅಂಶಗಳ ತಿಳುವಳಿಕೆ ಒಪ್ಪಂದದ (MoU) ಚೌಕಟ್ಟಿನ ಅಡಿಯಲ್ಲಿ ಎರಡೂ ಕಡೆಯ ನಡುವಿನ ತಾಂತ್ರಿಕ ಚರ್ಚೆಗಳು ಮುಂದುವರಿಯಲಿವೆ. ಆದ್ದರಿಂದ ಸದ್ಯದ ಮಟ್ಟಿಗೆ ಉಭಯ ದೇಶಗಳೂ ದಾಳಿಗಳಿಂದ ಹಿಂದೆ ಸರಿಯಲಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳು ಮುಕ್ತವಾಗಿ ಸಂಚರಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆಯ ಮೇರೆಗೆ ಶನಿವಾರ ಮತ್ತು ಭಾನುವಾರ ಇರಾನ್ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿತ್ತು. ಅದಕ್ಕೆ ಪ್ರತಿಕ್ರಿಯಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕೂಡ ಬಹ್ರೇನ್ ಹಾಗೂ ಕುವೈತ್ ಅನ್ನು ಗುರಿಯಾಗಿಸಿ ಡೋನ್ ಮತ್ತು ಕ್ಷಿಪಣಿ ದಾಳಿ ನಡೆಸಿತ್ತು.

ಇರಾನ್ ಪ್ರಬಲ ಎಚ್ಚರಿಕೆ
‘ಅಮೆರಿಕ ತನ್ನ ದಾಳಿಯನ್ನು ಹೀಗೆ ಮುಂದುವರಿಸಿ ಪ್ರಚೋದನೆ ನೀಡುತ್ತಲೇ ಇದ್ದರೆ ಶಾಂತಿ ಮಾತುಕತೆಗೆ ಪೂರ್ಣ ವಿರಾಮ ಹಾಕಬೇಕಾಗುತ್ತದೆ’ ಎಂದು ರೆವಲ್ಯೂಷನರಿ ಗಾರ್ಡ್ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಇರಾನಿನ ಡ್ರೋನ್, ಕ್ಷಿಪಣಿ ನೆಲೆಗಳ ಮೇಲೆ ಅಮೆರಿಕ ಸೇನೆ ದಾಳಿ
ಇರಾನ್‌ನ ಹಸ್ತಕ್ಷೇಪವಿಲ್ಲದ ಹೊರ್ಮುಜ್ ಜಲಸಂಧಿಯನ್ನ ಮುಕ್ತಗೊಳಿಸುವ ಪ್ರಯತ್ನಗಳು ಈ ಘರ್ಷಣೆಗೆ ಕಾರಣವಾಗಿವಾಗಿದೆ. ಮತ್ತೊಂದೆಡೆ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಒಮನ್ ಕರಾವಳಿ ಮೂಲಕ ಪರ್ಯಾಯ ಮಾರ್ಗ ಕಲ್ಪಿಸಿರುವುದು ಇರಾನ್ ಅನ್ನು ಕುಪಿತಗೊಳಿಸಿದೆ. ಹೊಸ ಮಾರ್ಗದಲ್ಲಿ ಸಾಗುವ ಹಡಗುಗಳ ಮೇಲೆ ಇರಾನ್ ಈಗಾಗಲೇ ಎರಡು ಬಾರಿ ದಾಳಿ ಮಾಡಿ ಪ್ರತಿರೋಧ ಒಡ್ಡಿದೆ.
