ಗದಗ: ಗಂಡ-ಹೆಂಡತಿ ಜಗಳ ಕೆಲವೊಮ್ಮೆ ದೊಡ್ಡ ಅವಾಂತರಕ್ಕೂ ಕಾರಣವಾಗುತ್ತದೆ. ಗದಗ (Gadag) ಜಿಲ್ಲೆಯಲ್ಲಿ ಪತ್ನಿ ತವರು ಮನೆಗೆ ಹೋಗಿದ್ದಕ್ಕೆ ಮನನೊಂದು ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಮೊಬೈಲ್ ಟವರ್(Mobile Tower) ಏರಿ ಕುಳಿತ ಘಟನೆ ನಡೆದಿದೆ.
ಗದಗ ಜಿಲ್ಲೆಯ ಮುಂಡರಗಿ (Mudaragi)ತಾಲೂಕಿನ ಕೋರ್ಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಜೀರ್ ಸಾಬ್ ಟವರ್ ಏರಿದ ವ್ಯಕ್ತಿ. ನಜೀರ್ ಸಾಬ್ ಮತ್ತು ಅವರ ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು. ಈ ಬಾರಿಯೂ ಜಗಳವಾದ ಬಳಿಕ ಪತ್ನಿ ತವರು ಮನೆಗೆ ಹೋಗಿದ್ದಳು.
ಪತ್ನಿಯನ್ನು ಕರೆದುಕೊಂಡು ಬರಲು ನಜೀರ್ ಸಾಬ್ ತವರು ಮನೆಗೆ ತೆರಳಿದ್ದ. ಆದರೆ ಅಲ್ಲಿ ಮನೆಯವರು ಅವನನ್ನು ಬೈದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಮನನೊಂದ ನಜೀರ್ ಸಾಬ್, ಮದ್ಯದ ಅಮಲಿನಲ್ಲೇ ಗ್ರಾಮದ ಮೊಬೈಲ್ ಟವರ್ ಏರಿದ್ದಾನೆ. ನನ್ನ ಪತ್ನಿಯನ್ನು ತವರು ಮನೆಯಿಂದ ಕರೆದುಕೊಂಡು ಬರುವವರೆಗೆ ನಾನು ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇದನ್ನೂ ಓದಿ: ಮಹಾತ್ಮಾ ಗಾಂಧಿ ವಿಬಿ ಜಿ ರಾಮ್ ಜಿ ಹೆಸರಿಡಲು ಕೇಂದ್ರಕ್ಕೆ ಈಶ್ವರ ಖಂಡ್ರೆ ಆಗ್ರಹ
ಗ್ರಾಮಸ್ಥರ ಸಹಾಯದಿಂದ ನಜೀರ್ ಸಾಬ್ ಅವರನ್ನು ಮನವೊಲಿಸುವ ಪ್ರಯತ್ನ ನಡೆಸಿದರು. ಸಾಕಷ್ಟು ಸಮಯದ ಮನವೊಲಿಕೆಯ ಬಳಿಕ ನಜೀರ್ ಸಾಬ್ ಟವರ್‌ನಿಂದ ಸುರಕ್ಷಿತವಾಗಿ ಕೆಳಗೆ ಇಳಿದ. ಬಳಿಕ ಆತನನ್ನು ಮುಂಡರಗಿ ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು, ಗಂಡ-ಹೆಂಡತಿ ಜಗಳವನ್ನು ಬೀದಿರಂಪ ಮಾಡಬಾರದು ಎಂದು ತಿಳಿವಳಿಕೆ ನೀಡಿ ಬುದ್ಧಿಮಾತು ಹೇಳಿ ಕಳುಹಿಸಿದ್ದಾರೆ. ಘಟನೆ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಇದನ್ನೂ ಓದಿ: ಚಿಕ್ಕಬಳ್ಳಾಪುರ ಹೋಂ ಸ್ಟೇನಲ್ಲಿ ಬೆಂಗಳೂರಿನ ಯುವತಿ ಸಾವು: ಇದು ಲವ್ ಜಿಹಾದ್ ಕೊಲೆ ಎಂದ ತಾಯಿ
