– ಮತದಾನದ ಹಕ್ಕು ಉಳಿಸಿಕೊಳ್ಳದಿದ್ದರೆ ಸರ್ಕಾರಿ ಸೌಲಭ್ಯ ಪಡೆಯಲು ಕಷ್ಟ
– ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ 49,320 ಸಹಾಯಕ ಕೇಂದ್ರಗಳ ಸ್ಥಾಪನೆ
ಬೆಂಗಳೂರು: ಜೂ. 30ರಿಂದ ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಲಿದ್ದು, ಪ್ರತಿಯೊಬ್ಬ ಮತದಾರರೂ ಬಿಎಲ್ಓಗಳು ನೀಡುವ ಎನ್ಯುಮರೇಶನ್ ಅರ್ಜಿ (ಗಣತಿ ನಮೂನೆ) ತುಂಬಿ, ಮತದಾನದ ಹಕ್ಕು ಉಳಿಸಿಕೊಳ್ಳಿ ಎಂದು ಸಿಎಂ ಡಿ.ಕೆ.ಶಿವಕುಮಾರ್ (D K Shivakumar) ಅವರು ಕರೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗೋಷ್ಠಿ ನಡೆಸಿ ಶಿವಕುಮಾರ್ ಅವರು ಮಾತನಾಡಿದರು. ರಾಜ್ಯದ ಎಲ್ಲಾ ಮತದಾರರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ನೋಂದಣಿ ಮಾಡಿಕೊಳ್ಳಬೇಕು. ಜೂ. 30ರಿಂದ ಜು. 29ರವರೆಗೆ ಚುನಾವಣಾ ಆಯೋಗದಿಂದ ನೇಮಕಗೊಂಡಿರುವ, ಬಿಎಲ್ಓಗಳು ನಿಮ್ಮ ಮನೆಗಳಿಗೆ ಬಂದು ಅರ್ಜಿ ನೀಡಲಿದ್ದಾರೆ. 30 ದಿನಗಳ ಅವಧಿಯಲ್ಲಿ ಕಡ್ಡಾಯವಾಗಿ ಈ ಎನ್ಯುಮರೇಷನ್ ಅರ್ಜಿ ತುಂಬಿ ಅಗತ್ಯ ದಾಖಲೆಗಳು ಹಾಗೂ ಹೊಸ ಫೋಟೋಗಳೊಂದಿಗೆ ಸಲ್ಲಿಕೆ ಮಾಡಬೇಕು. ಇದು ಮತದಾರರ ಕರ್ತವ್ಯವಾಗಿದೆ. ಈ ಅರ್ಜಿ ಸಲ್ಲಿಕೆ ಮಾಡದಿದ್ದರೆ, ಮತದಾನದ ಹಕ್ಕು ಕಳೆದುಕೊಳ್ಳುತ್ತೀರಿ. ಆಗಸ್ಟ್ 5ರಂದು ಕರಡು ಮತಪಟ್ಟಿ ಪ್ರಕಟಿಸಲಾಗುವುದು. ಬಿಎಲ್ಓಗಳು ಮೂರು ಬಾರಿ ನಿಮ್ಮ ಮನೆಗೆ ಬಂದು ಅರ್ಜಿ ನೀಡುತ್ತಾರೆ. ನೀವು ಅರ್ಜಿ ಸ್ವೀಕರಿಸಿ ಸಲ್ಲಿಸದಿದ್ದರೆ ಹಕ್ಕು ಕಳೆದುಕೊಳ್ಳುತ್ತೀರಿ ಎಂದು ಎಚ್ಚರಿಸಿದರು.
ರಾಜಕೀಯ ಪಕ್ಷಗಳಿಂದ ನೇಮಕಗೊಂಡಿರುವ ಬಿಎಲ್ಎಗಳು ಕೂಡ ನಿಮಗೆ ಈ ಅರ್ಜಿ ಸಲ್ಲಿಕೆಯಲ್ಲಿ ನೆರವು ನೀಡಬಹುದು. ಸರ್ಕಾರ ಈಗಾಗಲೇ 5.50 ಕೋಟಿ ಜನರಿಗೆ ಈಗಾಗಲೇ ಜಾತಿ ಪ್ರಮಾಣಪತ್ರ ಅಧಿಕೃತವಾಗಿ ನೀಡಿರುವ ದಾಖಲೆ ನಮ್ಮ ಬಳಿ ಇದೆ. ಇದರಲ್ಲಿ 2,54,95,767 ಹಿಂದುಳಿದ ವರ್ಗದ ಪ್ರಮಾಣಪತ್ರ, 2,94,51,027 ಎಸ್ ಸಿ ಹಾಗೂ ಎಸ್ಟಿ ಪ್ರಮಾಣಪತ್ರ ವಿತರಿಸಲಾಗಿದೆ. ಇವುಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿದೆ ಎಂದು ವಿವರಿಸಿದರು.
