ಗದಗ: ಛತ್ತೀಸ್‌ಗಢ(Chhattisgarh) ರಾಜ್ಯದ ಶಾಲಾ ಶಿಕ್ಷಣ, ಗ್ರಾಮೋದ್ಯಮ, ಕಾನೂನು ಹಾಗೂ ಶಾಸನ ವ್ಯವಹಾರಗಳ ಸಚಿವರಾದ ಗಜೇಂದ್ರ ಯಾದವ್(Gajendra Yadav) ಅವರು ಇಂದು ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ(Lakkundi) ಕ್ಷೇತ್ರಕ್ಕೆ ಭೇಟಿ ನೀಡಿದರು. ಅಲ್ಲಿನ ಪುರಾತನ ದೇವಾಲಯಗಳು ಹಾಗೂ ಪಾರಂಪರಿಕ ಸ್ಮಾರಕಗಳನ್ನು ಅವರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಲಕ್ಕುಂಡಿ ದೇಶದಲ್ಲೇ ವಿಶಿಷ್ಟವಾದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ತಾಣವಾಗಿದೆ. ಭಗವಾನ್ ಮಹಾದೇವರ ವಿವಿಧ ಸ್ವರೂಪಗಳನ್ನು ಪ್ರತಿಬಿಂಬಿಸುವ ಅನೇಕ ದೇವಾಲಯಗಳು ಹಾಗೂ ಶಿಲ್ಪಕಲಾ ವೈಭವವನ್ನು ಇದು ಹೊಂದಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಲಕ್ಕುಂಡಿಯಲ್ಲಿರುವ 11 ಹಾಗೂ 12ನೇ ಶತಮಾನಗಳ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸಂಪತ್ತನ್ನು ಪುರಾತತ್ವ ಇಲಾಖೆಯು ಸಂರಕ್ಷಿಸಿ ಉಳಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಅಪರೂಪದ ಪರಂಪರೆಯ ತಾಣಗಳು ದೇಶದಾದ್ಯಂತ ಹೆಚ್ಚಿನ ಪ್ರಚಾರ ಪಡೆಯಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಸಂಬಂಧಿತ ಸಚಿವರೊಂದಿಗೆ ಚರ್ಚಿಸಿ, ಲಕ್ಕುಂಡಿಯ ಮಹತ್ವವನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಲು ಪ್ರಯತ್ನಿಸುವುದಾಗಿ” ತಿಳಿಸಿದರು.

ಭೇಟಿಯ ಸಂದರ್ಭದಲ್ಲಿ ತಮ್ಮನ್ನು ಆತ್ಮೀಯವಾಗಿ ದೂರವಾಣಿ ಮೂಲಕ ಸ್ವಾಗತಿಸಿದ ಮಾಜಿ ಸಚಿವ ಹೆಚ್.ಕೆ. ಪಾಟೀಲ್(HK Patil), ಜಿಲ್ಲಾಡಳಿತ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.
“ನಾನು ಗದಗ ಜಿಲ್ಲೆಯ ಲಕ್ಕುಂಡಿಗೆ ಬಂದಿರುವುದು ನನ್ನ ಸೌಭಾಗ್ಯವಾಗಿದೆ. ಇದು ಒಂದು ಅದ್ಭುತ ನಗರವಾಗಿದ್ದು, ಇಲ್ಲಿ ಭಗವಾನ್ ಮಹಾದೇವರ ವಿವಿಧ ಸ್ವರೂಪಗಳು ಕಂಡುಬರುತ್ತವೆ. ನೂರಾರು ಸಂಖ್ಯೆಯಲ್ಲಿ ಶಿವಲಿಂಗಗಳು ಮತ್ತು ದೇವಾಲಯಗಳ ರೂಪದಲ್ಲಿ ಅವು ಇಲ್ಲಿ ನೆಲೆಸಿವೆ. ಈ ಸಂದರ್ಭದಲ್ಲಿ ಇಲ್ಲಿನ ಶಾಸಕರಾದ ಸಿ.ಸಿ. ಪಾಟೀಲ್ ಹಾಗೂ ಹೆಚ್.ಕೆ. ಪಾಟೀಲ್ ಅವರು ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ಅವರೊಂದಿಗೆ ಚರ್ಚೆ ನಡೆಸಿದೆ” ಎಂದರು.

ಅಧಿಕಾರಿಗಳ ಉಪಸ್ಥಿತಿ:
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್.ಎಸ್. ಬುರಡಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ. ಶರಣು ಗೋಗೇರಿ, ಗದಗ ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ್ವರ ವಿಭೂತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
