– ಇಬ್ಬರು ಸ್ಕ್ರೀನಿಂಗ್ ಸಿಬ್ಬಂದಿಗೆ ಗಾಯ
ಲಕ್ನೋ: ಮುಂಬೈಗೆ ತೆರಳುತ್ತಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನ (ಸಂಖ್ಯೆ IX-1810) ಹತ್ತುವಾಗ ಶಸ್ತ್ರಾಸ್ತ್ರ ತಪಾಸಣೆ ನಡೆಸುವ ವೇಳೆ ಪ್ರಯಾಣಿಕನೊಬ್ಬ ಏಕಾಏಕಿ ಗುಂಡು ಹಾರಿಸಿರುವ ಘಟನೆ ವಾರಣಾಸಿ ಏರ್‌ಪೋರ್ಟ್‌ನಲ್ಲಿ (Varanasi Airport ) ನಡೆದಿದೆ.

ಇಂದು ಬೆಳಗ್ಗೆ 9:30 ರ ಸುಮಾರಿಗೆ ಘಟನೆ ನಡೆದಿದೆ. ತನ್ನ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಶಸ್ತ್ರಾಸ್ತ್ರ ತಪಾಸಣೆ ವೇಳೆ ಏಕಾಏಕಿ ಗುಂಡು ಹಾರಿಸಿದ್ದಾನೆ. ಈ ವೇಳೆ ತಪಾಸಣೆ ನಡೆಸುತ್ತಿದ್ದ ಇಬ್ಬರು AAICLAS ಸ್ಕ್ರೀನಿಂಗ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಆಗಿದ್ದೇನು?
ಪ್ರಯಾಣಿಕನು ತನ್ನ ಬಳಿ ಶಸ್ತ್ರಾಸ್ತ್ರ ಇರುವುದಾಗಿ ಹೇಳಿಕೊಂಡಿದ್ದಾನೆ. ಬಳಿಕ ಏರ್ ಇಂಡಿಯಾ ಸಿಬ್ಬಂದಿ ತಪಾಸಣೆ ನಡೆಸಲು ಶುರು ಮಾಡಿದ್ದಾರೆ. ಈ ವೇಳೆ ಗನ್ ತೆಗೆದ ಪ್ರಯಾಣಿಕ ಒಂದು ಸುತ್ತು ಗುಂಡು ಹಾರಿಸಿದ್ದಾನೆ. ಇದರಿಂದ ಇಬ್ಬರು AAICLAS ಸ್ಕ್ರೀನಿಂಗ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರಿಬ್ಬರನ್ನೂ ಚಿಕಿತ್ಸೆಗಾಗಿ ನ್ಯೂ ಲಕ್ಷ್ಮಿ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಘಟನೆ ಬಳಿಕ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.