ನಿಮ್ಮ ಎಪಿಕ್ ಕಾರ್ಡ್ ಸಂಖ್ಯೆ ಬಳಸಿ ಮಾಹಿತಿ ನೀಡಬಹುದು. ಈ ಸಂದರ್ಭದಲ್ಲಿ ಜನರು 11 ಮಾದರಿಯ ದಾಖಲೆಗಳನ್ನು ಸಲ್ಲಿಕೆ ಮಾಡಲು ಅವಕಾಶವಿದೆ. ಜನನ ಪ್ರಮಾಣಪತ್ರ, ಪಾಸ್ ಪೋರ್ಟ್, ಜಾತಿ ಪ್ರಮಾಣಪತ್ರ, ಅರಣ್ಯ ಹಕ್ಕು ಪತ್ರ, ಸರ್ಕಾರದಿಂದ ವಸತಿ ಅಥವಾ ನಿವೇಶನ ಪಡೆದಿರುವ ದಾಖಲೆ, ಕೇಂದ್ರ ಸರ್ಕಾರದ ಪಿಂಚಣಿ ದಾಖಲೆಗಳನ್ನು ಗುರುತಿನ ಚೀಟಿಯಾಗಿ ಸಲ್ಲಿಕೆ ಮಾಡಬಹುದು ಎಂದು ಮಾಹಿತಿ ನೀಡಿದರು.
49,320 ಸಹಾಯ ಕೇಂದ್ರಗಳನ್ನು ಸ್ಥಾಪನೆ
ಸಾರ್ವಜನಿಕರಿಗೆ ಕಂದಾಯ ಇಲಾಖೆ ವತಿಯಿಂದ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಉಪ ತಹಶೀಲ್ದಾರ್ ಅವರಿಗೆ ಅಧಿಕಾರ ನೀಡಿ ಆದೇಶ ಹೊರಡಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಗಳಲ್ಲಿ, ಸಹಾಯ ಕೇಂದ್ರ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 49,320 ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅಗತ್ಯ ದಾಖಲೆ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ. ಯಾರೆಲ್ಲಾ ಜಾತಿ ಪ್ರಮಾಣಪತ್ರದಲ್ಲಿ ದೂರವಾಣಿ ಸಂಖ್ಯೆ ಸರಿಯಾಗಿ ನೀಡಿದ್ದೀರಿ ಅವರು ವಾಟ್ಸಪ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ವಿವರಿಸಿದರು.
5.50 ಕೋಟಿ ಜನರಿಗೆ ಮನೆ ಮನೆಗೆ ಹೋಗಿ ಸಹಾಯ ಮಾಡಲು ಸರ್ಕಾರ ತೀರ್ಮಾನಿಸಿದೆ. ಪ್ರತಿಯೊಬ್ಬರಿಗೂ ಮತದಾನದ ಹಕ್ಕು ರಕ್ಷಿಸಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ. ಚುನಾವಣಾ ಆಯೋಗ ಈ ಬಗ್ಗೆ ಜಾಹೀರಾತು ನೀಡುತ್ತಿದೆ. ಸರ್ಕಾರ ಕೂಡ ಜನರಿಗೆ ಅಗತ್ಯ ಮಾಹಿತಿ ನೀಡಲು ತೀರ್ಮಾನಿಸಿದೆ ಎಂದರು.
ಮತದಾನದ ಹಕ್ಕು ಕಳೆದುಕೊಂಡರೆ ಸರ್ಕಾರ ಸೌಲಭ್ಯ ಪಡೆಯುವುದು ಕಷ್ಟ
ಮತದಾನದ ಹಕ್ಕು ಕಳೆದುಕೊಳ್ಳುವವರು ಮುಂದೆ ಸರ್ಕಾರದ ಸೌಲಭ್ಯ ಸಿಗುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಪಡಿತರ ಹಂಚಿಕೆಯಲ್ಲಿ ಮತದಾರರಿಗೆ ಮಾತ್ರ ನೀಡಲಾಗುತ್ತಿದೆ. ಇದೇ ರೀತಿ ಬೇರೆ ರಾಜ್ಯಗಳಲ್ಲೂ ಆದೇಶ ಹೊರಡಿಸಲಾಗಿದೆ. ನೀವು ಮುಂದಿನ ದಿನಗಳಲ್ಲಿ ಮತದಾನದ ಹಕ್ಕು ಉಳಿಸಿಕೊಳ್ಳದಿದ್ದರೆ ಗ್ಯಾರಂಟಿ ಯೋಜನೆಗಳು ಸೇರಿದಂತೆ ಪಿಂಚಣಿ ಹಾಗೂ ರಾಜ್ಯ ಸರ್ಕಾರದ ಇತರೆ ಯೋಜನೆಗಳು ಪಡೆಯಲು ತೊಂದರೆ ಆಗಲಿದೆ” ಎಂದರು.
