ಬೆಂಗಳೂರು: ಭಾರತದ ಚುನಾವಣಾ ಆಯೋಗವು (Election Commission of India) ರಾಜ್ಯದಲ್ಲಿ ಇಂದಿನಿಂದ 1 ತಿಂಗಳ ಕಾಲ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮಾಡಲಿದೆ. ಈಗಾಗಲೇ ಮ್ಯಾಪಿಂಗ್ ಮುಕ್ತಾಯವಾಗಿದ್ದು, ಚುನಾವಣಾಧಿಕಾರಿಗಳು, ಬಿಎಲ್‌ಓಗಳು ಮನೆ ಮನೆಗೆ ಭೇಟಿ ಕೊಡಲಿದ್ದಾರೆ.
ಕರ್ನಾಟಕದಲ್ಲಿ (Karnataka) 91.61% ಮ್ಯಾಪಿಂಗ್ ಆಗಿದ್ದು, 5,54,32,314 ಮತದಾರರ ಪೈಕಿ 5,07,79,810 ಮತದಾರರ ಮ್ಯಾಪಿಂಗ್ ನಡೆದಿದೆ. 46,52,504 ಮತದಾರರು ಮ್ಯಾಪಿಂಗ್ ಆಗಬೇಕಿದೆ. ಈ 5.55 ಕೋಟಿ ಮತದಾರರ ಪೈಕಿ ಅಸಲಿ ಯಾರು? ನಕಲಿ ಯಾರು? ಎನ್ನುವುದನ್ನು ಪರಿಶೀಲಿಸಲಾಗುತ್ತದೆ.
ನಕಲಿ, ಅನರ್ಹ ಮತದಾರರನ್ನು ಜರಡಿ ಹಿಡಿದು ಪಟ್ಟಿಯಿಂದ ಡಿಲೀಟ್ ಮಾಡಲಿದೆ. ಮತದಾರರು ಅರ್ಜಿಯನ್ನ ತುಂಬಿ ಅರ್ಜಿಗೆ ಸಹಿ ಮಾಡಿ ಕೆಲವು ದಾಖಲೆಗಳನ್ನು ಸಲ್ಲಿಕೆ ಮಾಡಬೇಕಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಪರಿಶೀಲನೆ, ತಿದ್ದುಪಡಿ, ಹೊಸ ಹೆಸರು ಸೇರ್ಪಡೆ ಮೃತಪಟ್ಟವರು, ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಿದ್ದಾರೆ.
ಬಿಎಲ್‌ಓಗಳು ಮನೆಗೆ ಭೇಟಿ ನೀಡಿ ಎಸ್‌ಐಆರ್ ಅರ್ಜಿ ನೀಡಲಿದ್ದಾರೆ. ಎಸ್‌ಐಆರ್ ಅರ್ಜಿಗೆ ಮಾಹಿತಿ ನೀಡಿ ಮತದಾರರು ಸಹಿ ಮಾಡಬೇಕು. ಎಸ್‌ಐಆರ್‌ನಲ್ಲಿ ಭಾಗಿಯಾಗಿ ಮಾಹಿತಿ ನೀಡಿದರೆ ಮಾತ್ರ ಮತದಾನದ ಹಕ್ಕು, ಇಲ್ಲದೇ ಹೋದರೆ ಮತದಾನದಿಂದ ವಂಚಿತರಾಗುವ ಸಾಧ್ಯತೆ ಇದೆ. ಅಕ್ಟೋಬರ್ 7, 2026ಕ್ಕೆ 18 ತುಂಬುವ ಯುವ ಮತದಾರರು ಅರ್ಜಿ ಹಾಕಬಹುದಾಗಿದೆ. ರಾಜ್ಯ ಚುನಾವಣಾ ಆಯೋಗ, ಜಿಬಿಎ ಹಾಗೂ ಜಿಲ್ಲಾಡಳಿತಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ಇದನ್ನೂ ಓದಿ: ಪತಿಗಿಂತ ಹೆಚ್ಚು ದುಡಿಯುವ ಪತ್ನಿಗೆ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್
ಯಾವ ದಿನ ಏನು?
* ಇಂದಿನಿಂದ ಜುಲೈ 29ರವರೆಗೆ ಬಿಎಲ್‌ಓಗಳಿಂದ ಮನೆ ಮನೆ ಭೇಟಿ
* ಮತಗಟ್ಟೆಗಳ ತಾರ್ಕಿಕ ಮರು ಹೊಂದಾಣಿಕೆ ವಿಂಗಡಣೆ- ಜುಲೈ 29 ರ ಒಳಗೆ
* ಕರಡು ಮತದಾರರ ಪಟ್ಟಿ ಪ್ರಕಟ- ಆಗಸ್ಟ್ 5
* ಆಕ್ಷೇಪಣೆ ಸಲ್ಲಿಕೆಗೆ ಅವಕಾಶ – ಆಗಸ್ಟ್ 5 ರಿಂದ ಸೆಪ್ಟೆಂಬರ್ 4ರವರೆಗೆ.
* ನೋಟಿಸ್ ಹಂತ, ಹಕ್ಕು & ಆಕ್ಷೇಪಣೆ ವಿಲೇವಾರಿ – ಆಗಸ್ಟ್ 5 ರಿಂದ ಅಕ್ಟೋಬರ್ 3
* ಅಂತಿಮ ಮತದಾರರ ಪಟ್ಟಿ ಪ್ರಕಟ- ಅಕ್ಟೋಬರ್ 10
* ಎಲ್ಲಾ ಮಾಹಿತಿ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯ
ಮತದಾರರು ಯಾವ ದಾಖಲೆ ಇಟ್ಟುಕೊಳ್ಳಬೇಕು?
1. ಕುಟುಂಬದವರ ಗುರುತಿನ ಚೀಟಿ
2. ವೋಟರ್ ಐಡಿ
3. ಆಧಾರ್ ಕಾರ್ಡ್
4. ವಿಳಾಸ ದೃಢಿಕರಣ ಪತ್ರ
5. ಪಾಸ್‌ಪೋರ್ಟ್ ಸೈಜ್ ಫೋಟೋ