ಮತದಾನದ ಹಕ್ಕು, ಬದುಕಿನ ಹಕ್ಕು
ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಎಲ್ಲಾ ಯೋಜನೆಗಳ ಫಲಾನುಭವಿಗಳ ಮಾಹಿತಿ ಪಡೆಯುವ ಪ್ರಕ್ರಿಯೆ ಸಧ್ಯದಲ್ಲೇ ಆರಂಭಿಸುತ್ತೇವೆ. ನಾವು ತಕ್ಷಣವೇ ಈ ಯೋಜನೆ ನಿಲ್ಲಿಸುವುದಿಲ್ಲ. ಮತದಾನದ ಹಕ್ಕು ನಿಮ್ಮ ಬದುಕಿನ ಹಕ್ಕು. ಹೀಗಾಗಿ ಅದನ್ನು ಉಳಿಸುವುದು ನಮ್ಮ ಗುರಿ. ಈಗ 18 ವರ್ಷ ತುಂಬಿರುವವರು ಚುನಾವಣಾ ಆಯೋಗದ ನಮೂನೆ 6 ಅನ್ನು ವಯೋಮಿತಿ ದೃಢೀಕರಣ ಪತ್ರ ಜೊತೆಗೆ ತುಂಬುವ ಮೂಲಕ ತಮ್ಮ ಮತದಾನದ ಹಕ್ಕು ಪಡೆಯಬಹುದು” ಎಂದರು.
ಪ್ರಶ್ನೋತ್ತರ
ಮನೆ ಇಲ್ಲದೇ ನಿವಾಸ ದೃಢೀಕರಣ ಪ್ರಮಾಣ ಪತ್ರ ಇಲ್ಲದವರ ಬಗ್ಗೆ ಕೇಳಿದಾಗ, ಬಾಡಿಗೆ ಮನೆಯಲ್ಲಿ ಇದ್ದರೆ ಅದಕ್ಕೆ ದಾಖಲೆ ಇರಬೇಕು, ಆಧಾರ್ ಕಾರ್ಡ್, ಆ ಕ್ಷೇತ್ರದಲ್ಲಿ ಮತ ಪಟ್ಟಿಯಲ್ಲಿ ನೀಡಲಾಗಿರುವ ಸಂಖ್ಯೆ ಸೇರಿದಂತೆ ಮೇಲೆ ಹೇಳಲಾದ ಗುರುತಿನ ಚೀಟಿ ಇದ್ದರೆ ಅವರಿಗೆ ಪ್ರಮಾಣಪತ್ರ ನೀಡಲು ಸ್ಥಳೀಯ ಆಡಳಿತಕ್ಕೆ ಅಧಿಕಾರ ನೀಡಲಾಗಿದೆ. ಎಲ್ಲರೂ ಇದನ್ನು ಪಡೆಯಲು ಅವಕಾಶವಿದೆ. ನಮ್ಮ ರಾಜ್ಯದವಾಗಿದ್ದರೆ ಅವರ ಬಳಿ ಈ ದಾಖಲೆಗಳು ಇರುತ್ತವೆ. ಅವರಿಗೆ ಪ್ರಮಾಣಪತ್ರ ನೀಡಲಾಗುವುದು. ಜನರನ್ನು ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಇದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.
ಸರ್ವರ್ ಸಮಸ್ಯೆ ಆಗದಂತೆ ಹೇಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೇಳಿದಾಗ, ಮೊಬೈಲ್ ಗಳಲ್ಲಿ ಲಾಗ್ ಇನ್ ಮಾಡಿಕೊಳ್ಳಲು ಅವಕಾಶವಿದೆ. ಬಿಎಲ್ಓಗಳು ಪ್ರತಿ ನಿತ್ಯ 50 ಅರ್ಜಿಗಳನ್ನು ಮಾತ್ರ ನೀಡಲು ಸಾಧ್ಯ. ಅದಕ್ಕಿಂತ ಹೆಚ್ಚು ಅರ್ಜಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ಈ ಅರ್ಜಿಯನ್ನು ಯಾರು ಬೇಕಾದರೂ ಡೌನ್ಲೋಡ್ ಮಾಡಿ ಅರ್ಜಿ ಹಾಕಬಹುದು. ಮಂಗಳವಾರ ನಾನು ಕೂಡ ಅರ್ಜಿ ತುಂಬುವ ಮೂಲಕ ನನ್ನ ಮನೆಯಿಂದಲೇ ಈ ಪ್ರಕ್ರಿಯೆ ಆರಂಭಿಸುತ್ತೇನೆ ಎಂದು ತಿಳಿಸಿದರು.
ನಿಮ್ಮ ಪಕ್ಷದಿಂದ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಳಿದಾಗ, ರಾಜ್ಯದ ಪ್ರತಿಯೊಬ್ಬ ಜನರ ಮತದಾನದ ಹಕ್ಕು ಉಳಿಸಲು ಸರ್ಕಾರದ ಪರವಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಪಕ್ಷದ ಅಧ್ಯಕ್ಷನಾಗಿದ್ದಾಗ ಏನು ಮಾಡಬೇಕೋ ಮಾಡಿದ್ದೇವೆ. ಬಿಎಲ್ಎ ನೇಮಕ ಮಾಡಿದ್ದೇವೆ. ಎಲ್ಲಾ ಪಕ್ಷದವರು ಬಿಎಲ್ಎ ನೇಮಕ ಮಾಡಿದ್ದಾರೆ. ನಾವು ಎಲ್ಲರಿಗೂ ಅವಕಾಶ ನೀಡಬೇಕು, ಯಾರೂ ಈ ಹಕ್ಕು ಕಳೆದುಕೊಳ್ಳದಂತೆ ಎಚ್ಚರ ವಹಿಸಲು ಕೆಲಸ ಮಾಡುತ್ತಿದ್ದೇವೆ. ಚುನಾವಣಾ ಆಯೋಗದ ಮೇಲೆ ಸರ್ಕಾರಕ್ಕೆ ವಿಶ್ವಾಸ ಇದೆಯೇ ಎಂದು ಕೇಳಿದಾಗ, ಕರ್ನಾಟಕದ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಬಂಗಾಳದಲ್ಲಿ ಮತಗಳು ಡಿಲೀಟ್ ಆದಂತೆ ರಾಜ್ಯದಲ್ಲಿ ಆಗುವುದನ್ನು ತಪ್ಪಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಳಿದಾಗ, ಇದೇ ಕಾರಣಕ್ಕೆ ನಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ನಾವು ಎಚ್ಚರಿಕೆ ವಹಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜನರಿಗೆ ನೆರವು ನೀಡಲು ಸಹಾಯ ಕೇಂದ್ರಗಳು, ಮಾಹಿತಿ ರವಾನೆಗೆ ಜಾಹೀರಾತು ನೀಡಲಾಗುತ್ತಿದೆ. ಇದು ನಿರ್ಣಾಯಕ ಘಟ್ಟವಾಗಿದ್ದು, ಜನರು ಮತದಾನದ ಹಕ್ಕು ಕಳೆದುಕೊಳ್ಳಬಾರದು ಎಂದು ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಎಸ್ಐಆರ್ ವಿರುದ್ಧ ರೈತ ಸಂಘಟನೆಗಳು ನಾಳೆ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಕೇಳಿದಾಗ, ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ. ಈ ಪ್ರಕ್ರಿಯೆ ನಡೆಸಲು ಸಂವಿಧಾನದಲ್ಲಿ ಅಧಿಕಾರ ನೀಡಲಾಗಿದೆ. ಹೀಗಾಗಿ ನಾವು ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.
ಕಾನೂನು ಹೋರಾಟ ಮಾಡುತ್ತೀರಾ ಎಂದು ಕೇಳಿದಾಗ, ನಾವು ಈಗಾಗಲೇ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ನಾನು ಏನು ಮಾಡಬೇಕೋ ಮಾಡಿದ್ದೇವೆ. ನಮ್ಮ ಹೋರಾಟ ಬೇರೆ ವಿಚಾರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ ಎಂದರು.
ಒಂದು ತಿಂಗಳಲ್ಲಿ 5.50 ಕೋಟಿ ಮತದಾರರನ್ನು ತಲುಪಲು ಸಾಧ್ಯವೇ ಎಂದು ಕೇಳಿದಾಗ, ನಾವು 4.50 ಕೋಟಿ ಬಡ ಜನರಿಗೆ ಅನ್ನಭಾಗ್ಯ ಯೋಜನೆ ನೀಡುತ್ತಿದ್ದೇವೆ. ಜಾತಿ ಪ್ರಮಾಣ ಪತ್ರ ಪಡೆದಿರುವವರ ಮಾಹಿತಿ 5.50 ಕೋಟಿ ಇದೆ. ಉಳಿದಂತೆ ಪ್ರಮಾಣಪತ್ರ ಪಡೆಯದೇ ಇರುವವರು ಇದ್ದಾರೆ. ನಮ್ಮ ಮತ ಈಗಾಗಲೇ ಇದೇ ಎಂದು ನಿರ್ಲಕ್ಷ ವಹಿಸಿದರೆ ಮತದಾನದ ಹಕ್ಕು ಕಳೆದುಕೊಳ್ಳುತ್ತೀರಿ. ರಾಜ್ಯದ ಮುಖ್ಯಮಂತ್ರಿಯಾಗಿರುವ ಡಿ ಕೆ ಶಿವಕುಮಾರ್ ಸೇರಿದಂತೆ ಪ್ರತಿಯೊಬ್ಬರೂ ಎನ್ಯೂಮರೇಶನ್ ಅರ್ಜಿ ತುಂಬಿ, ಸಲ್ಲಿಸಬೇಕು. ಆಗಮಾತ್ರ ನನಗೆ ಮತದಾನದ ಹಕ್ಕು ಇರುತ್ತದೆ. ಇಲ್ಲದಿದ್ದರೆ ನನಗೂ ಹಕ್ಕು ಇರುವುದಿಲ್ಲ ಎಂದು ತಿಳಿಸಿದರು.
ಸಂಪುಟ ವಿಸ್ತರಣೆ ವಿಚಾರವಾಗಿ ಜುಲೈ ಮೊದಲ ವಾರದಲ್ಲಿ ದೆಹಲಿಗೆ ಹೋಗುತ್ತೀರಾ ಎಂದು ಕೇಳಿದಾಗ, ಜು.2ರಂದು ಸಚಿವ ಸಂಪುಟ ಸಭೆ ಇದೆ. ಇದಾದ ಬಳಿಕ ಹೋಗಬೇಕು ಎಂದರು.ಇದನ್ನೂ ಓದಿ: ಹೆಂಡತಿ ಜಗಳವಾಡಿ ತವರಿಗೆ ಹೋಗಿದ್ದಕ್ಕೆ ಮೊಬೈಲ್ ಟವರ್ ಏರಿ ಕುಳಿತ ಪತಿ
ಬರ ನಿರ್ವಹಣೆಗೆ ಕೈಗೊಂಡಿರುವ ಬಗ್ಗೆ ಕೇಳಿದಾಗ, ಪ್ರತಿ ಸಚಿವರಿಗೆ ಎರಡು ಮೂರು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದ್ದು, ಅವರು ಆಯಾ ಜಿಲ್ಲೆಗಳಗೆ ಪ್ರವಾಸ ಮಾಡಲಿದ್ದಾರೆ. ಈಗಾಗಲೇ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ಈಗಾಗಲೇ ಮಾವು ಬೆಳೆಗಾರರ ಸಹಾಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅವರು ಕೂಡ ಬರೆದಿದ್ದಾರೆ. ಕಳೆದ ವರ್ಷದಂತೆ ಈ ವರ್ಷ ಕೂಡ ನೆರವು ನೀಡಲಾಗುವುದು. ಕಳೆದ ವರ್ಷದ ಬೆಂಬಲ ಬೆಲೆ ಮುಂದುವರಿಸಲಾಗುವುದು ಎಂದು ತಿಳಿಸಿದರು.
ನೀರಿನ ಸಮಸ್ಯೆ ಎದುರಾಗಿರುವ ಬಗ್ಗೆ ಕೇಳಿದಾಗ, ಇದನ್ನು ನಿರ್ವಹಣೆ ಮಾಡಲು ಜಿಲ್ಲಾಧಿಕಾರಿಗಳಿಗೆ ಹಣ ನೀಡಲಾಗಿದೆ. ಇಡೀ ದೇಶಕ್ಕೆ ಮಳೆ ತೊಂದರೆ ಎದುರಾಗಿದೆ ಎಂದರು.ಇದನ್ನೂ ಓದಿ: ಬೆಂಗಳೂರಿನಲ್ಲಿ ಸುರಂಗ ರಸ್ತೆ ಪ್ರಶ್ನಿಸಿ ಪಿಐಎಲ್ ಸಲ್ಲಿಕೆ
